ಮಲೇಬೆನ್ನೂರು: ಪ್ರಸಕ್ತ ಸಾಲಿನ ವಾರದ ಸಂತೆ, ದೈನಂದಿನ ಮಾರುಕಟ್ಟೆ, ಕೋಳಿ, ಕುರಿ ಮಾಂಸ ಮಾರಾಟ ಅಂಗಡಿ ಹರಾಜು ಪ್ರಕ್ರಿಯೆ ಮಂಗಳವಾರ ಪುರಸಭಾ ಸಭೆ ಸಭಾಭವನದಲ್ಲಿ ಶಾಂತಿಯುತವಾಗಿ ನಡೆಯಿತು.
2024– 25ನೇ ಸಾಲಿಗೆ ವಾರದ ಸಂತೆ ₹ 5.50 ಲಕ್ಷಕ್ಕೆ, ದಿನವಹಿ ಸಂತೆ ಮಾರುಕಟ್ಟೆ ₹ 3.85 ಲಕ್ಷಕ್ಕೆ ಹಾಗೂ ಕುರಿ, ಕೋಳಿ ಮಾಂಸ ಮಾರಾಟ ಅಂಗಡಿ ₹ 3.34 ಲಕ್ಷಕ್ಕೆ ಹರಾಜಾದವು.
ಹರಾಜಿನಿಂದ ಬಂದ ಆದಾಯ ಒಟ್ಟು ₹ 12.69 ಲಕ್ಷ. ಕಳೆದ ಸಾಲಿಗಿಂತ ಹೆಚ್ಚಿನ ಬೆಲೆಗೆ ಹರಾಜು ಪ್ರಕ್ರಿಯೆ ನಡೆದದ್ದು ವಿಶೇಷ. ಹರಾಜು ಪ್ರಕ್ರಿಯೆ ಬಿರುಸಿನಿಂದ ಕೂಡಿತ್ತು. ಹೆಚ್ಚಿನ ಬಿಡ್‌ದಾರರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಪುರಸಭೆ ಅಧ್ಯಕ್ಷ ಹನುಮಂತಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ಮುಖ್ಯಾಧಿಕಾರಿ ಬಜಕ್ಕನವರ್, ಕಂದಾಯ ಅಧಿಕಾರಿ ಧನಂಜಯ, ಕಂದಾಯ ನಿರೀಕ್ಷಕ ರಾಮಚಂದ್ರಪ್ಪ, ಸಮುದಾಯ ಸಂಘಟನಾಧಿಕಾರಿ ನಿಟುವಳ್ಳಿ ದಿನಕರ್, ಪರಿಸರ ಎಂಜಿನಿಯರ್ ಎಸ್. ಉಮೇಶ್, ಆರೋಗ್ಯ ನಿರೀಕ್ಷಕ ಶಿವರಾಜ್, ಪರಶುರಾಮ್, ನಿಂಗರಾಜ್, ವೆಂಕಟೇಶ್, ಪುರಸಭಾ ಸದಸ್ಯರು, ನಾಮನಿರ್ದೇಶಿತ ಸದಸ್ಯರು, ಬಿಡ್‌ದಾರರು ಹಾಗೂ ನಾಗರಿಕರು ಇದ್ದರು.
ಜಿಎಸ್‌ಟಿ: ಹರಾಜಿನ ಮೊತ್ತದ ಮೇಲೆ ಶೇ 15 ಜಿಎಸ್‌ಟಿ ಇರುವುದಕ್ಕೆ ಬಿಡ್‌ದಾರರು ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯಾಧಿಕಾರಿ ಸ್ಪಷ್ಟನೆ ನೀಡಿ ಬಿಡ್‌ದಾರರನ್ನು ಸಮಾಧಾನಗೊಳಿಸಿದರು.
ಅಂಗಡಿ ಮಾಲೀಕರು ಪರಿಸರ ರಕ್ಷಣೆಗಾಗಿ ಮಳಿಗೆ ನವೀಕರಿಸಲು, ನಲ್ಲಿ ನೀರು ಹಾಗೂ ರೋಲಿಂಗ್ ಶಟರ್ ಮಾದರಿ ಗೇಟ್ ಅಳವಡಿಸಲು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.