
ಮಾಯಕೊಂಡ: ‘ಶಿಕ್ಷಣವನ್ನು ಖಾಸಗೀಕರಣ ಹಾಗೂ ವ್ಯಾಪಾರೀಕರಣ ಮಾಡಿ ಖಾಸಗಿಯವರ ಜೇಬು ತುಂಬಿಸುವ ಹುನ್ನಾರ ಸರ್ಕಾರದ್ದಾಗಿದೆ. ಈ ಕಾರಣಕ್ಕೆ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿದೆ’ ಎಂದು ಎಐಡಿಎಸ್‌ಒ ರಾಜ್ಯ ಘಟಕದ ಉಪಾಧ್ಯಕ್ಷೆ ಅಪೂರ್ವ ಸಿ.ಎಂ. ಆರೋಪಿಸಿದರು.
ಸಮೀಪದ ನಲ್ಕುಂದ ಗ್ರಾಮದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ಇಲ್ಲಿನ ಸರ್ಕಾರಿ ಶಾಲೆ ಮುಚ್ಚುವುದನ್ನ ವಿರೋಧಿಸಿ ಶುಕ್ರವಾರ ನಡೆದ ಹೋಬಳಿ ಮಟ್ಟದ ಪೋಷಕರ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದರು.
‘ಪ್ರತಿಯೊಬ್ಬ ವಿದ್ಯಾರ್ಥಿಗೂ ವೈಜ್ಞಾನಿಕ - ಧರ್ಮ ನಿರಪೇಕ್ಷ ಹಾಗೂ ಪ್ರಜಾಸತ್ತಾತ್ಮಕ ಶಿಕ್ಷಣ ನೀಡಬೇಕು. ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ರಾಜ್ಯದಲ್ಲಿ 40,000 ಸರ್ಕಾರಿ ಶಾಲೆಗಳು ಮುಚ್ಚಲಿವೆ. ಗ್ರಾಮ ಪಂಚಾಯಿತಿಗೆ ಒಂದು ಸರ್ಕಾರಿ ಶಾಲೆ ಎಂಬಂತೆ, ಕೇವಲ ಆರು ಸಾವಿರ ಸರ್ಕಾರಿ ಶಾಲೆಗಳು ಮಾತ್ರ ಉಳಿಯಲಿವೆ. ಸಾರಿಗೆ ವ್ಯವಸ್ಥೆಯೇ ಇಲ್ಲದ ಹಳ್ಳಿಗಳಿಂದ ವಿದ್ಯಾರ್ಥಿಗಳು ಹೇಗೆ ಈ ಶಾಲೆಗಳನ್ನು ತಲುಪುವರು?’ ಎಂದು ಪ್ರಶ್ನಿಸಿದರು.
‘ಸರ್ಕಾರ ಕೇವಲ ಸರ್ಕಾರಿ ಶಾಲೆಗಳ ಮೇಲೆ ದಾಳಿ ಮಾಡಿಲ್ಲ. ಇದು ರಾಜ್ಯದ ಪ್ರತಿಯೊಂದು ಹಳ್ಳಿಯ ರೈತ ಕಾರ್ಮಿಕರ ಭಾವನೆಗಳ ಮೇಲೆ ಮಾಡಿರುವ ದಾಳಿಯಾಗಿದೆ’ ಎಂದು ಎಐಕೆಕೆಎಂಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮಧು ತೊಗಲೇರಿ ಆಕ್ರೋಶ ವ್ಯಕ್ತಪಡಿಸಿದರು.
‘ಸರ್ಕಾರಿ ಶಾಲೆಗಳನ್ನು ಖಾಸಗೀಕರಣ ಮಾಡುವ ಹುನ್ನಾರದ ವಿರುದ್ಧ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ’ ಎಂದು ಎಐಡಿಎಸ್‌ಒ ಜಿಲ್ಲಾ ಘಟಕದ ಅಧ್ಯಕ್ಷೆ ಪೂಜಾ ನಂದಿಹಳ್ಳಿ ಹೇಳಿದರು.
ಈ ವೇಳೆ ಶಿಕ್ಷಣ ಇಲಾಖೆಯ ಟಿ.ಪಿ. ವಿಜಯ್ ಕುಮಾರ್, ಶಿಕ್ಷಣ ಸಂಯೋಜಕ ಗೋವಿಂದರಾಜು, ಸಿಆರ್‌ಪಿ ಪ್ರಸನ್ನಕುಮಾರ್ ಮನವಿ ಸ್ವೀಕರಿಸಿದರು.
ನಲ್ಕುಂದ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ. ರಂಗಸ್ವಾಮಿ, ಶಿಕ್ಷಣ ಉಳಿಸಿ ಸಮಿತಿ ಅಧ್ಯಕ್ಷ ಮಹಾರುದ್ರಪ್ಪ, ಶಂಕರನಹಳ್ಳಿ ರವಿಕುಮಾರ್, ಒಂಟಿಹಾಳ್ ಮಹೇಶ್ ಮಾತನಾಡಿದರು.
ಈ ವೇಳೆ ಎಐಡಿಎಸ್‌ಒ ಜಿಲ್ಲಾ ಘಟಕದ ಕಾರ್ಯದರ್ಶಿ ಸುಮನ್ ಟಿ.ಎಸ್., ಆಂಜನೇಯ, ದೇವೇಂದ್ರಪ್ಪ, ಮಾರುತಿ, ಕಂಬೇಶ್, ಸಿಂಧು, ಸುಜಾತಾ, ಉಷಾ, ದೀಪಾ, ವಿವಿಧ ಗ್ರಾಮಗಳ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.