ರೈಲು ಹಳಿ
ದಾವಣಗೆರೆ: ಸ್ವಸಹಾಯ ಸಂಘ ಹಾಗೂ ಮೈಕ್ರೊ ಫೈನಾನ್ಸ್‌ಗಳಲ್ಲಿ ಪಡೆದಿದ್ದ ಸಾಲ ಮರುಪಾವತಿಸಲು ಸಾಧ್ಯವಾಗದ ತಾಯಿ–ಮಗಳು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಹರ ನಗರದ ತುಂಗಭದ್ರಾ ನದಿಯ ರೈಲ್ವೆ ಸೇತುವೆಯ ಮೇಲೆ ಗುರುವಾರ ನಡೆದಿದೆ.
ಹರಿಹರ ತಾಲ್ಲೂಕಿನ ಗಂಗನರಸಿ ಗ್ರಾಮದ ಸುವರ್ಣಮ್ಮ (60) ಹಾಗೂ ಪುತ್ರಿ ಗೌರಮ್ಮ (30) ಮೃತಪಟ್ಟವರು ಎಂದು ಗುರುತಿಸಲಾಗಿದೆ. ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ಬಳಿಕ ಮೃತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.
ಕೂಲಿ ಕಾರ್ಮಿಕರಾದ ಸುವರ್ಣಮ್ಮ, ಕೆಲ ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದರು. ಮೂವರು ಪುತ್ರಿಯರಲ್ಲಿ ಇಬ್ಬರ ವಿವಾಹವಾಗಿದ್ದು, ಅಂಗವಿಕಲೆಯಾದ ಗೌರಮ್ಮ ತಾಯಿಯೊಂದಿಗೆ ನೆಲೆಸಿದ್ದರು. ಕೂಲಿ ಮಾಡಿಕೊಂಡು ಸಂಸಾರ ಸಾಗಿಸುತ್ತಿದ್ದ ಸುವರ್ಣಮ್ಮ, ಸಾಲದ ಹೊರೆಗೆ ಬಳಲಿದ್ದರು ಎಂದು ರೈಲ್ವೆ ಪೊಲೀಸ್ ಠಾಣೆಯ ಮೂಲಗಳು ತಿಳಿಸಿವೆ.
ಸುವರ್ಣಮ್ಮ ಅವರು ಮೈಕ್ರೊ ಫೈನಾನ್ಸ್ ಮತ್ತು ಸ್ವಸಹಾಯ ಸಂಘಗಳಲ್ಲಿ ₹ 3 ಲಕ್ಷಕ್ಕೂ ಅಧಿಕ ಸಾಲ ಪಡೆದಿದ್ದರು. 2 ಸಾಲಕ್ಕೆ ವಾರಕ್ಕೊಮ್ಮೆ ಹಾಗೂ 1 ಸಾಲಕ್ಕೆ ಮಾಸಿಕ ಕಂತುಗಳಲ್ಲಿ ಮರುಪಾವತಿ ಮಾಡಬೇಕಿತ್ತು. ಸಾಲದ ಕಂತು ಸರಿಯಾಗಿ ಪಾವತಿಸಲು ವಿಫಲರಾದ ಅವರು ಪುತ್ರಿಯೊಂದಿಗೆ ಜುಲೈ 1ರಂದು ಗ್ರಾಮ ತೊರೆದಿದ್ದರು.
ಇಬ್ಬರು ಪುತ್ರಿಯರ ಮನೆಯಲ್ಲಿ ಕೆಲ ದಿನ ನೆಲೆಸಿದ್ದ ಸುವರ್ಣಮ್ಮ, ಎರಡು ದಿನಗಳ ಹಿಂದೆಯೇ ಹರಿಹರ ನಗರಕ್ಕೆ ಬಂದಿದ್ದರು. ಗಂಗನರಸಿ ಗ್ರಾಮಕ್ಕೆ ತೆರಳದೇ ನಗರದ ಜೋಡಿ ಬಸವೇಶ್ವರ ದೇಗುಲದಲ್ಲಿ ವಾಸ್ತವ್ಯ ಹೂಡಿದ್ದರು. ತುಂಗಭದ್ರಾ ನದಿಯ ದಡದಲ್ಲಿರುವ ಈ ದೇಗುಲದ ಅನತಿ ದೂರದಲ್ಲಿ ರೈಲ್ವೆ ಹಳಿ ಇದೆ. ನದಿಗೆ ನಿರ್ಮಿಸಿದ ರೈಲ್ವೆ ಸೇತುವೆಯ ಮೇಲೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.