
ದಾವಣಗೆರೆ: ‘ಮನುಷ್ಯ ತನ್ನ ದೇಹದ ಮೇಲೆ ನಿಯಂತ್ರಣ ಇಟ್ಟುಕೊಳ್ಳುವುದು ಅಸಾಧ್ಯ. ಆದರೆ, ಸ್ವಲ್ಪ ಕಷ್ಟಪಟ್ಟರೆ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಬಹುದು’ ಎಂದು ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್ ಅಭಿಪ್ರಾಯಪಟ್ಟರು.
ನಗರದ ಮಾತೃಛಾಯಾ ಉದ್ಯಾನದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಧ್ಯಾನ ದಿನಾಚರಣೆ ಹಾಗೂ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಅಷ್ಟಾಂಗ ಯೋಗ ಕುರಿತು ಮಾತನಾಡಿದರು.
‘ಮನಸ್ಸಿನೊಂದಿಗೆ ಯಾನ ಮಾಡುವುದೇ ಧ್ಯಾನ. ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಧ್ಯಾನಾಸಕ್ತರಾದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ’ ಎಂದರು.
‘ಪಾಲಕರು ಹೆಚ್ಚು ಅಂಕ ಗಳಿಸುವಂತೆ ಮಕ್ಕಳಿಗೆ ದುಂಬಾಲು ಬೀಳದೆ ಸಾಮಾಜಿಕ, ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಮೂಲಕ ಉತ್ತಮ ವ್ಯಕ್ತಿಯನ್ನಾಗಿ ರೂಪಿಸಬೇಕು’ ಎಂದು ಸಲಹೆ ನೀಡಿದರು.
‘ಮಕ್ಕಳಲ್ಲಿ ಎಳವೆಯಿಂದಲೇ ಸಾಹಸ ಪ್ರವೃತ್ತಿ ಬೆಳೆಸಬೇಕು. ಈ ನಿಟ್ಟಿನಲ್ಲಿ ಮೊದಲು ಯೋಗಾಭ್ಯಾಸಕ್ಕೆ ಕಳುಹಿಸುವುದು ಸೂಕ್ತ’ ಎಂದು ಹಿಮಾಲಯನ್ ಅಡ್ವೆಂಚರ್ ಅಕಾಡೆಮಿ ಮುಖ್ಯಸ್ಥ ಎನ್.ಕೆ. ಕೊಟ್ರೇಶ ಹೇಳಿದರು.
ಜಾರ್ಖಂಡ್‌ನ ರಾಂಚಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಕಿರಿಯರ ಯೋಗ ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಸೇವೆ ಸಲ್ಲಿಸಲು ತೆರಳಲಿರುವ ಅಷ್ಟಾಂಗ ವಿನ್ಯಾಸ ಯೋಗ ಅಕಾಡೆಮಿಯ ಅಧ್ಯಕ್ಷ ತೀರ್ಥರಾಜ ಹೋಲೂರ್ ಹಾಗೂ ಸುಮಾ ಹೋಲೂರ್ ಅವರನ್ನು ಬೀಳ್ಕೊಡಲಾಯಿತು.
19 ವರ್ಷದೊಳಗಿನ ಕೂಚ್ ಬಿಹಾರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿರುವ ದಾವಣಗೆರೆಯ ಆಟಗಾರ ಎ.ಎ.ರೋಹಿತ್ ಅವರನ್ನು ಸತ್ಕರಿಸಲಾಯಿತು.
ಮಾತೃಛಾಯಾ ಯೋಗ ಕೇಂದ್ರದ ಅಧ್ಯಕ್ಷ ಅಗಸನಕಟ್ಟೆ ಅರುಣ್, ಯೋಗ ಶಿಕ್ಷಕ ಚಂದ್ರಪ್ಪ ಡಿ, ಗಂಗಾಂಬಿಕಾ, ಪುಷ್ಪಾ ವಾಲಿ, ಸ್ವಪ್ನಾ ಅರುಣ್ ಹಾಜರಿದ್ದರು. ಅಕ್ಷರಾ ಮತ್ತು ಇಂಪನಾ ಯೋಗ ನೃತ್ಯ ಪ್ರದರ್ಶಿಸಿದರು.
ಈಚೆಗೆ ಬೆಂಗಳೂರಿನಲ್ಲಿ ನಡೆದ ಗ್ಲೋಬಲ್ ಯೋಗ ಶೃಂಗದಲ್ಲಿ ಭಾಗವಹಿಸಿದ್ದ ಯೋಗಪಟುಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಯೋಗ ಗುರು ಅನಿಲ್ ಕುಮಾರ್ ರಾಯ್ಕರ್ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.