
ದಾವಣಗೆರೆ: ‘ಅನ್ನದಾತ’, ‘ದೇಶದ ಬೆನ್ನೆಲುಬು’ ಎಂದೆಲ್ಲಾ ಕರೆಯಲ್ಪಡುವ ಕೃಷಿಕರ ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿ ಉತ್ತಮವಾಗಿದೆಯಾ ಎಂಬ ಪ್ರಶ್ನೆಗೆ ‘ಇಲ್ಲ’ ಎಂಬ ಉತ್ತರವೇ ಸಿಗುತ್ತದೆ. ದೇಶದ ಗ್ರಾಮೀಣ ಪ್ರದೇಶದ ಬಹುಪಾಲು ಕುಟುಂಬಗಳು ಹಲವು ತಲೆಮಾರುಗಳಿಂದ ಕೃಷಿಯನ್ನೇ ಜೀವನಾಧಾರವಾಗಿ ಮಾಡಿಕೊಂಡಿವೆ. ಆದರೂ, ಅವರ ಬದುಕು ನಿರೀಕ್ಷಿತ ಮಟ್ಟದಲ್ಲಿ ಸುಧಾರಿಸಿಲ್ಲ.
ದೇಶದ ಅರ್ಥವ್ಯವಸ್ಥೆ ಹಾಗೂ ಆಹಾರ ಭದ್ರತೆಗೆ ಕೊಡುಗೆ ನೀಡಲು ವರ್ಷವಿಡೀ ಹಗಲು– ರಾತ್ರಿ ಶ್ರಮ ವಹಿಸುವ ರೈತರ ಬದುಕು ಗಣನೀಯ ಮಟ್ಟದಲ್ಲಿ ಸುಧಾರಣೆಯಾಗಬೇಕಿರುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ.
ಅನ್ನದಾತರ ಕೃಷಿ ಜೀವನ ಬಹುಮುಖ್ಯವಾಗಿ ಪ್ರಕೃತಿಯ ಮೇಲೆ ಅವಲಂಬಿತವಾಗಿದೆ. ಅತಿವೃಷ್ಟಿ ಹಾಗೂ ಅನಾವೃಷ್ಟಿಯು ಅವರ ಬದುಕಿಗೆ ಮಾರಕವಾಗಿಯೂ ಪರಿಣಮಿಸುತ್ತಿವೆ. ಇಂತಹ ಸಂದರ್ಭಗಳಲ್ಲಿ ಸರ್ಕಾರಗಳು ಮುತುವರ್ಜಿ ವಹಿಸಿ ಅವರ ನೆರವಿಗೆ ಧಾವಿಸಬೇಕಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವುದು ಮಾತ್ರವಲ್ಲದೇ, ಖರೀದಿಗೂ ಮುಂದಾಗಬೇಕು. ಆ ಮೂಲಕ ಕೃಷಿಕರ ಬದುಕನ್ನು ಆರ್ಥಿಕವಾಗಿ ಸುಸ್ಥಿರಗೊಳಿಸಬೇಕು.
ಸರ್ಕಾರಗಳು ರೈತರಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದರೂ, ಅವು ಅನ್ನದಾತರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತಷ್ಟು ಕಾಳಜಿ ಹಾಗೂ ಬದ್ಧತೆ ತೋರಬೇಕಿದೆ.
ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ ಸಣ್ಣ ಹಿಡುವಳಿದಾರರೇ ಹೆಚ್ಚಾಗಿದ್ದಾರೆ. ಮಳೆಯಾಶ್ರಿತ ಕೃಷಿಯನ್ನೇ ಬಹುಪಾಲು ರೈತರು ಅವಲಂಬಿಸಿದ್ದಾರೆ. ನೀರಾವರಿ ವ್ಯವಸ್ಥೆ ಎಲ್ಲಾ ರೈತರಿಗೆ ತಲುಪಿದರೆ, ಕೃಷಿ ಉತ್ಪನ್ನಗಳ ಉತ್ಪಾದನೆಯು ಗಣನೀಯ ಮಟ್ಟದಲ್ಲಿ ಹೆಚ್ಚಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಂಗಾ ಕಲ್ಯಾಣ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯು ಎಲ್ಲಾ ಅರ್ಹ ರೈತರಿಗೆ ಸಮರ್ಪಕವಾಗಿ ತಲುಪಬೇಕಿದೆ.
ದಾವಣಗೆರೆ ಜಿಲ್ಲೆಯಲ್ಲೂ ರೈತರಿಗೆ ಹಲವು ಸವಾಲುಗಳು ಎದುರಾಗಿವೆ. ಕೇಂದ್ರ ಸರ್ಕಾರ ವಿವಿಧ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆ ನಿಗದಿಪಡಿಸಿದೆ. ಆದರೆ, ಹೆಸರು ನೋಂದಣಿ ಹಾಗೂ ಖರೀದಿ ಕೇಂದ್ರಗಳ ಆರಂಭಕ್ಕೆ ಸಮಸ್ಯೆ ಎದುರಾಗುತ್ತಿದೆ. ಈ ಬಾರಿ ಭತ್ತಕ್ಕೆ ಮುಕ್ತ ಮಾರುಕಟ್ಟೆಯಲ್ಲಿ ಉತ್ತಮ ದರ ದೊರೆತಿರುವುದು ಆಶಾದಾಯಕ ಬೆಳವಣಿಗೆ. ಈ ಕಾರಣಕ್ಕೆ ರೈತರು ಖರೀದಿ ಕೇಂದ್ರಗಳತ್ತ ಸುಳಿಯಲಿಲ್ಲ.
ಆದರೆ, ಮೆಕ್ಕೆಜೋಳ ಬೆಳೆದ ರೈತರಿಗೆ ಸಮಸ್ಯೆ ಎದುರಾಗಿದೆ. ಆರಂಭದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಬೆಳೆಗೆ ಉತ್ತಮ ದರ ದೊರೆಯಲಿಲ್ಲ. ಇತ್ತ ಎಂಎಸ್‌ಪಿ ಯೋಜನೆಯಡಿ ಮಾರಾಟ ಮಾಡಲು ಖರೀದಿ ಕೇಂದ್ರಗಳೇ ಆರಂಭವಾಗಿರಲಿಲ್ಲ. ಈ ಕಾರಣಕ್ಕೆ ರೈತರು ಬೇರೆ ದಾರಿ ಇಲ್ಲದೆ ಕಡಿಮೆ ದರಕ್ಕೆ ಗ್ರಾಮಗಳಲ್ಲೇ ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದಾರೆ.
ಸದ್ಯ ಮೆಕ್ಕೆಜೋಳ ಖರೀದಿಗೆ ಸರ್ಕಾರ ಸೂಚಿಸಿದ್ದರೂ, ಜಿಲ್ಲೆಯಲ್ಲಿ ಹಲವು ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳಿಂದ ಖರೀದಿ ಪ್ರಕ್ರಿಯೆ ಆರಂಭವಾಗಿಲ್ಲ. ಈ ಸಮಸ್ಯೆಗೆ ಸರ್ಕಾರ ಆದಷ್ಟು ಬೇಗ ಸ್ಪಂದಿಸಬೇಕು ಎನ್ನುತ್ತಾರೆ ಅನ್ನದಾತರು.
ಜಿಲ್ಲೆಯ ಜೀವನಾಡಿಯಾಗಿ ಭದ್ರಾ ಜಲಾಶಯ ಇದ್ದರೂ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಬದುಕು ಹಸನು ಮಾಡಿಕೊಳ್ಳುವ ಕೊನೆಯ ಭಾಗದ ರೈತರ ಕನಸು ಇನ್ನೂ ಈಡೇರುತ್ತಿಲ್ಲ. ಬೇಸಿಗೆ ಹಂಗಾಮಿಗೆ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಅಚ್ಚುಕಟ್ಟು ಪ್ರದೇಶದ ರೈತರಿಗೆ ಸಾಧ್ಯವಾಗುತ್ತಿಲ್ಲ.
ಭದ್ರಾ ನಾಲೆಗಳ ನೀರು ಪೂರ್ಣ ಅಚ್ಚುಕಟ್ಟು ಪ್ರದೇಶಕ್ಕೆ ತಲುಪುತ್ತಿಲ್ಲ. ಇದಕ್ಕೆ ಕಾಲುವೆಗಳಲ್ಲಿ ಹೂಳು ತುಂಬಿ, ಗಿಡ–ಗಂಟಿಗಳು ಬೆಳೆದಿರುವುದು, ನಾಲೆಗಳು ಒಡೆದಿರುವುದು, ಮೇಲ್ಭಾಗದಲ್ಲಿ ಅಕ್ರಮ ಪಂಪ್‌ಸೆಟ್‌ಗಳ ಹಾವಳಿ, ಸಿಬ್ಬಂದಿ ಕೊರತೆ, ಅಸಮರ್ಪಕ ನಿರ್ವಹಣೆ ಸೇರಿದಂತೆ ಹಲವು ಕಾರಣಗಳಿವೆ.
ಭದ್ರಾ ನಾಲೆಗಳ ಸ್ವಚ್ಛತೆ ಹಾಗೂ ದುರಸ್ತಿ ಕಾಮಗಾರಿಗೂ ಆದ್ಯತೆ ದೊರೆಯಬೇಕಿದೆ. ಸಮಯಕ್ಕೆ ಸರಿಯಾಗಿ ಬೀಜ, ಗೊಬ್ಬರ ದೊರೆಯುವಂತೆ ನೋಡಿಕೊಳ್ಳಬೇಕು. ಜಿಲ್ಲೆಯ ರೈತರ ಸಮಗ್ರ ಬೆಳವಣಿಗೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸುವ ಮೂಲಕ ಕೃಷಿ ಉತ್ಪಾದನೆಯ ಹೆಚ್ಚಳಕ್ಕೆ ಕೈಜೋಡಿಸಬೇಕಿದೆ.
ಭಾರತದಲ್ಲಿ ಪ್ರತೀ ವರ್ಷ ಡಿಸೆಂಬರ್ 23ರಂದು ರೈತರ ದಿನ (ಕಿಸಾನ್ ದಿವಸ್) ಆಚರಿಸಲಾಗುತ್ತದೆ. ಆ ಮೂಲಕ ಅನ್ನದಾತರ ಶ್ರಮದ ಬೆವರಿಗೆ ಗೌರವ ನೀಡುವ ಕೆಲಸವಾಗುತ್ತಿದೆ. ರೈತ ಮುಖಂಡರೂ ಆಗಿದ್ದ ಭಾರತದ ಮಾಜಿ ಪ್ರಧಾನಮಂತ್ರಿ ಚೌಧರಿ ಚರಣ್ ಸಿಂಗ್ ಅವರು ಕೃಷಿಕರ ಪ್ರಗತಿಗೆ ನೀಡಿದ ಕೊಡುಗೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಅವರ ಜನ್ಮ ದಿನದಂದು (ಡಿ.23) ದೇಶದಾದ್ಯಂತ ರೈತರ ದಿನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಚೌಧರಿ ಚರಣ್ ಸಿಂಗ್ ಅವರು ರೈತರ ಬದುಕನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದರು. 2001ರಿಂದ ದೇಶದಲ್ಲಿ ಅಧಿಕೃತವಾಗಿ ರೈತರ ದಿನ ಆಚರಿಸುವುದನ್ನು ಕೇಂದ್ರ ಸರ್ಕಾರ ಆರಂಭಿಸಿತು. ಅನ್ನದಾತರ ಸೇವೆ ಗುರುತಿಸುವುದು ಕೃಷಿಯಲ್ಲಿ ನವೀನ ತಂತ್ರಜ್ಞಾನ ಅಳವಡಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸುವುದು ಯುವ ಪೀಳಿಗೆಗೆ ಕೃಷಿಯ ಮಹತ್ವ ತಿಳಿಸುವುದು ರೈತ ದಿನಾಚರಣೆಯ ಉದ್ದೇಶವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.