
ಮಾಯಕೊಂಡ: ಸಮೀಪದ ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಕಿರು ಪ್ರಾಣಿ ಸಂಗ್ರಹಾಲಯವನ್ನು ರಾಷ್ಟ್ರೀಯ ಹೆದ್ದಾರಿಯ ವಿಜ್ಞಾನ ಕೇಂದ್ರದ ಸಮೀಪಕ್ಕೆ ಸ್ಥಳಾಂತರ ಮಾಡಿ ಇನ್ನಷ್ಟು ಆಕರ್ಷಣೀಯ ಪ್ರವಾಸಿ ತಾಣವಾಗಿಸುವಂತೆ ಶಾಸಕ ಕೆ.ಎಸ್.ಬಸವಂತಪ್ಪ ಅವರು ಜಿಲ್ಲಾಧಿಕಾರಿಗೆ ಸಲಹೆ ನೀಡಿದರು.
ಆನಗೋಡು ಬಳಿಯ ಕಿರು ಪ್ರಾಣಿ ಸಂಗ್ರಹಾಲಯಕ್ಕೆ ಈಚೆಗೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ, ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.
ಪ್ರಾಣಿ ಸಂಗ್ರಹಾಲಯವನ್ನು ಅಭಿವೃದ್ಧಿಪಡಿಸಿದರೆ ಪ್ರವಾಸಿ ತಾಣವಾಗಿ ರೂಪುಗೊಳ್ಳಲಿದ್ದು, ಸರ್ಕಾರಕ್ಕೆ ಆದಾಯ ಬರಲಿದೆ. ಆನಗೋಡು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಿರುವುದರಿಂದ ಇಲ್ಲಿ ಕಿರು ಪ್ರಾಣಿ ಸಂಗ್ರಹಾಲಯವು ಇದ್ದೂ ಇಲ್ಲದಂತಾಗಿದೆ. ಇದರಿಂದ ಪ್ರವಾಸಿಗರ ಸಂಖ್ಯೆಯೂ ಕ್ಷೀಣಿಸುತ್ತಿದೆ. ಈ ನಿಟ್ಟಿನಲ್ಲಿ ಪ್ರಾಣಿ ಸಂಗ್ರಹಾಲಯವನ್ನು ವಿಜ್ಞಾನ ಕೇಂದ್ರದ ಪಕ್ಕಕ್ಕೆ ಸ್ಥಳಾಂತರ ಮಾಡಿ ಅಭಿವೃದ್ಧಿ ಮಾಡಿದರೆ ಅನುಕೂಲವಾಗಲಿದೆ ಎಂದು ವಿವರಿಸಿದರು.
‘ಇಲ್ಲಿರುವ ದೊಡ್ಡ ಪ್ರಾಣಿ ಎಂದರೆ ಕರಡಿ. ಮೃಗಾಲಯ ಅಭಿವೃದ್ಧಿಪಡಿಸಿದರೆ ಸಿಂಹ, ಹುಲಿ, ಚಿರತೆಗಳನ್ನೂ ತಂದು, ಆಕರ್ಷಣೀಯ ಮಾಡಬಹುದು. ಈ ಬಗ್ಗೆ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸುತ್ತೇನೆ’ ಎಂದು ತಿಳಿಸಿದರು.
ಇಲ್ಲಿ ಬಜರಿಗಾರ್, ವಲ್ ಬರ್ಡ್ಸ್, ಗಿಳಿ, ನವಿಲು, ಗೋಲ್ಡನ್ ಯೆಲ್ಲೋ ಫೆಸೆಂಟ್, ಲೇಡಿ ಆಮ್‌ಹರ್ಟ್ಸ್ ಫೆಸೆಂಟ್, ಕೊಂಡುಕುರಿ, ಜಿಂಕೆ, ಕೃಷ್ಣಮೃಗ, ಕರಡಿಗಳು ಇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಡಿಎಫ್ಒ ಹರ್ಷವರ್ಧನ್, ಆರ್‌ಎಫ್ಒ ಷಣ್ಮುಖಪ್ಪ, ದರ್ಶನ್ ನಾಯ್ಕ್, ಮುಖಂಡರಾದ ಕರಿಬಸಪ್ಪ, ಪ್ರಕಾಶ್, ಬಸಣ್ಣ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು, ಕಿರು ಪ್ರಾಣಿ ಸಂಗ್ರಹಾಲಯದ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.