ADVERTISEMENT

ಮಾಯಕೊಂಡ: ಕೇಳುವವರಿಲ್ಲ ಎ.ಕೆ. ಕಾಲೊನಿ ನಿವಾಸಿಗಳ ಸಂಕಷ್ಟ

ಮಾಯಕೊಂಡ: ನಿವೇಶನದ ಕೊರತೆಯಿಂದ ಚಿಕ್ಕ ಮನೆಗಳಲ್ಲಿ ವಾಸ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 10:45 IST
Last Updated 14 ಫೆಬ್ರುವರಿ 2026, 10:45 IST
ಮಾಯಕೊಂಡ ಗ್ರಾಮದ ಎ.ಕೆ. ಕಾಲೊನಿಯಲ್ಲಿ ಗಬ್ಬು ನಾರುತ್ತಿರುವ ಚರಂಡಿ
ಮಾಯಕೊಂಡ ಗ್ರಾಮದ ಎ.ಕೆ. ಕಾಲೊನಿಯಲ್ಲಿ ಗಬ್ಬು ನಾರುತ್ತಿರುವ ಚರಂಡಿ   

ಮಾಯಕೊಂಡ: ಕಿರಿದಾದ ರಸ್ತೆಗಳು, ಸ್ವಚ್ಛತೆ ಕಾಣದೆ ಗಬ್ಬು ನಾರುತ್ತಿರುವ ಚರಂಡಿಗಳು, ಚಿಕ್ಕಚಿಕ್ಕ ಮನೆಗಳು, ಪುಟ್ಟ ಮನೆಗಳಲ್ಲಿ ವಾಸಿಸುವ ಕುಟುಂಬಗಳು, ಕೆಲವರಿಗೆ ತಲೆಮೇಲೆ ಸೂರಿಲ್ಲ, ಇನ್ನೂ ಕೆಲವು ಕುಟುಂಬಗಳಿಗೆ ನಿವೇಶನವೇ ಇಲ್ಲ. ಮೂಲ ಸೌಲಭ್ಯಗಳಿಂದ ವಂಚಿತವಾಗಿ ಜೀವನ ನಡೆಸುವ ದುಃಸ್ಥಿತಿ ಗ್ರಾಮದ ಆದಿ ಕರ್ನಾಟಕ (ಎ.ಕೆ) ಕಾಲೊನಿಯ ನಿವಾಸಿಗಳದ್ದಾಗಿದೆ.

ಮಾಯಕೊಂಡ ಹೆಸರಿಗೆ ಮಾತ್ರ ಹೋಬಳಿ ಹಾಗೂ ವಿಧಾನಸಭಾ ಕ್ಷೇತ್ರದ ಕೇಂದ್ರ ಸ್ಥಾನ. ಆದರೆ, ಮೂಲ ಸೌಲಭ್ಯಗಳಿಂದ ಮಾರು‌ ದೂರ ಉಳಿದಿದೆ. ಇಲ್ಲಿನ ಎ.ಕೆ. ಕಾಲೊನಿಯಲ್ಲಿ ಕೂಲಿ ಕಾರ್ಮಿಕ ಕುಟುಂಬಗಳೇ ಹೆಚ್ಚಾಗಿ ವಾಸಿಸುತ್ತಿದ್ದು, ಬಹುತೇಕರಿಗೆ ಜಮೀನು ಇಲ್ಲ. ಅಂದಾಜು 100 ಮನೆಗಳಲ್ಲಿ 150ಕ್ಕೂ ಹೆಚ್ಚು ಕುಟುಂಬಗಳು ವಾಸಿಸುವ ಅನಿವಾರ್ಯತೆ ಇದೆ. ಒಂದೊಂದು ಮನೆಯಲ್ಲಿ ಎರಡು–ಮೂರು ಕುಟುಂಬಗಳು ವಾಸಿಸುತ್ತಿವೆ. ಆದರೂ ಸೌಲಭ್ಯ ಒದಗಿಸುವಲ್ಲಿ ಜನಪ್ರತಿನಿಧಿಗಳು, ಪಂಚಾಯಿತಿ ಪ್ರತಿನಿಧಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. 

ಹಲವು ದಶಕಗಳ ಹಿಂದೆ ನಿರ್ಮಿಸಿದ್ದ ಜನತಾ ಮನೆಗಳು ಬೀಳುವ ಹಂತ ತಲುಪಿವೆ. ದುರಸ್ತಿ ಮಾಡಿಸುವುದಕ್ಕಾಗಲೀ, ಹೊಸದಾಗಿ‌ ನಿರ್ಮಿಸಿಕೊಳ್ಳುವ ಶಕ್ತಿಯಾಗಲೀ ಇಲ್ಲದವರು ಅನಿವಾರ್ಯವಾಗಿ ಇಂತಹ ಮನೆಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ಹೊಸದಾಗಿ ಮನೆ ಕಟ್ಟಿಕೊಳ್ಳಲು ನಿವೇಶನಗಳ ಕೊರತೆಯೂ ಗ್ರಾಮದಲ್ಲಿ ಇದೆ. ಈ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂದಾಗುತ್ತಿಲ್ಲ ಎಂದು ನಿವಾಸಿಗಳಾದ ಮಾರುತಿ, ಪರಶುರಾಮ್, ಕೋಟೆಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಮನೆ ನಿರ್ಮಿಸಿಕೊಳ್ಳಲು ಮೊದಲು ನಿವೇಶನ ಮಂಜೂರು ಮಾಡಿ ನಂತರ ಮನೆ ನಿರ್ಮಿಸಿದಾಗ ಮಾತ್ರ ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಮಾಯಕೊಂಡದ ಎ.ಕೆ. ಕಾಲೊನಿಯಲ್ಲಿ ಕಿಷ್ಕಿಂಧೆಯಂತಿರುವ ಓಣಿ
ಇಲ್ಲಿನ‌ ನಿವಾಸಿಗಳಿಗೆ ಶೌಚಾಲಯದ ವ್ಯವಸ್ಥೆ ಇಲ್ಲ. ಸ್ವಚ್ಛತೆ ಹಾಗೂ ಸೂಕ್ತ ಸೌಲಭ್ಯಗಳಿಲ್ಲದೇ ಪರದಾಡುತ್ತಿದ್ದಾರೆ. ನಿವೇಶನ ಹಾಗೂ ಮನೆ ನಿರ್ಮಿಸಿಕೊಡುವಂತೆ ಶಾಸಕರಿಗೆ ಮನವಿ ಮಾಡಿದ್ದರೂ ಇನ್ನೂ ದೊರೆತಿಲ್ಲ
ಮನು ಕೆ.ಎಸ್. ಎ.ಕೆ. ಕಾಲೊನಿಯ ನಿವಾಸಿ
ಮಾಯಕೊಂಡದ ಎ.ಕೆ. ಕಾಲೊನಿ‌ ಜನತೆ ಸಂಕಷ್ಟದಲ್ಲಿದ್ದರೆ. ಕಿರಿದಾದ ರಸ್ತೆಗಳಿದ್ದು ಚರಂಡಿಗಳ ಸ್ಥಿತಿ ಹೇಳತೀರದು. ನಿವಾಸಿಗಳಿಗೆ ಬದುಕು ಕಟ್ಟಿಕೊಳ್ಳಲು ಸರ್ಕಾರ ನೆರವಾಗಬೇಕು
ಎಂ.ಜಿ. ಗುರುನಾಥ್ ಗ್ರಾಮದ ಮುಖಂಡ
ನಿವೇಶನ ರಹಿತ ಪರಿಶಿಷ್ಟರಿಗೆ ನಿವೇಶನದ ಜೊತೆ ಲೋಕೋಪಯೋಗಿ ಇಲಾಖೆಯಿಂದ ವಸತಿ ನಿರ್ಮಿಸಿಕೊಡುವ ಯೋಜನೆಯ ಬಗ್ಗೆ ಚರ್ಚೆ ನಡೆದಿದ್ದು ಆದ್ಯತೆ ಮೇಲೆ ಮಾಡಿಕೊಡಲಾಗುವುದು
ಕೆ.ಎಸ್.ಬಸವಂತಪ್ಪ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.