ಸುಮಾ ಬಿ
ಪ್ರಸಕ್ತ ವರ್ಷ ಆರಂಭದಿಂದ ಜೂನ್ ಮಧ್ಯ ಭಾಗದವರೆಗೆ 149.7 ಮಿ.ಮೀ ವಾಡಿಕೆ ಮಳೆ ಆಗಬೇಕಿತ್ತು. ಆದರೆ, 82.1 ಮಿ.ಮೀ ಮಳೆಯಾಗಿದೆ. ಶೇ 45ರಷ್ಟು ಮಳೆ ಕೊರತೆ ಉಂಟಾಗಿದ್ದು, ಮುಂಗಾರು ಹಂಗಾಮು ಬಿತ್ತನೆ ಕುಂಠಿತಗೊಂಡಿದೆ. ಪೂರ್ವ ಮುಂಗಾರು ಹಾಗೂ ಮುಂಗಾರು ಹಂಗಾಮಿನ ಬಿತ್ತನೆ ಶೇ 0.46ರಷ್ಟು ಮಾತ್ರ ಪೂರ್ಣಗೊಂಡಿದೆ.
ದಾವಣಗೆರೆ: ಕಣ್ಣು ಹಾಯಿಸಿದಷ್ಟೂ ದೂರ ಬಯಲು ಪ್ರದೇಶ. ಅಲ್ಲಲ್ಲಿ ಒಣಗಿ ನಿಂತ ಅಡಿಕೆ, ತೆಂಗಿನ ಮರಗಳು, ಜಮೀನು ಹಸನು ಮಾಡಿಕೊಂಡು ಬಿತ್ತನೆಗೆ ಕಾಯುತ್ತಿರುವ ರೈತರು. ಮಳೆ ಹನಿಯ ಸ್ಪರ್ಶಕ್ಕಾಗಿ ಬಾಯ್ದೆರೆದ ಭೂಮಿ, ನೀರಿಲ್ಲದೆ ಖಾಲಿ ಮೈದಾನವಾದ ಕೆರೆಗಳು...
ಜಿಲ್ಲೆಯ ಗ್ರಾಮೀಣ ಭಾಗದ ಜಮೀನುಗಳತ್ತ ಹೆಜ್ಜೆ ಹಾಕಿದರೆ ಕಂಡು ಬರುವ ಚಿತ್ರಣವಿದು. ಸರಿಯಾಗಿ ಕಳೆದ ವರ್ಷದ ಈ ಹೊತ್ತಿಗೆ ಹಸಿರು ಮೈದುಂಬಿಕೊಂಡು ನಳನಳಿಸುತ್ತಿದ್ದ ಜಮೀನುಗಳು ಈ ಬಾರಿ ಮಳೆಯಿಲ್ಲದೆ ಬರಡು ಭೂಮಿಗಳಾಗಿವೆ. ಬಿತ್ತನೆ ಬೀಜಗಳನ್ನು ಒಡಲಲ್ಲಿ ತುಂಬಿಕೊಂಡು ಹಸಿರು ಸೂಸಿ ರೈತನ ಮೊಗದಲ್ಲಿ ಮಂದಹಾಸ ತುಳುಕುವಂತೆ ಮಾಡುತ್ತಿದ್ದ ಭೂತಾಯಿ ಮಳೆಗಾಗಿ ಕಾಯುತ್ತಿದ್ದಾಳೆ.
ಜಿಲ್ಲೆಯಲ್ಲಿ ಮೇ ತಿಂಗಳ ಅಂತ್ಯದ ವೇಳೆಗಾಗಲೇ ರೈತರು ಜಮೀನು ಹಸನು ಮಾಡಿಕೊಂಡು ಬೀಜಗಳನ್ನು ಬಿತ್ತುತ್ತಿದ್ದರು. ಕೃಷಿ ಚಟುವಟಿಕೆಗಳು ಗರಿಗೆದರುತ್ತಿದ್ದವು. ಈ ಬಾರಿ ಮುಂಗಾರು ವಿಳಂಬದಿಂದ ಬಿತ್ತನೆ ಕಾರ್ಯವೂ ವಿಳಂಬವಾಗುತ್ತ ಸಾಗಿದೆ. ಕೃಷಿ ಕಾರ್ಯಗಳಿಲ್ಲದೆ, ಮಳೆ ಬರುವ ನಿರೀಕ್ಷೆಯಲ್ಲಿ ರೈತರು ಆಗಸದತ್ತ ಮುಖ ಮಾಡಿದ್ದಾರೆ.
ಪ್ರಸಕ್ತ ವರ್ಷ ಆರಂಭದಿಂದ ಜೂನ್ ಮಧ್ಯ ಭಾಗದವರೆಗೆ 149.7 ಮಿ.ಮೀ ವಾಡಿಕೆ ಮಳೆ ಆಗಬೇಕಿತ್ತು. ಆದರೆ, 82.1 ಮಿ.ಮೀ ಮಳೆಯಾಗಿದೆ. ಶೇ 45ರಷ್ಟು ಮಳೆ ಕೊರತೆ ಉಂಟಾಗಿದ್ದು, ಮುಂಗಾರು ಹಂಗಾಮು ಬಿತ್ತನೆ ಕುಂಠಿತಗೊಂಡಿದೆ. ಪೂರ್ವ ಮುಂಗಾರು ಹಾಗೂ ಮುಂಗಾರು ಹಂಗಾಮಿನ ಬಿತ್ತನೆ ಶೇ 0.46ರಷ್ಟು ಮಾತ್ರ ಪೂರ್ಣಗೊಂಡಿದೆ.
ರೈತರು ಆತಂಕಗೊಳ್ಳುವ ಅಗತ್ಯವಿಲ್ಲ. ಜುಲೈವರೆಗೂ ಬಿತ್ತನೆ ಕಾರ್ಯ ಕೈಗೊಳ್ಳಲು ಸಮಯವಿದೆ. ಮಳೆ ಹಾಗೂ ಹದ ನೋಡಿಕೊಂಡು, ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು.ಶ್ರೀನಿವಾಸ್ ಚಿಂತಾಲ್, ಕೃಷಿ ಇಲಾಖೆ ಜಂಟಿ ನಿರ್ದೇಶಕ, ದಾವಣಗೆರೆ
ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 2,45,198 ಹಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಗುರಿ ಹೊಂದಲಾಗಿದೆ. ಆದರೆ, ಈವರೆಗೆ 1,134 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ನಡೆದಿದೆ. ಕಳೆದ ವರ್ಷ ಈ ಹೊತ್ತಿಗಾಗಲೇ 57,296 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿತ್ತು.
ಜಿಲ್ಲೆಯ ಪ್ರಮುಖ ಬೆಳೆ ಮೆಕ್ಕೆಜೋಳ. ಮುಕ್ಕಾಲು ಭಾಗದಷ್ಟು ಜಮೀನಿನಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತದೆ. ಪ್ರಸಕ್ತ ವರ್ಷ 1,26,108 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಗುರಿ ಹೊಂದಲಾಗಿದೆ. ಈವರೆಗೆ 465 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. ಶೇ 0.37 ರಷ್ಟು ಬಿತ್ತನೆ ಗುರಿ ಸಾಧಿಸಲಾಗಿದೆ. ಕಳೆದ ವರ್ಷ ಈ ಹೊತ್ತಿಗೆ 47,038 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತಲಾಗಿತ್ತು.
ಇನ್ನು ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಹತ್ತಿಯ ಬಿತ್ತನೆ ಕಾರ್ಯ ಈಗಾಗಲೇ ಪೂರ್ಣಗೊಳ್ಳಬೇಕಿತ್ತು. ಜಿಲ್ಲೆಯಲ್ಲಿ ಅತಿ ಹೆಚ್ಚು ಹತ್ತಿ ಬೆಳೆಯುವ ತಾಲ್ಲೂಕು ಜಗಳೂರು. ಈ ತಾಲ್ಲೂಕು ಒಂದರಲ್ಲೇ 4,658 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿಯ ಬಿತ್ತನೆ ಗುರಿ ಹೊಂದಲಾಗಿದೆ. ಆದರೆ, 551 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಆಗಿದೆ. ಜಿಲ್ಲೆಯಾದ್ಯಂತ 6,887 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯುವ ಗುರಿ ಹೊಂದಲಾಗಿದೆ. ಈವರೆಗೆ 636 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಕಳೆದ ವರ್ಷ ಈ ವೇಳೆಗಾಗಲೇ 5,667 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಪೂರ್ಣಗೊಂಡಿತ್ತು.
‘ಮುಂಗಾರು ಪೂರ್ವ ಮಳೆ ಸುರಿದಾಗ ಹತ್ತಿ, ಮೆಕ್ಕೆಜೋಳ, ಹೆಸರು, ಅಲಸಂದಿ, ಉದ್ದು ಸೇರಿ ಇತರೆ ಬೆಳೆಗಳನ್ನು ಬಿತ್ತನೆ ಮಾಡಲಾಗುತ್ತದೆ. ಈ ಬಾರಿ ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಶೂನ್ಯ ಸಾಧನೆ ಆಗಿದೆ. ಕೆಲವೆಡೆ ಆಗಾಗ ಬಿದ್ದ ಸಣ್ಣ ಪುಟ್ಟ ಮಳೆಗೆ ಬಿತ್ತನೆ ಕಾರ್ಯ ನಡೆದಿದೆ. ಈ ವೇಳೆಗಾಗಲೇ ಮೆಕ್ಕೆಜೋಳ ಬಿತ್ತನೆಯೂ ಶೇ 50ರಷ್ಟು ಆಗಬೇಕಿತ್ತು. ಹತ್ತಿ ಬಿತ್ತನೆ ಸಮಯ ಮುಗಿದಿದೆ. ಅಂತೆಯೇ ರೈತರು ಮೆಕ್ಕೆಜೋಳ ಬೆಳೆಯಲು ಮುಂದಾಗುತ್ತಾರೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾಹಿತಿ ನೀಡಿದರು.
ಕಳೆದ ವರ್ಷ ಈ ವೇಳೆಗಾಗಲೇ ಮೆಕ್ಕೆಜೋಳ ಬಿತ್ತನೆ ಮಾಡಿ 25 ದಿನ ಕಳೆದಿದ್ದವು. ಮಳೆ ಚೆನ್ನಾಗಿ ಬಂದಿತ್ತು. ಈ ವರ್ಷ ಜಮೀನುಗಳನ್ನು ಸರಿಯಾಗಿ ಹದಮಾಡಲೂ ಮಳೆ ಬಂದಿಲ್ಲ. ಕೊಳವೆ ಬಾವಿ ನೀರು ಸಾಕಾಗುತ್ತಿಲ್ಲ.ಮಲ್ಲಪ್ಪ, ರೈತ, ಜಿ.ಟಿ.ಕಟ್ಟೆ ಹರಿಹರ
‘ಅಗತ್ಯ ಇರುವಷ್ಟು ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಇದೆ. ರೈತರ ಬೇಡಿಕೆಗೆ ಅನುಗುಣವಾಗಿ ವಿತರಿಸಲಾಗುವುದು. ಚಂಡಮಾರುತದ ಕಾರಣ ಮುಂಗಾರು ಕುಂಠಿತಗೊಂಡಿತು. ಈ ವಾರದಲ್ಲಿ ಮಳೆ ಬರುವ ಸಾಧ್ಯತೆ ಇದೆ’ ಎಂದು ಅವರು ಹೇಳಿದರು.
ಚನ್ನಗಿರಿ: ಮುಂಗಾರು ಹಂಗಾಮು; ಶೇ 5ರಷ್ಟು ಬಿತ್ತನೆ
ಚನ್ನಗಿರಿ ತಾಲ್ಲೂಕಿನಾದ್ಯಂತ ಮುಂಗಾರು ಕೊರತೆಯಿಂದಾಗಿ ಈವರೆಗೆ ಕೇವಲ ಶೇ 5ರಷ್ಟು ಮಾತ್ರ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ನಡೆದಿದೆ. ಮಳೆ ಇಲ್ಲದೇ ಸಾಲ ಮಾಡಿ ರಸಗೊಬ್ಬರ ಹಾಗೂ ಬೀಜಗಳನ್ನು ಖರೀದಿಸಿ ಸಂಗ್ರಹಿಸಿ ಇಟ್ಟುಕೊಂಡ ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ.
ಕಳೆದ ವರ್ಷ ಜೂನ್ ತಿಂಗಳ ಹೊತ್ತಿಗೆ ಮುಂಗಾರು ಹಂಗಾಮಿನ ಬಿತ್ತನೇ ಕಾರ್ಯ ಮಾಡಿ ಒಂದು ತಿಂಗಳಾಗಿತ್ತು. ಆದರೆ ಈ ಬಾರಿ ಇನ್ನೂ ಮಳೆ ಬಿದ್ದಿಲ್ಲ. ವಾರದೊಳಗೆ ಮಳೆ ಬಾರದೆ ಹೋದರೆ ಮುಂಗಾರು ಹಂಗಾಮಿನ ಬಿತ್ತನೆ ಅವಧಿ ಮುಗಿಯಲಿದೆ.ಸತೀಶ್ ,ರೈತ, ಕಾಕನೂರು ಗ್ರಾಮ ಚನ್ನಗಿರಿ
‘ಈ ಬಾರಿಯ ಮುಂಗಾರು ಹಂಗಾಮಿನಲ್ಲಿ 25000 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ 500 ಹೆಕ್ಟೇರ್ ಹತ್ತಿ 500 ಹೆಕ್ಟೇರ್ ರಾಗಿ 11000 ಹೆಕ್ಟೇರ್ ಭತ್ತ 115 ಹೆಕ್ಟೇರ್ ತೊಗರಿ 50 ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯುವ ಗುರಿಯನ್ನು ಹೊಂದಲಾಗಿತ್ತು. ಕಳೆದ ವರ್ಷ 22000 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ 250 ಹೆಕ್ಟೇರ್ ಹತ್ತಿ 50 ಹೆಕ್ಟೇರ್ ರಾಗಿ 11000 ಹೆಕ್ಟೇರ್ ಭತ್ತ 250 ಹೆಕ್ಟೇರ್ ತೊಗರಿ ಬೆಳೆಗಳನ್ನು ಜೂನ್ ತಿಂಗಳಲ್ಲಿ ಬಿತ್ತನೆ ಮಾಡಲಾಗಿತ್ತು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎಸ್. ಅರುಣ್ ಕುಮಾರ್ ಮಾಹಿತಿ ನೀಡಿದರು.
ಈ ಬಾರಿ ಜೂನ್ ತಿಂಗಳ ಮಧ್ಯ ಭಾಗವಾದರೂ ಬಿತ್ತನೆ ಕಾರ್ಯ ಆರಂಭವಾಗಿಲ್ಲ. ಈವರೆಗೆ ತಾಲ್ಲೂಕಿನ ಸಂತೇಬೆನ್ನೂರು ಹೋಬಳಿಯಲ್ಲಿ ಶೇ 5ರಷ್ಟು ಮಾತ್ರ ಬಿತ್ತನೆ ಕಾರ್ಯ ನಡೆದಿದೆ. ಅದರಲ್ಲಿ ಬಹುಪಾಲು ಪಾಪ್‌ಕಾರ್ನ್ ಮೆಕ್ಕೆಜೋಳ ಬಿತ್ತನೆ ಮಾಡಿದ್ದು ಮಳೆ ಇಲ್ಲದೇ ಆ ಬೆಳೆಯೂ ಒಣಗಿ ಹೋಗುವ ಹಂತ ತಲುಪಿವೆ. ಇನ್ನು ಉಬ್ರಾಣಿ ಬಸವಾಪಟ್ಟಣ ಹೋಬಳಿ ಹಾಗೂ ಚನ್ನಗಿರಿ ಪಟ್ಟಣದಲ್ಲಿ ಇನ್ನು ಬಿತ್ತನೆ ಕಾರ್ಯವೇ ಆರಂಭವಾಗಿಲ್ಲ.
ಮಾಯಕೊಂಡ: ಮೀರುತ್ತಿದೆ ಬಿತ್ತನೆ ಸಮಯ
ಕಳೆದ ವರ್ಷ ಈ ಭಾಗದಲ್ಲಿ ಮೇ ತಿಂಗಳ ಕೊನೆ ವಾರದಲ್ಲಿ ಬಿತ್ತನೆ ಕಾರ್ಯ ಆರಂಭವಾಗಿ ಜೂನ್ ಮಧ್ಯದ ವೇಳೆಗೆ ಮೆಕ್ಕೆಜೋಳ ಮೊಣಕಾಲು ಎತ್ತರಕ್ಕೆ ಬೆಳೆದಿತ್ತು. ಆದರೆ ಈ ವರ್ಷ ಮಳೆರಾಯನ ಅವಕೃಪೆಯಿಂದಾಗಿ ಬಿತ್ತನೆ ಇರಲಿ ಜಮೀನು ಹದಗೊಳಿಸುವ ಕಾರ್ಯವೇ ಇನ್ನೂ ನಡೆದಿಲ್ಲ.
ಮಾಯಕೊಂಡ ಆನಗೋಡು ಹೋಬಳಿ ಸೇರಿದಂತೆ ದಾವಣಗೆರೆ ತಾಲ್ಲೂಕಿನಾದ್ಯಂತ ಮೆಕ್ಕೆಜೋಳ ಶೇಂಗಾ ತೊಗರಿ ಅಲಸಂದಿ ಸೇರಿ ವಿವಿಧ ಬೆಳೆಗಳನ್ನು ಕಳೆದ ವರ್ಷದ ಜೂನ್ ವೇಳೆಗಾಗಲೇ ಒಟ್ಟು 33062 ಹೆಕ್ಟೇರ್ ಬಿತ್ತನೆ ಆಗಿತ್ತು. ಆದರೆ ಈ ವರ್ಷ ಕೊಳವೆ ಬಾವಿ ಹೊಂದಿರುವ ಕೆಲ ರೈತರು ಮಾತ್ರ ಬಿತ್ತನೆ ನಡೆಸಿದ್ದು ಒಟ್ಟು 122 ಹೆಕ್ಟೇರ್ ಬಿತ್ತನೆ ಕಾರ್ಯ ನಡೆದಿದೆ ಎಂದು ದಾವಣಗೆರೆ ಸಹಾಯಕ ಕೃಷಿ ನಿರ್ದೇಶಕ ಶ್ರೀಧರಮೂರ್ತಿ ಮಾಹಿತಿ ನೀಡಿದರು.
ಜೂನ್ ಆರಂಭದಲ್ಲಿಯೇ ಬಿತ್ತನೆ ಕಾರ್ಯ ಆರಂಭವಾಗಬೇಕಿತ್ತು. ಆದರೆ ಮಳೆಯಾಗದಿರುವುದರಿಂದ ಹೊಲಗಳನ್ನು ಸರಿಯಾಗಿ ಸಿದ್ಧತೆ ಮಾಡಿಕೊಳ್ಳಲು ಆಗುತ್ತಿಲ್ಲ. ಮಳೆ ಬಂದ ತಕ್ಷಣವೇ ಕೃಷಿ ಚಟುವಟಿಕೆಗಳನ್ನು ಆರಂಭಿಸುತ್ತೇವೆ.ಮಧುಗೌಡ, ರೈತ, ಅರಕೆರೆ ಹೊನ್ನಾಳಿ ತಾಲ್ಲೂಕು
ರೈತರ ಸಂಕಷ್ಟ ಒಂದೆಡೆ ಆದರೆ ಬೀಜ– ಗೊಬ್ಬರ ಮಾರಾಟಗಾರರು ಈಗಾಗಲೇ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಎರಡು ತಿಂಗಳ ಹಿಂದೆಯೇ ದಾಸ್ತಾನು ಮಾಡಿದ್ದು ಮಾರಾಟ ಆಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ‘ಕಳೆದ ವರ್ಷ ಅಧಿಕ ಮಳೆಯಾಗಿ ಬಿತ್ತನೆ ಮಾಡಿದ್ದ ಬೆಳೆ ನೀರು ಪಾಲಾಯಿತು. ಈ ವರ್ಷ ಜಮೀನು ಹದ ಮಾಡಿಕೊಳ್ಳುವುದಕ್ಕೂ ಮಳೆ ಬಾರದಾಗಿದೆ. ಮುಂದೆ ಏನು ಎಂಬ ಚಿಂತೆ ಕಾಡುತ್ತಿದೆ’ ಎನ್ನುತ್ತಾರೆ ರೈತರಾದ ಆನಗೋಡು ಬಸವರಾಜ್ ಮಾಯಕೊಂಡ ಗೌಡ್ರ ನಟರಾಜ ಅಣಬೇರು ಅನಿಲ್
ಹೊನ್ನಾಳಿ: ಆರಂಭವಾಗದ ಕೃಷಿ ಚಟುವಟಿಕೆ
ಪ್ರಸಕ್ತ ವರ್ಷ ಮುಂಗಾರು ವಿಳಂಬವಾಗಿದ್ದು ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕಿನಲ್ಲಿ ಶೇ 80ರಷ್ಟು ಕೃಷಿ ಚಟುವಟಿಕೆಗಳು ಆರಂಭವಾಗಿಲ್ಲ. ‘ಹೊನ್ನಾಳಿ ತಾಲ್ಲೂಕಿನಲ್ಲಿ ಒಟ್ಟು ಬಿತ್ತನೆ ಗುರಿ 27990 ಹೆಕ್ಟೇರ್ ನ್ಯಾಮತಿ ತಾಲ್ಲೂಕಿನಲ್ಲಿ 20995 ಹೆಕ್ಟೇರ್ ಬಿತ್ತನೆ ಗುರಿ ಇದೆ. ಆದರೆ ಪ್ರಸಕ್ತ ಸಾಲಿನಲ್ಲಿ ಮುಂಗಾರು ವಿಳಂಬ ಆಗಿದ್ದರಿಂದ ಹೊನ್ನಾಳಿ ತಾಲ್ಲೂಕಿನಲ್ಲಿ ಮೆಕ್ಕೆಜೋಳ ಕೇವಲ 60ರಿಂದ 80 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಹಾಗೆಯೇ ಶೇಂಗಾ 50 ಹೆಕ್ಟೇರ್ ಹತ್ತಿ 25 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಅದೇ ರೀತಿ ನ್ಯಾಮತಿ ತಾಲ್ಲೂಕಿನಲ್ಲಿ 50 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ 50 ಹೆಕ್ಟೇರ್ ಶೇಂಗಾ 30 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕಿ ಎ.ಎಸ್. ಪ್ರತಿಮಾ ಮಾಹಿತಿ ನೀಡಿದರು. ‘ಅವಳಿ ತಾಲ್ಲೂಕಿನ ರೈತರು ಬಿತ್ತನೆಗೆ ಈಗಾಗಲೇ ಭೂಮಿ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಮಳೆಗಾಗಿ ಕಾಯುತ್ತಿದ್ದಾರೆ. ಬೀಜ ಗೊಬ್ಬರ ಖರೀದಿಗೂ ಮುಂದೆ ಬರುತ್ತಿಲ್ಲ’ ಎಂದು ಅವರು ಹೇಳಿದರು.
ಹರಿಹರ: ಮಳೆ ವಿಳಂಬ; ರೈತರಲ್ಲಿ ಆತಂಕ
ಬಹುತೇಕ ನೀರಾವರಿ ಪ್ರದೇಶ ಎಂಬ ಹೆಗ್ಗಳಿಕೆ ಇದ್ದರೂ ಮುಂಗಾರು ಮಳೆ ವಿಳಂಬ ತಾಲ್ಲೂಕಿನ ರೈತರಲ್ಲಿ ಅಧೀರತೆ ಮೂಡಿಸಿದೆ. ಜಿಲ್ಲೆಯ ಜೀವ ನದಿ ತುಂಗಭದ್ರಾ ನದಿ ದೇವರಬೆಳೆಕೆರೆ ಪಿಕ್‌ಅಪ್ ಭದ್ರಾ ನಾಲೆಗಳ ಜಾಲ ಇಲ್ಲಿನ ನೀರಾವರಿ ಮೂಲಗಳಾಗಿವೆ. ತಾಲ್ಲೂಕಿನಲ್ಲಿ ಜೂನ್ 12ವರೆಗೆ ವಾಡಿಕೆ ಮಳೆ 150.5 ಮಿ.ಮೀ. ಆಗಬೇಕಿತ್ತು ಆದರೆ ಈವರೆಗೆ 65.3 ಮಿ.ಮೀ. ಮಾತ್ರ ಮಳೆಯಾಗಿದ್ದು ಶೇ 57ರಷ್ಟು ಕೊರತೆಯಾಗಿದೆ.
ತಾಲ್ಲೂಕಿನ ಒಟ್ಟು ಮುಂಗಾರು ಹಂಗಾಮಿನ ಬೆಳೆ ವಿಸ್ತೀರ್ಣ 32000 ಹೆಕ್ಟೇರ್ ಗುರಿ ಇದ್ದು ಇದರಲ್ಲಿ 24000 ಹೆಕ್ಟೇರ್ ಭತ್ತ 7000 ಹೆಕ್ಟೇರ್ ಮೆಕ್ಕೆಜೋಳ ಹಾಗೂ ಇತರೆ ಬೆಳೆಗಳನ್ನು 1000 ಹೆಕ್ಟೇರ್‌ನಲ್ಲಿ ಬೆಳೆಯಲಾಗುತ್ತದೆ. ‘ಮಳೆ ಅಭಾವದಿಂದ ಇಲ್ಲಿಯವರೆಗೆ 50 ಹೆಕ್ಟೇರ್ ಮಾತ್ರ ಬಿತ್ತನೆ ಆಗಿದೆ. ಕಳೆದ ಮುಂಗಾರಿನ ಈ ಅವಧಿಯಲ್ಲಿ ಶೇ 80ರಷ್ಟು ಪ್ರದೇಶದಲ್ಲಿ ಬಿತ್ತನೆ ಕಾರ್ಯ ಆಗಿತ್ತು.
ಕಳೆದ ತಿಂಗಳು ಬಂದ ಅಲ್ಪ ಮಳೆಗೆ ಪಾಪ್‌ಕಾರ್ನ್ ಮೆಕ್ಕೆಜೋಳ ಬಿತ್ತನೆ ಮಾಡಿದೆವು. ಈಗ 20 ದಿನಗಳಾದರೂ ಮಳೆ ಸುಳಿವಿಲ್ಲ. 10 ಎಕರೆಯಲ್ಲಿ ಮೊಳಕೆಯೊಡೆದ ಸಸಿಗಳು ಒಣಗಿವೆ.ದ್ಯಾಮಮ್ಮ, ದೊಡ್ಡಬ್ಬಿಗೆರೆ, ಸಂತೇಬೆನ್ನೂರು ಹೋಬಳಿ
ಜುಲೈ 2ನೇ ವಾರದಿಂದ ಬಿತ್ತನೆ ಮಾಡುವುದಾದರೆ ಮೆಕ್ಕೆಜೋಳದ ಬದಲು ಇತರೆ ಬೆಳೆಗಳಾದ ರಾಗಿ ಸೂರ್ಯಕಾಂತಿ ಅಥವಾ ದ್ವಿದಳಧಾನ್ಯ ಉದ್ದು ಅಲಸಂದೆ ಬೆಳೆಗಳನ್ನು ಬೆಳೆಯವುದು ಸೂಕ್ತ’ ಎನ್ನುವುದು ಕೃಷಿ ಇಲಾಖೆ ಅಧಿಕಾರಿಗಳ ಸಲಹೆ. ‘ಮೇ ನಾಲ್ಕನೇ ವಾರದಿಂದ ಜೂನ್ ಎರಡನೇ ವಾರದವರೆಗೆ ಮೆಕ್ಕೆಜೋಳ ಬಿತ್ತಲು ಒಳ್ಳೆಯ ಸಮಯ. ಜೂನ್ ಅಂತ್ಯದವರೆಗೆ ಮೆಕ್ಕೆಜೋಳ ಬಿತ್ತಬಹುದು. ತಡವಾಗಿ ಬಿತ್ತನೆಯಾಗುವ ಬೆಳೆಗಳಿಗೆ ಸೈನಿಕ ಹುಳು ಅಥವಾ ಕಾಂಡಕೊರಕದ ಬಾಧೆ ಕಂಡು ಬರುವುದರಿಂದ ಹತೋಟಿ ಮಾಡಲು ಸೂಕ್ತ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ’ ಎಂದು ಹರಿಹರ ಕೃಷಿ ಸಹಾಯಕ ನಿರ್ದೇಶಕ ನಾರನಗೌಡ ಹೇಳಿದರು.
ಮಳೆ ಸಾಧ್ಯತೆ ಕ್ಷೀಣ ಬಿತ್ತನೆ ಬೇಡ: ಡಿ.ಶ್ರೀನಿವಾಸ್ ಜಗಳೂರು
ಅಪ್ಪಟ ಬಯಲುಸೀಮೆ ಜಗಳೂರು ತಾಲ್ಲೂಕಿನಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ತಾಲ್ಲೂಕಿನಲ್ಲಿ ಬಿತ್ತನೆ ಕಾರ್ಯಕ್ಕೆ ತೀವ್ರ ಹಿನ್ನೆಡೆಯಾಗಿದೆ. ಯಾವುದೇ ನದಿ ಅಥವಾ ಜಲಾಶಯ ಮೂಲಗಳ ನೀರಾವರಿ ಸೌಲಭ್ಯ ಇಲ್ಲದ ತಾಲ್ಲೂಕಿನಲ್ಲಿ ರೈತರು ಕೃಷಿಗಾಗಿ ಸಂಪೂರ್ಣ ಮಳೆಯನ್ನೇ ಆಶ್ರಯಿಸಿದ್ದಾರೆ. ಜೂನ್ ತಿಂಗಳ ಮಧ್ಯದವರೆಗೂ ಮಳೆಯ ಸುಳಿವೇ ಇಲ್ಲದೆ ಇಡೀ ದಿನ ಸುಡು ಬಿಸಿಲಿನಿಂದಾಗಿ ಭೂಮಿ ಕಾದ ಹೆಂಚಿನಂತಾಗಿದೆ. ಕಳೆದ ವರ್ಷ ಜೂನ್ ಎರಡನೇ ವಾರದ ವೇಳೆಗೆ 35000ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿತ್ತು. ಆದರೆ ಪ್ರಸಕ್ತ ವರ್ಷ ಈವರೆಗೆ ಕೇವಲ 11000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಮಳೆ ಇಲ್ಲದೆ ಬಿತ್ತನೆ ಆಗಿರುವ ಬೆಳೆಯೂ ಒಣಗುತ್ತಿದೆ.
ಮಳೆಯ ತೀವ್ರ ಕೊರತೆಯಿಂದಾಗಿ ಅಲ್ಲಲ್ಲಿ ಅಂತರ್ಜಲ ಕುಸಿಯಲು ಪ್ರಾರಂಭವಾಗಿದ್ದು ಕೊಳವೆಬಾವಿಗಳ ಮೂಲಕ ಕೃಷಿ ಕೈಗೊಳ್ಳುತ್ತಿರುವ ರೈತರಲ್ಲಿ ಆತಂಕ ಮೂಡಿದೆ.
ಶೇ 35ರಷ್ಟು ಕಡಿಮೆ ಮಳೆ:
‘ಕಳೆದ ವರ್ಷ ಇದೇ ಜೂನ್ 16ರವೇಳೆಗೆ 136 ಮಿ.ಮೀ ವಾಡಿಕೆ ಮಳೆಗೆ 308 ಮಿ.ಮೀ.ನಷ್ಟು ಮಳೆ ಸುರಿದಿತ್ತು. ಆದರೆ ಈ ಬಾರಿ 82 ಮಿ.ಮೀ. ಮಾತ್ರ ಮಳೆ ಬಿದ್ದಿದ್ದು ವಾಡಿಕೆ ಪ್ರಮಾಣಕ್ಕಿಂತ ಶೇ 35ರಷ್ಟು ಕಡಿಮೆ ಮಳೆಯಾಗಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ‘ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಸದ್ಯದ ಪರಿಸ್ಥಿತಿಯಲ್ಲಿ ಮಳೆ ಬರುವ ಮುನ್ಸೂಚನೆ ಇಲ್ಲ. ರೈತರು ಯಾವುದೇ ಕಾರಣಕ್ಕೂ ಬಿತ್ತನೆ ಕಾರ್ಯದಲ್ಲಿ ತೊಡಗಬಾರದು. ಮಳೆ ಬಂದ ನಂತರ ಮಣ್ಣಿನಲ್ಲಿ ಸಾಕಷ್ಟು ತೇವಾಂಶ ಇರುವುದನ್ನು ದೃಢಪಡಿಸಿಕೊಂಡು ನಂತರ ಬಿತ್ತನೆ ಮಾಡಬೇಕು’ ಎಂದು ಮಿಥುನ್ ಕಿಮಾವತ್ ರೈತರಲ್ಲಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.