
ಮಾಯಕೊಂಡ: ಸಮೀಪದ ಜಮೀನಿನಲ್ಲಿ ಆಸ್ತಿ ಕಲಹದಿಂದ ಅಣ್ಣನೇ ತನ್ನ ತಮ್ಮನನ್ನು ಸೋಮವಾರ ಹತ್ಯೆ ಮಾಡಿದ್ದಾನೆ.
ಗ್ರಾಮದ ನೀಲಪ್ಪ (68) ಹತ್ಯೆಯಾದವರು.
ಗ್ರಾಮದ ಪೂಜಾರ್ ಚಂದ್ರಪ್ಪ ಹಾಗೂ ಅವರ ಸಹೋದರ ನೀಲಪ್ಪ ನಡುವೆ ಆಸ್ತಿ ವಿಚಾರವಾಗಿ ಹಲವು ವರ್ಷಗಳಿಂದ ಜಗಳವಿತ್ತು. ಭೂವ್ಯಾಜ್ಯ ನ್ಯಾಯಾಲಯದ್ದರೂ ಚಂದ್ರಪ್ಪ ಅವರು ಜಮೀನಿನಲ್ಲಿ ಬೆಳೆ ಬೆಳೆಯಲು ತೊಂದರೆ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.
ನೀಲಪ್ಪ ಹಸುಗಳನ್ನು ಮೇಯಿಸಲು ತಮ್ಮ ಜಮೀನಿಗೆ ಹೋದಾಗ, ಅಲ್ಲಿ ಅಣ್ಣನೊಂದಿಗೆ ಮತ್ತೆ ವಾಗ್ವಾದ ಶುರುವಾಗಿ, ಅದು ತಾರಕಕ್ಕೇರಿದೆ. ಚಂದ್ರಪ್ಪ ಮಾರಕಾಸ್ತ್ರದಿಂದ ತಲೆ ಹಾಗೂ ದೇಹದ ಇತರ ಭಾಗಗಳ ಮೇಲೆ ಹಲ್ಲೆ ನಡೆಸಿದ್ದರಿಂದ ನೀಲಪ್ಪ ಕುಸಿದು ಬಿದ್ದರು. ತೀವ್ರ ರಕ್ತಸ್ರಾವಗೊಂಡಿದ್ದ ಅವರನ್ನು ಪುತ್ರ ರಾಕೇಶ ಮತ್ತು ಸ್ನೇಹಿತರು ಮಾಯಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಯಲ್ಲಿ ನೀಲಪ್ಪ ಮೃತಪಟ್ಟಿರುವುದಾಗಿ ವೈದ್ಯರು ಮಾಹಿತಿ ನೀಡಿದರು ಎಂದು ತಿಳಿದು ಬಂದಿದೆ.
ಪ್ರಕರಣ ಮಾಯಕೊಂಡ ಠಾಣೆಯಲ್ಲಿ ದಾಖಲಾಗಿದ್ದು, ಚಂದ್ರಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
ಠಾಣೆಯ ಮುಂದೆ ಪ್ರತಿಭಟನೆ: ಆರೋಪಿ ಚಂದ್ರಪ್ಪ ಸೇರಿದಂತೆ ಅವರ ಕುಟುಂಬದ ನಾಲ್ವರ ವಿರುದ್ಧ ದೂರು ನೀಡಿದ್ದರೂ ಪೊಲೀಸರು ಚಂದ್ರಪ್ಪ ವಿರುದ್ಧ ಮಾತ್ರ ದೂರು ದಾಖಲಿಸಿ, ಬಂಧಿಸಿದ್ದಾರೆ ಎಂದು ಆರೋಪಿಸಿ ಮೃತರ ಸಂಬಂಧಿಕರು ಇಲ್ಲಿನ ಪೊಲೀಸ್ ಠಾಣೆ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.
ಉಳಿದವರ ಮೇಲೂ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದರು.
‘ಪ್ರಕರಣದಲ್ಲಿ ಭಾಗಿಯಾದ ಯಾರನ್ನೂ ಕೈಬಿಡುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದ ಡಿವೈಎಸ್‌ಪಿ ಬಸವರಾಜ್, ಪ್ರತಿಭಟನನಿರತರನ್ನು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಈ ವೇಳೆ ಸಿಪಿಐ ರಾಘವೇಂದ್ರ, ಪಿಎಸ್‌ಐ ಅಜ್ಜಪ್ಪ ಮತ್ತು ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.