
ನೀತಿಗೆರೆ (ಚನ್ನಗಿರಿ): ತಾಲ್ಲೂಕಿನ ನೀತಿಗೆರೆ ಗ್ರಾಮದ ಇತಿಹಾಸ ಪ್ರಸಿದ್ಧ ವೀರಭದ್ರೇಶ್ವರ ಸ್ವಾಮಿಯ ಕೆಂಡಾರ್ಚನೆ, ಗುಗ್ಗುಳ ಹಾಗೂ ಬಸವನ ಉತ್ಸವ ಕಾರ್ಯಕ್ರಮ ಸೋಮವಾರ ಅಪಾರ ಭಕ್ತರ ಸಮ್ಮುಖದಲ್ಲಿ ಅತ್ಯಂತ ಸಂಭ್ರಮದಿಂದ ನಡೆಯಿತು.
ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ ಮಂಗಳವಾರ ಬೆಳಿಗ್ಗೆ 10ಕ್ಕೆ ನಡೆಯಲಿದೆ. ಇನ್ನು ಸೋಮವಾರ ಕೆಂಡಾರ್ಚನೆ ಹಾಗೂ ಗುಗ್ಗುಳ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ 5,000ಕ್ಕಿಂತ ಹೆಚ್ಚು ಭಕ್ತರು ಸೇರಿದ್ದರು. ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಭಕ್ತರು ಕೆಂಡ ಹಾಯ್ದರು.
ಇನ್ನು ವೀರಭದ್ರೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಅಡ್ಡ ಪಲ್ಲಕ್ಕಿಯಲ್ಲಿ ನಂದಿಕೋಲು, ವೀರಗಾಸೆ ಹಾಗೂ ನಾಗಸ್ವರ ವಾದನಗಳ ಮೇಳದೊಂದಿಗೆ ಕೂರಿಸಿಕೊಂಡು ಬಂದು ಬಸವನ ರಥದಲ್ಲಿ ಪ್ರತಿಷ್ಠಾಪನೆ ಮಾಡುತ್ತಿದ್ದಂತೆ ನೆರೆದಿದ್ದ ಭಕ್ತರು ಬಸವನ ರಥವನ್ನು ಎಳೆಯಲು ಪ್ರಾರಂಭಿಸಿದರು. ರಥ ಮುಂದೆ ಮುಂದೆ ಸಾಗುತ್ತಿದ್ದಂತೆ ಭಕ್ತರು ಸೂರು ಮೆಣಸು, ಮಂಡಕ್ಕಿ ಹಾಗೂ ಬಾಳೆಹಣ್ಣುಗಳನ್ನು ಎಸೆಯುವ ಮೂಲಕ ತಮ್ಮ ಹರಕೆಯನ್ನು ಸಮರ್ಪಿಸಿದರು. ನಂತರ ಪ್ರಸಾದ ವಿನಿಯೋಗ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.