
ಮಂಜುನಾಥ್ ಎಸ್.ಎಂ.
ಮಾಯಕೊಂಡ: ಭಾರತೀಯ ಆಹಾರ ಪದ್ಧತಿಯಲ್ಲಿ ಪ್ರತಿ ಋತುವಿಗೆ ತಕ್ಕಂತೆ ತರಕಾರಿ, ಧಾನ್ಯ, ಹಣ್ಣು, ಆಹಾರ ಬಳಕೆ ರೂಢಿಯಲ್ಲಿದೆ.
ಸದ್ಯ ಸಂಕ್ರಾಂತಿವರೆಗೆ ಅಡುಗೆ ಮನೆಯಲ್ಲಿ ನೆಲೆಗೊಳ್ಳುವ ಸೊಗಡಿನ ಅವರೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಚಳಿಗಾಲ ಮುಗಿಯುವವರೆಗೂ ಮಾರುಕಟ್ಟೆ, ಮನೆಗಳಲ್ಲಿ ಅವರೆ ಕಾಯಿಯದ್ದೇ ಘಮಲು.
ಚಳಿಗಾಲ ಶುರುವಾಗುವ ವೇಳೆಗೆ ಸರಿಯಾಗಿ ಅವರೆ ಕಾಯಿ ಬೆಳೆ ಆರಂಭವಾಗುತ್ತದೆ. ಅಂದಾಜು ಮೂರು ತಿಂಗಳವರೆಗೂ ಮಾರುಕಟ್ಟೆ ಮೇಲೆ ತನ್ನ ಪ್ರಾಭಲ್ಯ ಉಳಿಸಿಕೊಂಡು ಮೆರೆಯುವ ಅವರೆ ರೈತರಿಗೂ ಹೆಚ್ಚು ಆದಾಯ ತರುವ ಬೆಳೆಯಾಗಿ, ರೈತರನ್ನು ಆರ್ಥಿಕವಾಗಿ ಸಭಲರನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಈಗಾಗಲೇ ಮಾರುಕಟ್ಟೆಗೆ ಅವರೆಕಾಯಿ ಕಾಲಿಟ್ಟಿದ್ದು, ಮಾಯಕೊಂಡ, ಆನಗೋಡು, ಅಣಜಿ ಹೋಬಳಿಯ ರೈತರು ನಿತ್ಯವೂ ಅವರೆಕಾಯಿ ಕಿತ್ತು ಮಾರಾಟ ಮಾಡುತ್ತ ಉತ್ತಮ ಆದಾಯ ಪಡೆಯುತ್ತಿದ್ದಾರೆ.
ರೈತರ ಜಮೀನಿನಲ್ಲೇ ಖರೀದಿ:
ದಾವಣಗೆರೆ ತಾಲ್ಲೂಕಿನಲ್ಲಿ ಅಂದಾಜು 250 ಹೆಕ್ಟೇರ್ ಪ್ರದೇಶದಲ್ಲಿ ಅವರೆ ಬೆಳೆದಿದ್ದು, ಉತ್ತಮ ಇಳುವರಿ ಬರುತ್ತಲಿದೆ. ಬೆಳೆಯನ್ನು ಮೊದಲೆಲ್ಲ ಬೆಂಗಳೂರು, ದಾವಣಗೆರೆ ಮಾರುಕಟ್ಟೆಗೆ ಸಾಗಿಸಬೇಕಿತ್ತು. ಆದರೆ ಇತ್ತೀಚೆಗೆ ನಿತ್ಯವೂ ಖರೀದಿದಾರರು ರೈತರ ಜಮೀನಿಗೆ ಬಂದು ಖರೀದಿಸುತ್ತಾರೆ. ಇದರಿಂದ ಮಾರುಕಟ್ಟೆಗೆ ಸಾಗಿಸುವ ವೆಚ್ಚ, ಮಧ್ಯವರ್ತಿಗಳಿಗೆ ಕಮಿಷನ್ ಕೊಡುವ ಹೊರೆ ಇಲ್ಲದಂತಾಗಿದೆ.
ಪ್ರಸಕ್ತ ವರ್ಷ ನವೆಂಬರ್ ತಿಂಗಳಲ್ಲಿ ಕೆ.ಜಿ. ಅವರಗೆ ₹ 60 ಇದ್ದ ದರ ಈಗ ₹ 40ರಂತೆ ಖರೀದಿ ನಡೆಯುತ್ತಿದ್ದು, ಇದೇ ದರ ಮುಂದುವರಿದರೆ ಉತ್ತಮ ಲಾಭ ಗಳಿಸುವ ನಿರೀಕ್ಷೆ ರೈತರಿಗಿದೆ.
ಮುಖ್ಯ ಬೆಳೆಯಾಗಿ ಅವರೆ:
ಮೊದಲೆಲ್ಲ ಮೆಕ್ಕೆಜೋಳ, ರಾಗಿ, ಹತ್ತಿ ಇತ್ಯಾದಿ ಬೆಳೆಗಳಲ್ಲಿ ಅಂತರ ಬೆಳೆಯಾಗಿದ್ದ ಅವರೆ ಈಗೀಗ ಏಕ ಬೆಳೆಯಾಗಿ ಅಥವಾ ಮೂರು ವರ್ಷದವರೆಗೂ ಅಡಿಕೆ ತೋಟಗಳಲ್ಲಿ ಬೆಳೆಯುತ್ತಾರೆ. ಬರುವ ಫಸಲನ್ನು ಕಟಾವು ಮಾಡಿ ಮಾರಾಟ ಮಾಡಿ, ಲಾಭ ಮಾಡುತ್ತಾರೆ. ನಂತರ ಜಾನುವಾರುಗಳಿಗೆ ಉತ್ತಮ ಮೇವು ಆಗಿ ಬಳಸಿಕೊಳ್ಳುತ್ತಾರೆ. ಇಲ್ಲವೆ ಅಡಿಕೆ ತೋಟಗಳಲ್ಲಿ ಬಳ್ಳಿಯನ್ನು ಕಟಾವು ಮಾಡಿ ನಂತರ ಮಣ್ಣಿಗೆ ಸೇರಿಸುತ್ತಾರೆ. ಇದರಿಂದ ಉತ್ತಮ ಹಸಿರೆಲೆ ಗೊಬ್ಬರವಾಗಿಯೂ ಬಳಸಿಕೊಳ್ಳಲಾಗುತ್ತಿದೆ.
Quote - ದಾವಣಗೆರೆ ತಾಲ್ಲೂಕಿನಲ್ಲಿ ಈ ಬಾರಿ ಅವರೆಕಾಯಿ ಬೆಳೆ ಅಂದಾಜು 250 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು ತಾಲ್ಲೂಕಿನಲ್ಲಿ ಮಣಿ ಅವರೆ ಹೆಚ್ಚು ಬೆಳೆಯುತ್ತಾರೆ. ಇದು ಉತ್ತಮ ಸೊಗಡು ಹೊಂದಿದ್ದು ಬೇಡಿಕೆ ಇದೆ ಡಿ.ಎಂ. ಶ್ರೀಧರಮೂರ್ತಿ ಸಹಾಯಕ ಕೃಷಿ ನಿರ್ದೇಶಕ
Quote - ಮಾಯಕೊಂಡ ಆನಗೋಡು ಹೋಬಳಿಗಳಲ್ಲಿ ರೈತರಿಂದ ಅವರೆಕಾಯಿ ಖರೀದಿಸಿ ಮಾರಾಟ ಮಾಡುತ್ತೇವೆ. ಕಳೆದ ತಿಂಗಳು ಉತ್ತಮ ಧಾರಣೆ ಇತ್ತು. ಈಗಾಗಲೇ ಕೆ.ಜಿ.ಗೆ ₹ 30ರ ಆಸುಪಾಸಿಗೆ ಬಂದಿದೆ. ಸಂಕ್ರಾಂತಿ ವೇಳೆಗೆ ದರ ಕೊಂಚ ಏರಬಹುದು ಹೊನ್ನನಾಯ್ಕನಹಳ್ಳಿ ಗಣೇಶ್ ಅವರೆಕಾಯಿ ಖರೀದಿದಾರ
Quote - ಅವರೆ ಬೆಳೆಯನ್ನ ಪ್ರತೀ ವರ್ಷ ಬೆಳೆಯುತ್ತಿದ್ದು ಫಸಲು ಚೆನ್ನಾಗಿದೆ. ಕಳೆದ ತಿಂಗಳು ಬೆಲೆ ಉತ್ತಮವಾಗಿತ್ತು. ಒಂದು ವಾರದಿಂದ ದರ ಕೊಂಚ ಇಳಿದಿದ್ದು ದರ ಕುಸಿದರೆ ನಷ್ಟ ಉಂಟಾಗುತ್ತದೆ ಬೀರಗೊಂಡರ ರವಿಕುಮಾರ್ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.