ADVERTISEMENT

ಜಮೀರ್ ಅಹ್ಮದ್‌ ಒಬ್ಬ ಕಿಡಿಗೇಡಿ ಶಾಸಕ: ಎಂ.ಪಿ.ರೇಣುಕಾಚಾರ್ಯ ಕಿಡಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 14:24 IST
Last Updated 24 ಏಪ್ರಿಲ್ 2020, 14:24 IST
ಎಂ.ಪಿ.ರೇಣುಕಾಚಾರ್ಯ
ಎಂ.ಪಿ.ರೇಣುಕಾಚಾರ್ಯ   

ದಾವಣಗೆರೆ: ಪಾದರಾಯನಪುರ ಘಟನೆ ನಡೆಯಲು ಕಿಡಿಗೇಡಿ ಶಾಸಕ ಜಮೀರ್ ಅಹ್ಮದ್ ಕಾರಣ. ಆತ ನೀಡಿದ ಕುಮ್ಮಕ್ಕಿನಿಂದ ಗಲಾಟೆ ಆಗಿದೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದರು.

ಮಾಧ್ಯಮದವರ ಜೊತೆ ಮಾತನಾಡಿ, ‘ಜಮೀರ್ ಅಹ್ಮದ್ ವರ್ತನೆಯನ್ನ ನಾನು ಖಂಡಿಸುತ್ತೇನೆ. ಅವರ ಕುಮ್ಮಕ್ಕು ಇಲ್ಲದಿದ್ದರೆ ಈ ತರಹದ ಘಟನೆಗಳು ನಡೆಯುತ್ತಿರಲಿಲ್ಲ. ಸಾರಾಯಿ ಪಾಳ್ಯದಲ್ಲಿ ನಡೆದ ಘಟನೆಯನ್ನು ಖಂಡಿಸುವುದರ ಬದಲಾಗಿ ಧರ್ಮ ಮತ್ತು ಪೌರತ್ವದ ವಿಷಯವನ್ನು ಎಳೆದುತಂದರು. ಆಶಾ ಕಾರ್ಯಕರ್ತೆಯರಿಗೆ ಪೌರತ್ವದ ವಿಷಯದ ಬಗ್ಗೆ ಏನು ಗೊತ್ತು’ ಎಂದು ಪ್ರಶ್ನಿಸಿದರು.

ಆಶಾ ಕಾರ್ಯಕರ್ತೆಯರ ಕೆಲಸದ ಬಗ್ಗೆ ಅವರನ್ನು ಶ್ಲಾಘಿಸಬೇಕಿತ್ತು. ಅದರ ಬದಲು ಯಾರನ್ನು ಕೇಳಿ ಬಂದಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಅದೇನು ಜಮೀರ್ ಅಹ್ಮದ್ ಅವರ ಮಾವನ ಮನೆಯಾ? ಎಂದು ಪ್ರಶ್ನಿಸಿದರು.

ADVERTISEMENT

ಜಮೀರ್ ಅಹ್ಮದ್ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಕುರಿತ ಪ್ರಶ್ನೆಗೆ‘ ನಮ್ಮ ಸರ್ಕಾರ ಎಷ್ಟೇ ದೊಡ್ಡ ವ್ಯಕ್ತಿಯಾದರೂ ಕ್ರಮ ಜರುಗಿಸುತ್ತದೆ. ಈ ಕುರಿತು ಮುಖ್ಯಮಂತ್ರಿ ಹಾಗೂ ಗೃಹಸಚಿವರನ್ನು ಒತ್ತಾಯಿಸುತ್ತೇನೆ’ ಎಂದರು.

‘ಆರೋಪಿಗಳನ್ನು ರಾಮನಗರ ಜೈಲಿಗೆ ಕರೆದುಕೊಂಡು ಹೋಗಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ರಾಜಕೀಯ ಮಾಡುವುದು ಬೇಡ. ಆರೋಪಿಗಳನ್ನ ಜೈಲಿಗೆ ಕಳುಹಿಸದೇ ಅವರನ್ನು ಮನೆಗೆ ಕಳುಹಿಸಬೇಕಿತ್ತಾ? ಕುಮಾರಸ್ವಾಮಿ ಅವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.