ADVERTISEMENT

ದಾವಣಗೆರೆ| ಉಪಚುನಾವಣೆಯಲ್ಲಿ ಟಿಕೆಟ್‌ ನೀಡುವಂತೆ ಮುಸ್ಲಿಮರ ಬೇಡಿಕೆ: ಜಮೀರ್ ಅಹಮದ್

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 15:28 IST
Last Updated 26 ಜನವರಿ 2026, 15:28 IST
   

ದಾವಣಗೆರೆ: ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ನಿಧನದಿಂದ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಎದುರಾಗಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ನೀಡುವಂತೆ ಮುಸ್ಲಿಂ ಸಮುದಾಯ ಬೇಡಿಕೆ ಇಟ್ಟಿದೆ. ಮುಖಂಡರ ಅಹವಾಲು ಆಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ವರದಿ ನೀಡುವೆ ಎಂದು ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ತಿಳಿಸಿದರು.

‘ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿದ್ದರು. 2023ರ ಚುನಾವಣೆಯೇ ಅಂತಿಮ ಎಂಬುದಾಗಿ ಅವರು ಘೋಷಣೆ ಮಾಡಿದ್ದರು. ಮುಂಬರುವ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡುವುದಾಗಿ ಅವರು ಭರವಸೆ ನೀಡಿದ್ದರು ಎಂಬುದಾಗಿ ಮುಖಂಡರು ಹೇಳುತ್ತಿದ್ದಾರೆ. ಇದನ್ನು ವರದಿಯಲ್ಲಿ ಉಲ್ಲೇಖಿಸುವೆ. ಎಐಸಿಸಿ ಗಮನಕ್ಕೂ ತರುವೆ’ ಎಂದು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ 2028ರವರೆಗೆ ಮುಂದುವರಿಯಲಿದ್ದಾರೆ. ಸಿಎಂ ಕುರ್ಚಿ ಖಾಲಿಯಾದಾಗ ಮಾತ್ರ ಮತ್ತೊಬ್ಬರನ್ನು ಮುಖ್ಯಮಂತ್ರಿ ಮಾಡುವ ಆಲೋಚನೆ ಮಾಡಬಹುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ADVERTISEMENT

‘ಡ್ರಗ್ಸ್‌ ಪ್ರಕರಣದಲ್ಲಿ ದಾವಣಗೆರೆ ಪೊಲೀಸರು ಬಂಧಿಸಿರುವ ಅನ್ವರ್‌ ನನ್ನ ಆಪ್ತನಲ್ಲ, ಪರಿಚಿತ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರ ಆಹ್ವಾನದ ಮೇರೆಗೆ ಅನ್ವರ್‌ ಗೃಹ ಪ್ರವೇಶ ಹಾಗೂ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದೆ’ ಎಂದರು.

ಹಗಲುಗನಸು ಕಾಣುವ ಎಚ್‌ಡಿಕೆ

‘ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ವಿಚಾರದಲ್ಲಿ ಹಗಲು ಕನಸು ಕಾಣುತ್ತಿದ್ದಾರೆ’ ಎಂದು ವಸತಿ ಸಚಿವ ಜಮೀರ್ ಅಹಮದ್‌ ಖಾನ್ ವ್ಯಂಗ್ಯವಾಡಿದರು.

‘2013, 2018 ಹಾಗೂ 2023ರಲ್ಲಿ ನಾನೇ ಮುಖ್ಯಮಂತ್ರಿ ಆಗುವುದಾಗಿ ಕುಮಾರಸ್ವಾಮಿ ಹೇಳಿದ್ದರು. 2028ರ ಬಳಿಕ ತಾವೇ ಮುಖ್ಯಮಂತ್ರಿ ಆಗುವುದಾಗಿ ಹೇಳುತ್ತಿದ್ದಾರೆ. ಹೀಗೆ ಹೇಳುವುದು ಅವರಿಗೆ ಅಭ್ಯಾಸವಾಗಿ ಪರಿಣಮಿಸಿದೆ’ ಎಂದು ಕುಟುಕಿದರು.

‘ಸಿದ್ದರಾಮಯ್ಯ ಅವರು ಜೆಡಿಎಸ್‌ನಲ್ಲಿದ್ದಾಗ ಪಕ್ಷ 59 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಅವರು ಜೆಡಿಎಸ್ ತೊರೆದ ಬಳಿಕ ಅಧಃಪತನ ಶುರುವಾಗಿದೆ. 2023ರಲ್ಲಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌ಗೆ ಸಿಕ್ಕಿದ್ದು 19 ಸ್ಥಾನಗಳು ಮಾತ್ರ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.