
ದಾವಣಗೆರೆಯ ಹೊರವಲಯದಲ್ಲಿದ್ದ ಆಂಜನೇಯ ಕಾಟನ್ ಮಿಲ್‌ನಲ್ಲಿ ಕಾರ್ಮಿಕರು ಉತ್ಪಾದನೆ ಮಾಡುತ್ತಿದ್ದ ನೂಲು
ಪ್ರಜಾವಾಣಿ ಸಂಗ್ರಹ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆ: ಅದು 1970ರ ದಶಕ; ‘ಸೈರನ್’ ಮೊಳಗುತ್ತಿದ್ದಂತೆ ಸಮವಸ್ತ್ರ ಧರಿಸಿದ ಸಾವಿರಾರು ಕಾರ್ಮಿಕರು ಹತ್ತಿ ಗಿರಣಿಗಳಿಂದ ಹೊರಬಂದರು. ಒಬ್ಬೊಬ್ಬರಾಗಿ ಬೀದಿಯಲ್ಲಿ ಹೆಜ್ಜೆ ಹಾಕತೊಡಗಿದರೆ ತೊರೆಗಳು ಹಳ್ಳವಾಗಿ, ನದಿಯಾಗಿ ಮೈದುಂಬಿದಂತೆ ಭಾಸವಾಗುತ್ತಿತ್ತು. ಅರ್ಧ ಶತಮಾನ ಕಾರ್ಮಿಕರಿಗೆ ಬದುಕು ಕೊಟ್ಟಿದ್ದ ಕಾಟನ್ ಮಿಲ್‌ಗಳು ಈಗ ನೆನಪು ಮಾತ್ರ. ‘ಕರ್ನಾಟಕದ ಮ್ಯಾಂಚೆಸ್ಟರ್’ ಕನವರಿಕೆಯಷ್ಟೇ.
‘ಮ್ಯಾಂಚೆಸ್ಟರ್’ ಖ್ಯಾತಿ ತಂದುಕೊಟ್ಟ ಹತ್ತಿ ಗಿರಣಿಗಳು ದಾವಣಗೆರೆಯಲ್ಲಿ ಜೀವ ಕಳೆದುಕೊಂಡಿವೆ. ಈ ಗಿರಣಿಗಳಿದ್ದ ಸ್ಥಳಗಳು ಸ್ವರೂಪ ಬದಲಿಸಿವೆ. ಸಾವಿರಾರು ಕಾರ್ಮಿಕ ಕುಟುಂಬಗಳಿಗೆ ಆಶ್ರಯ ನೀಡಿದ್ದವೇ ಎಂಬ ಅನುಮಾನ ವ್ಯಕ್ತವಾಗುವಷ್ಟು ದಾವಣಗೆರೆ ಬದಲಾಗಿದೆ.
40 ವರ್ಷಗಳ ಹಿಂದೆ ದಾವಣಗೆರೆಯಲ್ಲಿ 10ಕ್ಕೂ ಹೆಚ್ಚು ಕಾಟನ್ ಮಿಲ್‌ಗಳಿದ್ದವು. ಒಂದು ಮಾತ್ರ ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಉಳಿದವು ಖಾಸಗಿ ಒಡತನದಲ್ಲಿದ್ದವು. 10 ಸಾವಿರಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ‘ದಾವಣಗೆರೆ ಕಾಟನ್ ಮಿಲ್’ (ಡಿಸಿಎಂ) ಒಂದರಲ್ಲೇ ಎರಡೂವರೆ ಸಾವಿರಕ್ಕೂ ಅಧಿಕ ಕಾರ್ಮಿಕರಿದ್ದರು. ಹತ್ತಿ ಗಿರಣಿಗಳ ಕೊನೆಯ ಕೊಂಡಿಯಂತಿದ್ದ ‘ಆಂಜನೇಯ ಕಾಟನ್ ಮಿಲ್’ 2024ರ ಏಪ್ರಿಲ್‌ನಲ್ಲಿ ಬಾಗಿಲು ಮುಚ್ಚಿತು.
ಕಾಟನ್ ಮಿಲ್‌ಗಳಿಗೂ ದಾವಣಗೆರೆಗೂ ಸಂಬಂಧ ಬೆಸೆದಿದ್ದು ಹತ್ತಿ. ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಲ್ಲಿ ಬೆಳೆಯುತ್ತಿದ್ದ ಹತ್ತಿ ಬೆಳೆ ಜಿನ್‌ಗಳ ಆರಂಭಕ್ಕೆ ಪ್ರೇರಣೆಯಾಯಿತು. ದಾವಣಗೆರೆ, ಹಾವೇರಿ, ಗದಗ, ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬೆಳೆಯುತ್ತಿದ್ದ ಹತ್ತಿಯನ್ನು ಮೌಲ್ಯವರ್ಧನೆ ಮಾಡುವ ಉದ್ದೇಶದಿಂದ ಮೊದಲ ಹತ್ತಿ ಗಿರಣಿಯಾಗಿ ‘ದಾವಣಗೆರೆ ಕಾಟನ್ ಮಿಲ್ (ಡಿಸಿಎಂ)’ 1936ರಲ್ಲಿ ಸ್ಥಾಪನೆಯಾಯಿತು. ರಾಜನಹಳ್ಳಿ ಹನುಮಂತಪ್ಪ ಈ ಕಾರ್ಖಾನೆ ಕಾರ್ಯರಂಭ ಮಾಡಿದ ಬಳಿಕ ದಾವಣಗೆರೆಯ ದಿಕ್ಕು ಬದಲಾಯಿತು.
ಇದರಿಂದ ಸ್ಫೂರ್ತಿಗೊಂಡ ಅನೇಕರು ಕಾಟನ್ ಮಿಲ್‌ಗಳತ್ತ ಒಲವು ತೋರಿದರು. ಚಿಗಟೇರಿ ಕುಟುಂಬ ಚಿಗಟೇರಿ ಮಿಲ್ ಮತ್ತು ಶಂಕರ ಮಿಲ್ ಆರಂಭಿಸಿತು. 1950ರ ದಶಕದಲ್ಲಿ ಗಣೇಶ ಮಿಲ್, ಸಿದ್ದೇಶ್ವರ ಮಿಲ್‌ಗಳನ್ನು ಗುಂಡಿ ಮಹದೇವಪ್ಪ ಸ್ಥಾಪಿಸಿದರು. ಅಂಬರ್‌ಕರ್ ಕುಟುಂಬ ಯಲ್ಲಮ್ಮ ಟೆಕ್ಸ್‌ಟೈಲ್ಸ್ ಆರಂಭಿಸಿತು. ಮಲ್ಲಾಡಿಹಳ್ಳಿಯ ತಿಮ್ಮಪ್ಪ 1965ರಲ್ಲಿ ‘ಆಂಜನೇಯ ಕಾಟನ್ ಮಿಲ್’ ಆರಂಭಿಸಿದ್ದರು. ಇವೆಲ್ಲವೂ ಇತಿಹಾಸದ ಪುಟ ಸೇರಿವೆ.
ಪ್ರಸ್ತುತ ದಾವಣಗೆರೆ ಕಾಟನ್ ಮಿಲ್, ಗಣೇಶ ಮಿಲ್‌ಗಳಿದ್ದ ಸ್ಥಳ ಬಡಾವಣೆಗಳಾಗಿ ಬದಲಾಗಿವೆ. ಹತ್ತಿ ಗಿರಣಿಗಳಿದ್ದ ಸ್ಥಳದಲ್ಲಿ ಕಟ್ಟಡಗಳು ಮೈದಳೆದಿವೆ. ಚಿಗಟೇರಿ ಮಿಲ್ ಜಾಗದಲ್ಲಿ ಬಾಪೂಜಿ ಸ್ಕೂಲ್ ಆಫ್ ನರ್ಸಿಂಗ್, ಚಂದ್ರೋದಯ ಮಿಲ್ ಸ್ಥಳದಲ್ಲಿ ಚೈತನ್ಯ ಟೆಕ್ನೊ ಸ್ಕೂಲ್ ನಿರ್ಮಾಣವಾಗಿದೆ. ಸಿದ್ದೇಶ್ವರ ಮಿಲ್ ಒಡೆದು ಹಾಕಲಾಗಿದೆ. ಇತ್ತೀಚಿನವರೆಗೆ ಕಾರ್ಯನಿರ್ವಹಿಸಿದ ಆಂಜನೇಯ ಮಿಲ್ ಕಟ್ಟಡ ಮಾತ್ರ ಹಾಗೇಯೇ ಇದೆ.
ದಾವಣಗೆರೆಯಲ್ಲಿ ತಯಾರಾಗುತ್ತಿದ್ದ ಬಟ್ಟೆ, ನೂಲಿಗೆ ದೇಶ – ವಿದೇಶದಲ್ಲಿ ಬೇಡಿಕೆ ಇತ್ತು. ಬ್ರಿಟಿಷರು ಭಾರತ ಬಿಟ್ಟು ತೆರಳಿದರೂ ದಾವಣಗೆರೆಯ ಬಟ್ಟೆಗಳನ್ನು ಅಪಾರವಾಗಿ ಇಷ್ಟಪಡುತ್ತಿದ್ದರು. ವಿದೇಶಗಳಿಗೆ ರಫ್ತಾಗುತ್ತಿದ್ದ ಬಟ್ಟೆಯಲ್ಲಿ ಇಂಗ್ಲೆಂಡ್ ಸೇರುತ್ತಿದ್ದ ಪ್ರಮಾಣ ಹೆಚ್ಚಿತ್ತು.
ಸ್ಪಿನ್ನಿಂಗ್, ವೀವಿಂಗ್, ಫ್ಯಾಬ್ರಿಕ್ ಪ್ರೊಸೆಸಿಂಗ್ ಘಟಕಗಳು ‘ದಾವಣಗೆರೆ ಕಾಟನ್ ಮಿಲ್‌ನಲ್ಲಿದ್ದವು. ಇಲ್ಲಿನ ಡಿವಿಜಿ–99 ಲಾಂಗ್ ಕ್ಲಾತ್, ಅಂಗಿ ಹಾಗೂ ಪಾಪ್ಲಿನ್ ಬಟ್ಟೆ ಖ್ಯಾತಿ ಗಳಿಸಿದ್ದವು. ಹಸಿರು ಬಣ್ಣದ ವಸ್ತ್ರಕ್ಕೆ ವಿದೇಶದಲ್ಲಿ ಉತ್ತಮ ಬೇಡಿಕೆ ಇತ್ತು. ಆ ಗುಣಮಟ್ಟದ ಬಟ್ಟೆಗಳು ಇನ್ನೆಲ್ಲೂ ಸಿಗುತ್ತಿರಲಿಲ್ಲ.
ಬೆಳಗಾವಿ, ಬಳ್ಳಾರಿ ಹಾಗೂ ಆಂಧ್ರಪ್ರದೇಶದಿಂದಲೂ ಇಲ್ಲಿಗೆ ಹತ್ತಿ ಬರುತ್ತಿತ್ತು. ಎಂಸಿ–5, ಬನ್ನಿ, ಎಂಇಸಿಎಚ್, ಬ್ರಹ್ಮ ತಳಿಯ ಹತ್ತಿಯು ಬಟ್ಟೆಯ ಗುಣಮಟ್ಟವನ್ನು ಕಾಪಾಡಿಕೊಳ್ಳಲು ನೆರವಾದವು. ‘ಆಂಜನೇಯ ಮಿಲ್‌ನ’ ಅತ್ಯಾಧುನಿಕ, ಸ್ವಯಂಚಾಲಿತ ಯಂತ್ರಗಳಿಂದ ಗುಣಮಟ್ಟದ ದಾರ ತೆಗೆದು ‘ಸ್ಟೀಮ್’ ಯಂತ್ರದ ಮೂಲಕ ಹುರಿಗೊಳಿಸಲಾಗುತ್ತಿತ್ತು. ಇಲ್ಲಿನ ಲಿನೆನ್, ಕಾಟನ್ ದಾರ, ಕಾಟನ್ ಲಿನೆನ್, ವಿಸ್ಕೋಸ್ ಲಿನೆನ್ ದಾರವು ದೆಹಲಿ, ಪಂಜಾಬ್, ಪಶ್ಚಿಮ ಬಂಗಾಳ, ತಮಿಳುನಾಡು ಸೇರಿ ಹಲವು ರಾಜ್ಯಗಳಿಗೆ ಸಾಗುತ್ತಿತ್ತು.
ಮಿಲ್‌ಗಳ ಸಂಖ್ಯೆ ಹೆಚ್ಚಾದಂತೆ ಕಾರ್ಮಿಕರ ಸಂಖ್ಯೆ ಏರತೊಡಗಿತು. ಉದ್ಯೋಗ ಅರಸಿ ಮಧ್ಯ ಕರ್ನಾಟಕದ ಹಲವರು ದಾವಣಗೆರೆಯತ್ತ ಮುಖ ಮಾಡಿದರು. ನಗರವು ಬೃಹದಾಕಾರವಾಗಿ ಬೆಳೆಯಿತು. ದಾವಣಗೆರೆಯು ಚಿತ್ರದುರ್ಗ ಜಿಲ್ಲೆಯ ಭಾಗವಾಗಿದ್ದರೂ ವಾಣಿಜ್ಯೋದ್ಯಮದಲ್ಲಿ ದೇಶದಲ್ಲಿಯೇ ಖ್ಯಾತಿ ಗಳಿಸಿತ್ತು.
ಹತ್ತಿ ಗಿರಣಿಗಳು ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಕರ್ನಾಟಕದ ಕಾರ್ಮಿಕ ಶಕ್ತಿಗೆ ದಾವಣಗೆರೆ ಹೆಸರಾಗಿತ್ತು. ಕೆಲಸದ ಅವಧಿ, ಸೌಲಭ್ಯ, ಕೂಲಿ ಹೆಚ್ಚಳದಂತಹ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾರ್ಮಿಕರು ಸಂಘಟಿತರಾದರು. ವಿಮೆ, ಭವಿಷ್ಯನಿಧಿ, ಬೋನಸ್, ಮಧ್ಯಾಹ್ನದ ಊಟ, ಶೌಚಾಲಯ ಸೇರಿದಂತೆ ಹಲವು ಬೇಡಿಕೆಗಳು ಮುನ್ನೆಲೆಗೆ ಬಂದವು. ಭಾರತ ಕಮ್ಯುನಿಸ್ಟ್ ಪಕ್ಷವು (ಸಿಪಿಐ) ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ನೇತೃತ್ವದಲ್ಲಿ 1962ರಲ್ಲಿ ಕಾರ್ಮಿಕರನ್ನು ಸಂಘಟಿಸಲಾರಂಭಿಸಿತು.
ದೆಹಲಿಯಲ್ಲಿ ಕಾರ್ಮಿಕ ನಾಯಕರು ಕರೆ ನೀಡಿದರೆ ದಾವಣಗೆರೆಯಲ್ಲಿ ಕೆಂಬಾವುಟಗಳು ಹಾರಾಡುತ್ತಿದ್ದವು. ಮೇ ತಿಂಗಳಲ್ಲಿನ ಕಾರ್ಮಿಕ ದಿನಾಚರಣೆಗೆ ಇಡೀ ಊರು ಕೆಂಪು ಸಾಗರದಂತೆ ಕಾಣುತ್ತಿತ್ತು. ಕೆಂಪು ಅಂಗಿ, ಖಾಕಿ ಪ್ಯಾಂಟ್ ಧರಿಸಿದ ಕಾರ್ಮಿಕರ ಮೆರವಣಿಗೆಯ ವೈಭವನವನ್ನು ಈಗಲೂ ಜನರು ನೆನಪಿಸಿಕೊಳ್ಳುತ್ತಾರೆ. ಕಾರ್ಮಿಕರ ಹೋರಾಟದ ಭಾಗವಾಗಿ ಕಾಮ್ರೇಡ್ ಪಂಪಾಪತಿ ಬೆಳೆದರು. ದಾವಣಗೆರೆ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾದರು.
ಕಾರ್ಮಿಕರ ಹೋರಾಟದ ಕುರುಹುಗಳು ದಾವಣಗೆರೆಯಲ್ಲಿ ಇನ್ನೂ ಇವೆ. ಕಾರ್ಲ್ ಮಾರ್ಕ್ಸ್ ನಗರ, ಭಗತ್ ಸಿಂಗ್ ನಗರ, ಲೆನಿನ್ ನಗರಗಳಲ್ಲಿ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿದ್ದರು.
ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಭಾಗವಾಗಿದ್ದ ದಾವಣಗೆರೆ ಚಿತ್ರರಂಗದ ಆಕರ್ಷಕ ಸ್ಥಳವಾಗಿತ್ತು. ಕಲ್ಲಿನ ಕೋಟೆಯನ್ನು ಪ್ರಧಾನವಾಗಿಟ್ಟುಕೊಂಡು ಪುಟ್ಟಣ್ಣ ಕಣಗಾಲ್ ‘ನಾಗರಹಾವು’ ಸಿನಿಮಾ ನಿರ್ಮಿಸುತ್ತಿದ್ದಂತೆ ದೇಶದ ಚಿತ್ರರಂಗ ಚಿತ್ರದುರ್ಗದತ್ತ ತಿರುಗಿ ನೋಡಿತು. ಇದಕ್ಕೂ ಒಂದು ದಶಕಕ್ಕೂ ಹಿಂದೆಯೇ ದಾವಣಗೆರೆಯ ಕಾಟನ್ ಮಿಲ್‌ಗಳು ಸಿನಿಮಾ ಕಥಾ ವಸ್ತುಗಳಾಗಿದ್ದವು. ದಾವಣಗೆರೆಯ ಕಾಟನ್ ಮಿಲ್‌ಗಳು ಚಂದನವನದ ಹಲವು ಚಿತ್ರಗಳಲ್ಲಿ ಸೆರೆಯಾಗಿವೆ. ಹಳೆಯ ಸಿನಿಮಾ ನೋಡಿದಾಗಲೆಲ್ಲ ಈ ಗತವೈಭವದ ನೆನಪಿನ ಬುತ್ತಿ ತೆರೆದುಕೊಳ್ಳುತ್ತದೆ.
ಲೀಲಾವತಿ ಅಭಿನಯದ ‘ತುಂಬಿದ ಕೊಡ’ ಸಿನಿಮಾದ ಬಹುತೇಕ ದಾವಣಗೆರೆಯಲ್ಲಿ ಚಿತ್ರೀಕರಣಗೊಂಡಿತ್ತು. ದಾವಣಗೆರೆ ಕಾಟನ್ ಮಿಲ್ (ಡಿಸಿಎಂ), ಕಾಟನ್ ಮಿಲ್ ಅತಿಥಿ ಗೃಹ, ಪಿ.ಜೆ. ಬಡಾವಣೆ, ನಗರಸಭೆ, ಶ್ರೀರಾಮ ಮಂದಿರ ಸೇರಿ ಹಲವೆಡೆ ಚಿತ್ರೀಕರಣ ನಡೆದಿತ್ತು. ಹತ್ತಿ ಗಿರಣಿ, ಕಾರ್ಮಿಕರಿಗೆ ಸಂಬಂಧಿಸಿದ ದೃಶ್ಯಗಳಿಗೆ ಕನ್ನಡ ಚಿತ್ರರಂಗ ದಾವಣಗೆರೆಯತ್ತ ನೋಡುತ್ತಿದ್ದ ಕಾಲವೊಂದಿತ್ತು.
ದಾವಣಗೆರೆಯ ಹೊರವಲಯದಲ್ಲಿದ್ದ ಆಂಜನೇಯ ಕಾಟನ್ ಮಿಲ್‌ನಲ್ಲಿ ನೂಲು ಉತ್ಪಾದನೆ ಮಾಡುತ್ತಿದ್ದ ಕಾರ್ಮಿಕರು
ಹತ್ತಿ ಗಿರಣಿಗಳು ಕಳೆಗುಂದುವುದನ್ನು ಗಮನಿಸಿದ ರಾಜ್ಯ ಸರ್ಕಾರ 1980ರ ದಶಕದಲ್ಲಿಯೇ ಇವುಗಳ ಪುನಚೇತನಕ್ಕೆ ಗಮನ ಹರಿಸಿತ್ತು. ಶಾಸಕರಾಗಿದ್ದ ಪಂಪಾಪತಿ ವಿಧಾನಮಂಡಲದ ಅಧಿವೇಶನದಲ್ಲಿ ಹಲವು ಬಾರಿ ಈ ಕುರಿತು ಪ್ರಸ್ತಾಪ ಮಾಡಿದ್ದರು. ಹತ್ತಿ ಮಿಲ್‌ಗಳನ್ನು ಪುನಶ್ಚೇತನಗೊಳಿಸಿದರೆ ಮಧ್ಯ ಕರ್ನಾಟಕದ ಆರ್ಥಿಕತೆ ಸುಧಾರಣೆ ಕಾಣಲಿದೆ ಎಂಬ ಆಶಾಭಾವನೆ ಸರ್ಕಾರದ್ದಾಗಿತ್ತು.
ಬಹುತೇಕ ಎಲ್ಲ ಹತ್ತಿ ಗಿರಣಿಗಳು ಖಾಸಗಿ ಒಡೆತನದಲ್ಲಿದ್ದವು. ಕಾರ್ಮಿಕರ ಹಿತಾಸಕ್ತಿ, ಆರ್ಥಿಕತೆಯ ದೃಷ್ಟಿಯಿಂದ ಮಿಲ್ ಕಾರ್ಯನಿರ್ವಹಿಸುವುದು ಒಳಿತು ಎಂದಷ್ಟೇ ಸರ್ಕಾರ ಹೇಳಿತು. ನೆರವು, ಅನುದಾನ ನೀಡುವ ಅವಕಾಶ ಸರ್ಕಾರಕ್ಕೆ ಇರಲಿಲ್ಲ. ಇದರಿಂದ ಸರ್ಕಾರದ ಪ್ರಯತ್ನ ಕೈಗೂಡಲಿಲ್ಲ. 1992ರಲ್ಲಿ ಮುಕ್ತ ಮಾರುಕಟ್ಟೆಗೆ ದೇಶ ತೆರೆದುಕೊಂಡ ಬಳಿಕ ಕಾಟನ್ ಮಿಲ್‌ಗಳ ಅವನತಿಯ ವೇಗ ಹೆಚ್ಚಿತು.
ಹತ್ತಿ ಗಿರಣಿಗಳು ಅವಸಾನಗೊಂಡಿದ್ದನ್ನು ಕಾರ್ಮಿಕರು ಹಾಗೂ ಮಾಲೀಕರು ಭಿನ್ನ ದೃಷ್ಟಿಯಲ್ಲಿ ವಿಶ್ಲೇಷಣೆ ಮಾಡುತ್ತಾರೆ. ಕಾರ್ಮಿಕರು ಜಾಗತೀಕರಣ, ಮಾಲೀಕರತ್ತ ಬೊಟ್ಟು ಮಾಡುತ್ತಾರೆ. ಕಾಟನ್ ಮಿಲ್ ಮಾಲೀಕರು ಕಾರ್ಮಿಕ ಸಂಘಟನೆಗಳ ಮುಖಂಡರ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ.
ಕಾರ್ಮಿಕರ ಹೋರಾಟ ಪುಟಿದೆದ್ದ ಬಳಿಕ ಬಹುತೇಕ ಎಲ್ಲ ಕಾಟನ್ ಮಿಲ್‌ಗಳು ಸೌಲಭ್ಯಗಳನ್ನು ಕಲ್ಪಿಸಿದ್ದವು. ದೀಪಾವಳಿಗೆ ಎಲ್ಲ ಮಿಲ್‌ಗಳು ಬೋನಸ್ ನೀಡುತ್ತಿದ್ದವು. ಈ ಸಂದರ್ಭದಲ್ಲಿ ದಾವಣಗೆರೆಯ ಮಾರುಕಟ್ಟೆ ವಹಿವಾಟು ಹೆಚ್ಚಾಗುತ್ತಿತ್ತು. ಆದರೆ, ಇದೇ ಸ್ಥಿತಿಯನ್ನು ಕಾಟನ್ ಮಿಲ್‌ಗಳು ನಿರಂತರವಾಗಿ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಬದಲಾದ ಆರ್ಥಿಕ ನೀತಿಗಳು ಮಿಲ್‌ಗಳಿಗೆ ಬಲವಾದ ಪೆಟ್ಟು ನೀಡಿದವು.
ದಾವಣಗೆರೆಯ ‘ಕಾಟನ್ ಮಿಲ್’ ಗತವೈಭವ ಮರುಕಳಿಸುವಂತೆ ಮಾಡುವ ಉದ್ದೇಶದಿಂದ ಸರ್ಕಾರ ‘ಜವಳಿ ಪಾರ್ಕ್’ ಸ್ಥಾಪಿಸಿದೆ. ಕರೂರು ಕೈಗಾರಿಕಾ ಪ್ರದೇಶದಲ್ಲಿ 64 ಎಕರೆಯನ್ನು ಜವಳಿ ಪಾರ್ಕ್‌ಗಾಗಿ ಮೀಸಲಿಡಲಾಗಿದೆ. 2008ರಲ್ಲಿ 72 ಫಲಾನುಭವಿಗಳನ್ನು ಆಯ್ಕೆ ಮಾಡಿ ನಿವೇಶನ ಹಂಚಿಕೆ ಮಾಡಲಾಗಿದೆ. ಗಾರ್ಮೆಂಟ್ಸ್, ವೀವಿಂಗ್, ಜಿನ್ನಿಂಗ್, ಪ್ರೆಸ್ಸಿಂಗ್, ಸ್ಪಿನ್ನಿಂಗ್ ಸೇರಿ ಹಲವು ಘಟಕಗಳು ಇಲ್ಲಿ ಸ್ಥಾಪನೆ ಆಗಬೇಕಿತ್ತು. ಆದರೆ, ಬೆರಳೆಣಿಕೆಯ ಉದ್ಯಮಗಳು ಕಾರ್ಯನಿರ್ವಹಿಸುತ್ತಿವೆ.
ದಾವಣಗೆರೆಯ ಹೊರವಲಯದ ಆಂಜನೇಯ ಕಾಟನ್ ಮಿಲ್‌ನ ಮೂಲ ಕಟ್ಟಡದ ನೋಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.