ADVERTISEMENT

ನೀವೆಷ್ಟು ಹಿಡಿ ಮಣ್ಣು ಹಾಕಿದ್ದೀರಿ?

ಮಲ್ಲಿಕಾರ್ಜುನಗೆ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 13:29 IST
Last Updated 10 ಏಪ್ರಿಲ್ 2019, 13:29 IST

ದಾವಣಗೆರೆ: ಹದಿನೈದು ವರ್ಷ ಸಂಸದರಾಗಿ ಸಿದ್ದೇಶ್ವರ ಎಲ್ಲಿಯೂ ಒಂದು ಹಿಡಿ ಮಣ್ಣು ಹಾಕಿಲ್ಲ ಎಂದು ಆರೋಪಿಸುವ ಎಸ್‌.ಎಸ್‌. ಮಲ್ಲಿಕಾರ್ಜುನ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೀವೆಷ್ಟು ಕಡೆ ಹಿಡಿ ಮಣ್ಣು ಹಾಕಿದ್ದೀರಿ ಎಂಬುದನ್ನು ತಿಳಿಸಿ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್ ಸವಾಲು ಹಾಕಿದರು.

‘ನೀವು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ದಾವಣಗೆರೆ ನಗರಷ್ಟಕ್ಕೇ ಸೀಮಿತರಾಗಿದ್ದೀರಿ. ಜಿಲ್ಲೆಯ ಕನಿಷ್ಠ ಒಂದು ಗ್ರಾಮಕ್ಕೂ ಭೇಟಿ ನೀಡಲಿಲ್ಲ. ಯಾವುದೇ ಕ್ಷೇತ್ರಕ್ಕೂ ಹೋಗದೆ ಜನರ ಒಂದೇ ಒಂದು ಅಹವಾಲು ಸ್ವೀಕರಿಸಲಿಲ್ಲ. ನಿಮಗೆ ನಮ್ಮ ಅಭ್ಯರ್ಥಿ ಬಗ್ಗೆ ಟೀಕೆ ಮಾಡುವ ನೈತಿಕತೆ ಇಲ್ಲ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

‘ಯಾವುದೇ ರಾಜಕಾರಣಿ ತಮ್ಮ ಜೇಬಿನ ಹಣದಿಂದ ಅಭಿವೃದ್ಧಿ ಕೆಲಸ ಮಾಡಿಸಲ್ಲ. ಸರ್ಕಾರದ ಅನುದಾನವನ್ನು ಹೇಗೆ ಸದ್ಬಳಕೆ ಮಾಡಲಾಗುತ್ತದೆ ಎಂಬುದು ಮುಖ್ಯ. ಸರ್ಕಾರದ ಅನುದಾನದಲ್ಲಿ ಮಾಡಿಸಿದ ಕೆಲಸಗಳಿಗೆ ನೀವು, ನಿಮ್ಮ ಮತ್ತು ನಿಮ್ಮ ಕುಟುಂಬದ ಹೆಸರಿಟ್ಟಿದ್ದೀರಿ’ ಎಂದು ಟೀಕಿಸಿದರು.

ADVERTISEMENT

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ‘ಜಿ.ಎಂ. ಸಿದ್ದೇಶ್ವರ ಅವರು ಸಂಸದರಾಗಿ ಮಾಡಿದ ಕೆಲಸಗಳ ಮಾಹಿತಿ ಪುಸ್ತಕವನ್ನು ಮುದ್ರಿಸಿ ಜನರ ಮನೆ ಬಾಗಿಲಿಗೆ ತಲುಪಿಸುತ್ತಿದ್ದೇವೆ. ಇದರಲ್ಲಿ ಒಂದೇ ಒಂದು ಮಾಹಿತಿ ಸುಳ್ಳು ಎಂದು ಯಾರಾದರೂ ದಾಖಲೆ ಸಮೇತ ಸಾಬೀತುಪಡಿಸಲಿ’ ಎಂದು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಪ್ರಸನ್ನಕುಮಾರ್, ಶಂಕರಗೌಡ ಬಿರಾದಾರ್, ಶಿವಪ್ರಕಾಶ್, ಮಾದೇಶ್, ಶಿವನಗೌಡ ಪಾಟೀಲ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.