ADVERTISEMENT

ಸಮಸಮಾಜಕ್ಕಾಗಿ ಶ್ರಮಿಸಿದ ನಾರಾಯಣ ಗುರು: ರೇಣುಕಾನಂದ ಸ್ವಾಮೀಜಿ

ಗರ್ತಿಕೆರೆ ಬ್ರಹ್ಮಶ್ರೀ ನಾರಾಯಣ ಗುರು ಮಹಾಸಂಸ್ಥಾನದ ರೇಣುಕಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 7:37 IST
Last Updated 21 ಸೆಪ್ಟೆಂಬರ್ 2025, 7:37 IST
ದಾವಣಗೆರೆಯಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಎಂ ಗಂಗಾಧರಸ್ವಾಮಿ ಮಾತನಾಡಿದರು ಪ್ರಜಾವಾಣಿ ಚಿತ್ರ
ದಾವಣಗೆರೆಯಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಎಂ ಗಂಗಾಧರಸ್ವಾಮಿ ಮಾತನಾಡಿದರು ಪ್ರಜಾವಾಣಿ ಚಿತ್ರ   

ದಾವಣಗೆರೆ: ದೇಶ ಕಂಡ ಅಪರೂಪದ ಸಂತರು, ದಾರ್ಶನಿಕರಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಒಬ್ಬರಾಗಿದ್ದರು. ಶೋಷಣೆ ಮುಕ್ತ, ಸಮಸಮಾಜದ ನಿರ್ಮಾಣಕ್ಕಾಗಿ ಅವರು ಅವಿರತ ಶ್ರಮಿಸಿದರು ಎಂದು ಗರ್ತಿಕೆರೆ ಬ್ರಹ್ಮಶ್ರೀ ನಾರಾಯಣ ಗುರು ಮಹಾಸಂಸ್ಥಾನದ ರೇಣುಕಾನಂದ ಸ್ವಾಮೀಜಿ ಹೇಳಿದರು. 

ಇಲ್ಲಿನ ಪಿ.ಬಿ. ರಸ್ತೆಯಲ್ಲಿರುವ ಜಿಲ್ಲಾ ಆರ್ಯ ಈಡಿಗ ಸಂಘದ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮಶ್ರಿ ನಾರಾಯಣ ಗುರು ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. 

ಅಂದಿನ ಕಾಲದಲ್ಲಿದ್ದ ಅಸ್ಪೃಶ್ಯತೆಯ ವಿರುದ್ಧ ಸಿಡಿದೆದ್ದ ನಾರಾಯಣ ಗುರುಗಳು ಇದಕ್ಕೆಲ್ಲಾ ಮೂಲ ಕಾರಣ ಅನಕ್ಷರತೆ ಎಂಬುದನ್ನು ಅರಿತು ಶಿಕ್ಷಣಕ್ಕೆ ಒತ್ತು ನೀಡಿದರು. ಇದರಿಂದಾಗಿ ಕೇರಳ ರಾಜ್ಯ ಸಾಕ್ಷರತೆಯಲ್ಲಿ ಮೊದಲ ಸ್ಥಾನ ಪಡೆಯಲು ಸಾಧ್ಯವಾಯಿತು ಎಂದು ಹೇಳಿದರು. 

ADVERTISEMENT

‘ನಿರ್ದಿಷ್ಟ ಗುರಿ, ಛಲ ಇದ್ದರೆ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಿದೆ. ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ, ಅವರನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಜಿಲ್ಲಾ ಆರ್ಯ ಈಡಿಗ ಸಂಘದ ಸೇವಾ ಕಾರ್ಯ ಇಡೀ ರಾಜ್ಯಕ್ಕೆ ಮಾದರಿ. ಸತತ 25 ವರ್ಷಗಳಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿರುವುದು ಶ್ಲಾಘನೀಯ’ ಎಂದು ಹೇಳಿದರು. 

‘ನಾರಾಯಣ ಗುರುಗಳ ಚಿಂತನೆ, ಸಂದೇಶಗಳು ಸಾರ್ವಕಾಲಿಕ ಸತ್ಯ. ಅವುಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ವಿಖ್ಯಾತನಂದ ಸ್ವಾಮೀಜಿ ಅಭಿಪ್ರಾಯಪಟ್ಟರು. 

‘ಆರ್ಯ ಈಡಿಗ ಸಂಘದ ಪ್ರಮುಖ ಬೇಡಿಕೆಗಳನ್ನು ನಿಯಮಾನುಸಾರ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರ ಗಮನಕ್ಕೆ ತಂದು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಭರವಸೆ ನೀಡಿದರು.  

‘ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಪ್ರೋತ್ಸಾಹ ನೀಡಬೇಕು. ಒಗ್ಗಟ್ಟಾಗಿದ್ದು, ಸಮುದಾಯದ ಏಳಿಗೆಗೆ ಶ್ರಮಿಸಬೇಕು’ ಎಂದು ‘ಧೂಡಾ’ ಅಧ್ಯಕ್ಷ ದಿನೇಶ್ ಶೆಟ್ಟಿ ಸಲಹೆ ನೀಡಿದರು.  

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಈಡಿಗ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸನ್ಮಾನಿಸಿದರು. 

ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಎಂ. ಶ್ರೀನಿವಾಸ್, ಮಡಿಕೇರಿ ಎಸಿಪಿ ಎಸ್. ಮಹೇಶ್ ಕುಮಾರ್, ಅಧಿಕಾರಿಗಳಾದ ಕೆ. ಆನಂದ್, ಡಾ. ಲಕ್ಷ್ಮೀಕಾಂತ್, ಕೆ.ಎನ್. ಸಂತೋಷ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಸಂಘದ ಗೌರವಾಧ್ಯಕ್ಷ ಎಚ್.ಶಂಕರ್, ಮುಖಂಡರಾದ ಲಕ್ಷ್ಮಿ ತಿಮ್ಮಪ್ಪ, ಇ. ಶಾಂತಾರಾಮ್, ಇ. ದೇವೇಂದ್ರಪ್ಪ, ಸಿ.ವಿ.ರವೀಂದ್ರಬಾಬು, ಚನ್ನಗಿರಿ ಗಂಗಾಧರ್, ಹೊನ್ನಾಳಿ ಮಹಾಂತೇಶ್, ಅಂಬರೀಶ್, ಎಚ್.ಎಸ್.ಮಹಾಬಲೇಶ್, ಇ.ಲಕ್ಷ್ಮಣ್, ಎಸ್.ವಿ.ರಾಮದಾಸ್, ಇ. ರಾಜಣ್ಣ, ಬಿ.ಸೋಮಶೇಖರ್, ಹನುಮಂತಪ್ಪ, ಟಿ. ರಘು, ಬಾಲರಾಜ್, ಗವಿಸಿದ್ದಪ್ಪ, ಓಂಕಾರಮೂರ್ತಿ, ಆನಂದಪ್ಪ, ಎಸ್.ಮಂಜಪ್ಪ ಮತ್ತಿತರರು ಉಪಸ್ಥಿತರಿದ್ದರು.

‘ಶಾಮನೂರು ಕುಟುಂಬದ ಸಹಕಾರ’

‘ನಾನು ಕೂಡ ವಿದ್ಯಾರ್ಥಿ ನಿಲಯದಲ್ಲಿ ಓದಿದ್ದೆ. ಶಾಮನೂರು ಶಿವಶಂಕರಪ್ಪ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಅವರ ಸಹಕಾರದಿಂದ ನಗರಸಭೆ ಮಹಾನಗರ ಪಾಲಿಕೆಯ ಸದಸ್ಯರಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಯಿತು. ಶಾಮನೂರು ಕುಟುಂಬಕ್ಕೆ ಕೃತಜ್ಞನಾಗಿದ್ದೇನೆ’ ಎಂದು ಸಂಘದ ಅಧ್ಯಕ್ಷ ಎ.ನಾಗರಾಜ್ ಹೇಳಿದರು.  ‘ಆರ್ಯ ಈಡಿಗ ಸಂಘಕ್ಕೆ ಅತ್ಯಂತ ಕಡಿಮೆ ದರದಲ್ಲಿ ನಿವೇಶನ ನೀಡಿದ್ದು ವಿನೋಬನಗರದಲ್ಲಿ ವಿದ್ಯಾರ್ಥಿಗಳ ಮತ್ತು ಸರಸ್ವತಿ ಬಡಾವಣೆಯಲ್ಲಿ ವಿದ್ಯಾರ್ಥಿನಿಯರ ನಿಲಯಗಳನ್ನು ನಿರ್ಮಾಣ ಮಾಡಲಾಗಿದೆ. ಕಾಂಗ್ರೆಸ್ ಮುಖಂಡರಾದ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಅನೇಕ ದಾನಿಗಳು ಸಹಾಯಹಸ್ತ ಚಾಚಿದ್ದರಿಂದ ಸಂಘದಿಂದ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಯಿತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.