
ಜಗಳೂರು: ರಾಜ್ಯ ಹೆದ್ದಾರಿ ನಿಯಮದಂತೆ ಪಟ್ಟಣದ ಮಧ್ಯ ಹಾದು ಹೋಗುವ ಮಲ್ಪೆ–ಮೊಳಕಾಲ್ಮುರು ಹೆದ್ದಾರಿಯ ಇಕ್ಕೆಲಗಳಲ್ಲಿ ರಸ್ತೆ ಮಧ್ಯಭಾಗದಿಂದ 69 ಅಡಿ ವಿಸ್ತರಣೆ ಮಾಡಲಾಗುವುದು ಎಂದು ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಹೇಳಿದರು.
ಪಟ್ಟಣದಲ್ಲಿ ಬುಧವಾರ ರಸ್ತೆ ವಿಸ್ತರಣಾ ಕಾರ್ಯದ ಮಾರ್ಕಿಂಗ್ ಪರಿಶೀಲನೆ ನಡೆಸಿ ಮಾತನಾಡಿದರು.
ಪಟ್ಟಣದ ಹೃದಯ ಭಾಗದ ರಸ್ತೆ ಕಿರಿದಾಗಿದ್ದು, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಈಗಾಗಲೇ ಎರಡು ಬಾರಿ ಸರ್ವೇ ನಡೆಸಲಾಗಿದೆ. ಕೆಲವು ಕಟ್ಟಡದ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯದ ಆದೇಶದಂತೆ ಸಮರ್ಪಕವಾದ ಕಟ್ಟಡದ ದಾಖಲೆ ಇದ್ದಲ್ಲಿ ಅವರಿಗೆ ಪರಿಹಾರ ಕೊಟ್ಟು ತೆರವು ಮಾಡುವಂತೆ ಸೂಚನೆ ನೀಡಲಾಗುವುದು ಎಂದರು.
ರಸ್ತೆಯ ಪಕ್ಕದಲ್ಲಿ ಅಧಿಕೃತವಾಗಿ ಕಟ್ಟಿರುವ ಕಟ್ಟಡಗಳನ್ನು ತೆರವು ಮಾಡುವಂತೆ ಪಟ್ಟಣ ಪಂಚಾಯಿತಿಯಿಂದ ನೋಟಿಸ್ ಜಾರಿ ಮಾಡಲಾಗಿದೆ. ಪ್ರಾರಂಭದಲ್ಲಿ ಸ್ವಯಂ ಪ್ರೇರಿತರಾಗಿ ಕಟ್ಟಡಗಳನ್ನು ತೆರವುಗೊಳಿಸಿಕೊಂಡಿದ್ದ ಕೆಲ ಮಾಲೀಕರು ಈಗ ಮರು ನಿರ್ಮಾಣದಲ್ಲಿ ಮುಂದಾಗಿರುವುದು ಗಮನಕ್ಕೆ ಬಂದಿದ್ದು, ಯಾವುದೇ ಮುಲಾಜಿಲ್ಲದೆ ತೆರವು ಮಾಡಲಾಗುವುದು ಎಂದು ತಿಳಿಸಿದರು.
ಈ ಬಗ್ಗೆ ಲೋಕೋಪಯೋಗಿ ಇಲಾಖೆ, ಪಟ್ಟಣ ಪಂಚಾಯಿತಿ, ಕಂದಾಯ ಇಲಾಖೆ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದು ತಿಳಿಸಿದರು.
ತಹಶೀಲ್ದಾರ್ ಸೈಯದ್‌ಕಲೀಂ ಉಲ್ಲಾ , ಆರ್.ಐ. ಕೀರ್ತಾಂಜನೇಯ, ಪಟ್ಟಣ ಪಂಚಾಯಿತಿ ಆರ್.ಐ. ಮೋಹಿದ್ದೀನ್, ಪುರುಷೋತ್ತಮರೆಡ್ಡಿ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.