
ದಾವಣಗೆರೆ: ಕಿಕ್ಕಿರಿದು ಸೇರಿದ್ದ ಜನರು, ಆಗಾಗ ಮೊಳಗುವ ಕಹಳೆ, ಪ್ರೇಕ್ಷಕರ ಶಿಳ್ಳೆ– ಕೇಕೆ, ತಮಟೆಯ ಸದ್ದು, ಅಖಾಡದಲ್ಲಿ ಕುಸ್ತಿಪಟುಗಳ ಭರ್ಜರಿ ಕಸರತ್ತು.
ನಗರದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿನ ಕುಸ್ತಿ ಅಖಾಡದಲ್ಲಿ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಅಂಗವಾಗಿ ಮೂರು ದಿನ ನಡೆದ ರಾಷ್ಟ್ರಮಟ್ಟದ ಬಯಲು ಜಂಗಿ ಕುಸ್ತಿ ಪಂದ್ಯಗಳ ಚಿತ್ರಣವಿದು.
ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಹಾಗೂ ಸಂಜೆ 4ರಿಂದ ರಾತ್ರಿ 10 ಗಂಟೆ ವರೆಗೂ ಪಂದ್ಯಗಳು ನಡೆದವು. ವಿವಿಧ ವಿಭಾಗಗಳಲ್ಲಿ ನೂರಾರು ಕುಸ್ತಿಪಟುಗಳು ಪ್ರಶಸ್ತಿಗಾಗಿ ಸೆಣಸಾಡಿದರು. ಭಾನುವಾರ ರಾತ್ರಿ ಕುಸ್ತಿ ಪಂದ್ಯಾವಳಿಗೆ ತೆರೆ ಬಿತ್ತು.
ಅಖಾಡದಲ್ಲಿ ಜಟ್ಟಿಗಳು ಗೆಲುವಿಗಾಗಿ ಸೆಣಸಾಡುತ್ತಿದ್ದರೆ, ಅಖಾಡದ ಸುತ್ತಲೂ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ಜೋರು ಚಪ್ಪಾಳೆ ತಟ್ಟಿ ನೆಚ್ಚಿನ ಕ್ರೀಡಾಪಟುಗಳನ್ನು ಹುರಿದುಂಬಿಸುತ್ತಿರುವುದು ಸಾಮಾನ್ಯವಾಗಿತ್ತು.
ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನ:
ಕುಸ್ತಿ ಕಣ್ತುಂಬಿಕೊಳ್ಳಲು ಮೂರು ದಿನವೂ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಜನರು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಚಿಣ್ಣರಿಂದ ಹಿಡಿದು ವೃದ್ಧರವರೆಗೂ ಎಲ್ಲಾ ವಯಸ್ಸಿನವರೂ ಕುಸ್ತಿ ಪಂದ್ಯಗಳನ್ನು ವೀಕ್ಷಿಸಿದರು. ಮಧ್ಯಾಹ್ನದ ಸುಡುಬಿಸಿಲನ್ನೂ ಲೆಕ್ಕಿಸದೇ ಜನರು ಕುಸ್ತಿಪಟುಗಳನ್ನು ಪ್ರೋತ್ಸಾಹಿಸಿದರು.
ಗಮನ ಸೆಳೆದ ಇರಾನ್ ಕುಸ್ತಿಪಟುಗಳು
ಕುಸ್ತಿ ಪಂದ್ಯಾವಳಿಯಲ್ಲಿ ಇರಾನ್‌ನಿಂದ ಆಗಮಿಸಿದ್ದ ಕುಸ್ತಿಪಟುಗಳು ಗಮನ ಸೆಳೆದರು. ಮುಖ್ಯ ಪಂದ್ಯದಲ್ಲಿ (ಫೈನಲ್) ಪಂದ್ಯದಲ್ಲಿ ಇರಾನ್‌ನ ಮಿರ್ಜಾ -ಹಾಗೂ ಮಹಾರಾಷ್ಟ್ರದ ರವಿರಾಜ್ ಸೆಣಸಾಡಿಸಿದರು. 43 ನಿಮಿಷ ಸೆಣಸಾಡಿದರೂ ಫಲಿತಾಂಶ ಬಾರದ ಕಾರಣ ಪಂದ್ಯ ಸಮಬಲವಾಯಿತು. ಇಬ್ಬರಿಗೂ ತಲಾ ₹ 1 ಲಕ್ಷ ನಗದು ನೀಡಲಾಯಿತು. ಬೆಳ್ಳಿ ಗದೆ ಆಯೋಜಕರ ಬಳಿಯೇ ಉಳಿಯಿತು. ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಫೈನಲ್ ಪಂದ್ಯದ ಕುಸ್ತಿಪಟುಗಳಿಗೆ ಶುಭ ಕೋರಿದರು. ಎರಡನೇ ಅತಿ ಮುಖ್ಯ ಪಂದ್ಯದಲ್ಲಿ ಇರಾನ್‌ನ ಜಲಾಲ್ ಹಾಗೂ ಭಾರತದ ಲಕ್ಕಿ ಕೊಯ್ಲಿ ಅವರ ನಡುವೆ ಪಂದ್ಯ ನಡೆಯಿತು. ಈ ಪಂದ್ಯವೂ ಫಲಿತಾಂಶ ಸಿಗದೇ ಸಮಬಲದಲ್ಲಿ ಮುಕ್ತಾಯವಾಯಿತು.
‘ಇರಾನ್– ಇಸ್ರೇಲ್ ದೇಶಗಳ ನಡುವೆ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲೂ ಇರಾನ್ ದೇಶದ ಕುಸ್ತಿಪಟುಗಳು ಪೂರ್ವ ನಿಗದಿಯಂತೆ ದಾವಣಗೆರೆಗೆ ಆಗಮಿಸಿ ಕುಸ್ತಿಯಲ್ಲಿ ಪಾಲ್ಗೊಂಡಿರುವುದು ಅವರ ಕ್ರೀಡಾಸ್ಫೂರ್ತಿಯನ್ನು ತೋರುತ್ತದೆ’ ಎಂದು ಆಯೋಜಕರು ಶ್ಲಾಘಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.