ADVERTISEMENT

ಕಾರ್ಮಿಕರ ಶಕ್ತಿ ಕುಂದಿರುವುದರಿಂದ ನಿರ್ಲಕ್ಷ್ಯ: ಆನಂದರಾಜ್‌

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 4:29 IST
Last Updated 6 ಜುಲೈ 2022, 4:29 IST
ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಹಾಗೂ ಭಾರತ ಕಮ್ಯುನಿಸ್ಟ್ ಪಾರ್ಟಿಯ 3ನೇ ಶಾಖಾ ಸಮ್ಮೇಳನ ದಾವಣಗೆರೆಯಲ್ಲಿ ಮಂಗಳವಾರ ನಡೆಯಿತು
ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಹಾಗೂ ಭಾರತ ಕಮ್ಯುನಿಸ್ಟ್ ಪಾರ್ಟಿಯ 3ನೇ ಶಾಖಾ ಸಮ್ಮೇಳನ ದಾವಣಗೆರೆಯಲ್ಲಿ ಮಂಗಳವಾರ ನಡೆಯಿತು   

ದಾವಣಗೆರೆ: ‘ಕಾರ್ಮಿಕರ ಶಕ್ತಿ ಕಡಿಮೆಯಾಗಿರುವುದರಿಂದ ರಾಜಕೀಯ ಪಕ್ಷಗಳು ಕಾರ್ಮಿಕರನ್ನು ನಿರ್ಲಕ್ಷಿಸುತ್ತಿದೆ. ಕಾರಣ ನಾವು ಉದ್ಧಾರವಾಗಬೇಕೆಂದರೆ ರಾಜಕೀಯವಾಗಿ ಸ್ಥಾನಮಾನ ಪಡೆದು ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಬೇಕಿದೆ’ ಎಂದು ಸಿಪಿಐ ಜಿಲ್ಲಾ ಖಜಾಂಚಿ ಆನಂದ್ ರಾಜ್ ಹೇಳಿದರು.

ನಗರದ ಅಶೋಕ ರಸ್ತೆಯಲ್ಲಿರುವ ಕಾಂಮ್ರೇಡ್ ಪಂಪಾಪತಿ ಭವನದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಹಾಗೂ ಭಾರತ ಕಮ್ಯುನಿಸ್ಟ್ ಪಾರ್ಟಿಯ 3ನೇ ಶಾಖಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಕಾರ್ಮಿಕರು ರಾಜಕೀಯವಾಗಿ ಬೆಳೆಯಬೇಕೆಂದರೆ ಹೆಚ್ಚುಹೆಚ್ಚಾಗಿ ಪಕ್ಷದ ಸದಸ್ಯತ್ವ ಹೊಂದಬೇಕು. ಮಾತ್ರವಲ್ಲ ಎಲ್ಲ ನಗರ ಜಿಲ್ಲೆಗಳಲ್ಲಿ ಶಾಖೆಗಳನ್ನು ಹೊಂದಬೇಕು. ಆ ಮೂಲಕ ಕಾರ್ಮಿಕರ ಸಮಸ್ಯೆಗಳನ್ನು ತಿಳಿಸಬೇಕಿದೆ. ಮಾತ್ರವಲ್ಲದೆ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವಂತಹ ನಾಯಕರನ್ನು ನಾವು ತಯಾರು ಮಾಡುವ ಮೂಲಕ ಆಯಾ ಸ್ಥಳೀಯ ಸಂಸ್ಥೆಗಳು ಸೇರಿದಂತೆ ವಿಧಾನಸಭೆ, ಸಂಸತ್ತಿಗೆ ಕಳಿಸಿಕೊಡಬೇಕು ಎಂದು ಕಿವಿಮಾತು ಹೇಳಿದರು.

ADVERTISEMENT

‘ನಮ್ಮನ್ನು ಆಳುವ ಪಕ್ಷಗಳು ಇಂದು ದೇವರ, ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುತ್ತಿವೆ. ಆ ಮೂಲಕ ಕಲುಷಿತ ವಾತಾವರಣ ಮೂಡಿಸಿ ಎಲ್ಲರನ್ನೂ ಆತಂಕಕ್ಕೆ ದೂಡಿವೆ. ರೈತರು, ಕಾರ್ಮಿಕರು ಸೇರಿದಂತೆ ಯಾವುದೇ ದುಡಿಯುವ ವರ್ಗದ ಜನರ ಸಮಸ್ಯೆಗಳನ್ನು ಸರ್ಕಾರಗಳು ಕೇಳುತ್ತಿಲ್ಲ. ಉಳ್ಳವರ ಪರವಾಗಿ ಸರ್ಕಾರಗಳು ಕೆಲಸ ಮಾಡುತ್ತಿವೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ರಾಜಾಧ್ಯಕ್ಷ ಆವರಗೆರೆ ಎಚ್.ಜಿ. ಉಮೇಶ್ ಅಸಮಾಧಾನ ವ್ಯಕ್ತ ಪಡಿಸಿದರು.

ಗ್ರಾಮ ಪಂಚಾಯಿತಿಯಿಂದ ಹಿಡಿದು ಎಲ್ಲಾ ಹಂತದ ಚುನಾವಣೆಯಲ್ಲಿ ಹಣದ ಮೂಲಕ ಮತದಾರರನ್ನು ಕೊಳ್ಳುವ ಮೂಲಕ ಭ್ರಷ್ಟಾಚಾರದ ರಾಜಕೀಯಕ್ಕೆ ರಾಜಕೀಯ ಪಕ್ಷಗಳು ಮುಂದಾಗಿವೆ. ಮತದಾರರೂ ಭ್ರಷ್ಟರಾಗುತ್ತಿದ್ದಾರೆ. ಇನ್ನಾದರೂ ಮತದಾರರು ಜಾಗೃತರಾಗಬೇಕು. ಭ್ರಷ್ಟಾಚಾರ ಸಹಿತ ಚುನಾವಣೆಗಳನ್ನು ಹಿಮ್ಮೆಟ್ಟಿಸಬೇಕು. ಕಾರ್ಮಿಕರು ಒಂದಾದರೆ ಮಾತ್ರ ಇದು ಸಾಧ್ಯ ಎಂದರು.

ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ವಿ.ಲಕ್ಷ್ಮಣ್ ಅಧ್ಯಕ್ಷತೆ ವಹಿಸಿದ್ದರು. ಪಿ.ಕೆ.ಲಿಂಗರಾಜ್, ಭೀಮಾರೆಡ್ಡಿ, ಶಿವಕುಮಾರ್ ಡಿ.ಶೆಟ್ಟರ್, ಜಿ.ಆರ್.ನಾಗರಾಜ್, ಆವರಗೆರೆ ಎಸ್.ಸಿದ್ದಲಿಂಗಪ್ಪ, ಮುರುಗೇಶ್, ಹಾಲೇಕಲ್ಲು ಸಿದ್ದೇಶ್, ಸುರೇಶ್ ಯರಗುಂಟೆ, ಐರಣಿಚಂದ್ರು, ಆವರಗೆರೆ ವಾಸು, ನೇತ್ರಾವತಿ, ನಾಗಮ್ಮ, ಪುಷ್ಪಾ ಅವರೂ ಇದ್ದರು.

ಮುಂದಿನ 3 ವರ್ಷಗಳ ಅವಧಿಗೆ ಕಟ್ಟಡ ಕಾರ್ಮಿಕರ ಭಾರತ ಕಮ್ಯೂನಿಷ್ಟ್ ಪಕ್ಷದ ಶಾಖಾ ಕಾರ್ಯದರ್ಶಿಯಾಗಿ ಯರಗುಂಟೆ ಸುರೇಶ್, ಸಹಕಾರ್ಯದರ್ಶಿಯಾಗಿ ಎಸ್‍ಜೆಎಂ ನಗರದ ಸುರೇಶ್, ಖಜಾಂಚಿಯಾಗಿ ಸಿದ್ದೇಶ್ ಹಾಲೇಕಲ್ಲು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.