
ಮಲೇಬೆನ್ನೂರು: ‘ಯುವಜನ ಸನ್ಮಾರ್ಗದಲ್ಲಿ ಸಾಗಿ ಉತ್ತಮ ಬದುಕು ರೂಪಿಸಿಕೊಂಡು ಆದರ್ಶ ಜೀವನ ನಡೆಸಿ. ಸತ್ಪ್ರಜೆಗಳಾಗಿ ಬಾಳಿ’ ಎಂದು ಕುಂಚಟಿಗ ಗುರುಪೀಠದ ಶಾಂತವೀರ ಸ್ವಾಮೀಜಿ ಶುಕ್ರವಾರ ಆಶಿಸಿದರು.
ಸಮೀಪದ ಹಿರೆಹಾಲಿವಾಣ ಗ್ರಾಮದ ಬೀರಲಿಂಗೇಶ್ವರ ಸ್ವಾಮಿ ಮರಿಬನ್ನಿ, ಕಾರ್ತಿಕ ದೀಪೋತ್ಸವ, ಸಾಮೂಹಿಕ ವಿವಾಹ ಹಾಗೂ ದೊಡ್ಡೆಡೆ ಜಾತ್ರೆ ಧರ್ಮಸಭೆ ಉದ್ದೇಶಿಸಿ ಅವರು ಮಾತನಾಡಿದರು.
‘ಮಕ್ಕಳು ಪೋಷಕರನ್ನು ಹಣಕ್ಕೆ ಪೀಡಿಸುವುದು, ವೃದ್ಧರನ್ನು ಅನಾಥಾಶ್ರಮಕ್ಕೆ ಸೇರಿಸುವ ಸಂಪ್ರದಾಯ ಎಲ್ಲೆಡೆ ಹೆಚ್ಚಾಗಿದೆ. ಮದ್ಯಪಾನ, ಧೂಮಪಾನದಂತಹ ದುಶ್ಚಟಗಳು ಹೆಚ್ಚಾಗಿ ಸಮಾಜ ಅಧೋಗತಿಗೆ ತಲುಪುತ್ತಿದೆ’ ಎಂದು ಹೊಸದುರ್ಗದ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
‘ದಾರಿತಪ್ಪುತ್ತಿರುವ ಸಮಾಜವನ್ನು ಸರಿದಾರಿಗೆ ತರುವ ಕೆಲಸವನ್ನು ಗುರುಪೀಠ, ಸ್ವಾಮೀಜಿ ಮಾಡಬೇಕಿದೆ. ಪ್ರತಿವರ್ಷ ಸಾಮೂಹಿಕ ವಿವಾಹ ನಡೆಸುತ್ತಿರುವುದು ಒಳ್ಳೆಯ ಕೆಲಸ. ಇದು ದುಂದುವೆಚ್ಚಕ್ಕೆ ಕಡಿವಾಣ ಹಾಕಿದೆ’ ಎಂದು ಮಾಜಿ ಶಾಸಕ ಎಸ್. ರಾಮಪ್ಪ ಹರ್ಷ ವ್ಯಕ್ತಪಡಿಸಿದರು.
12 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹದಡಿ ಮುರುಳೀಧರ ಸ್ವಾಮೀಜಿ, ಬ್ರಹ್ಮಕುಮಾರಿ ಲೀಲಕ್ಕ, ಮಠದ ಶೇಖರಯ್ಯ, ಪೂಜಾರ ರೇವಣಸಿದ್ದಪ್ಪ ಶುಭಾಶಯ ಕೋರಿದರು.
ವೈದ್ಯೆ ರಶ್ಮಿ, ಚಂದ್ರಶೇಖರ ಪೂಜಾರ್, ಸಿಡಿಪಿಒ ಪ್ರಿಯದರ್ಶಿನಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀದೇವಿ, ಉಪಾಧ್ಯಕ್ಷೆ ಕಮಲಾಬಾಯಿ, ಗಂಗಮ್ಮ, ಮಂಜುಳ, ವಿಜಯಲಕ್ಷ್ಮೀ, ಜಿ. ಮಂಜುನಾಥ ಪಟೇಲ್, ವೈ. ವಿರೂಪಾಕ್ಷಪ್ಪ, ಶಿವಕ್ಳ ಆಂಜನೇಯ, ಕೆ.ಎಂ. ಸಿದ್ದಪ್ಪ, ಎಂ.ಆರ್. ರಮೇಶ್, ಗೊಂದಿ ರೇವಣಸಿದ್ದಪ್ಪ ಕುಡುಪಲಿ ಗದ್ದಿಗೇಶ್ ಇದ್ದರು.
ಡಿ.ಡಿ. ಚಿಕ್ಕಣ್ಣ ಕಾರ್ಯಕ್ರಮ ನಿರೂಪಿಸಿದರು. ಎಸ್.ಜಿ. ಪರಮೇಶ್ವರಪ್ಪ ಸ್ವಾಗತಿಸಿದರು. ಹಾಲೇಶ್ ವಂದಿಸಿದರು. ಆಯೋಜಕರು ಪ್ರಸಾದ ವಿತರಣೆ ವ್ಯವಸ್ಥೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.