ಹರಿಹರದ ಕಿರ್ಲೋಸ್ಕರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (ಕಿಮ್ಸ್) ಶಿಕ್ಷಣ ಸಂಸ್ಥೆಯವರು ಡಾಂಬರೀಕರಣ ಮಾಡಿರುವ ರಸ್ತೆ
ಹರಿಹರ: ಗುಂಡಿಗಳು ಬಿದ್ದು ಸಂಚರಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ರಸ್ತೆಯೊಂದನ್ನು ನಗರದ ಖಾಸಗಿ ಶಿಕ್ಷಣ ಸಂಸ್ಥೆಯವರೇ ಅಭಿವೃದ್ಧಿಪಡಿಸಿದ್ದಾರೆ.
ಇಲ್ಲಿನ ರಾಘವೇಂದ್ರ ಮಠದ ಸಮೀಪ ಜೋಡು ಬಸವೇಶ್ವರ ದೇವಸ್ಥಾನ ಮುಂಭಾಗ ಹಾಳಾಗಿದ್ದ ರಸ್ತೆಯಲ್ಲಿ ಅರ್ಧ ಕಿ.ಮೀ.ವರೆಗೆ ಡಾಂಬರೀಕರಣ ಮಾಡಲಾಗಿದೆ. ಕಿರ್ಲೋಸ್ಕರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (ಕಿಮ್ಸ್) ಶಿಕ್ಷಣ ಸಂಸ್ಥೆಯವರು ಡಾಂಬರೀಕರಣದ ಜೊತೆಗೆ ಎರಡೂ ಬದಿಗಳಲ್ಲಿ ಕಾಂಕ್ರೀಟ್‌ನಿಂದ ಮಳೆನೀರು ಚರಂಡಿ ನಿರ್ಮಿಸಿದ್ದಾರೆ.
ಬೀರೂರು-ಸಮ್ಮಸಗಿ ಹೆದ್ದಾರಿಯಿಂದ ಶಿಕ್ಷಣ ಸಂಸ್ಥೆಯ ಆವರಣದವರೆಗೆ 490 ಮೀ. ಉದ್ದ, 4 ಮೀ. ಅಗಲದ ಸುಸಜ್ಜಿತ ಡಾಂಬರ್ ರಸ್ತೆ ಹಾಗೂ 170 ಮೀ. ಉದ್ದದ ಚರಂಡಿಯನ್ನು ನಿರ್ಮಿಸಲಾಗಿದೆ. ಡಾಂಬರ್ ಹಾಕುವ ಮುನ್ನ ಒಂದು ಅಡಿಯಷ್ಟು ಎತ್ತರಕ್ಕೆ ಗ್ರಾವೆಲ್, ಜಲ್ಲಿ ಹಾಕಿ ಗುಂಡಿಗಳನ್ನು ಮುಚ್ಚಲಾಗಿದೆ.
ಈ ಎಲ್ಲಾ ಕೆಲಸ ಕಾರ್ಯಗಳಿಗೆ ಅಂದಾಜು ₹36 ಲಕ್ಷ ವ್ಯಯಿಸಲಾಗಿದೆ ಎಂದು ತಿಳಿದು ಬಂದಿದೆ. 13 ವರ್ಷಗಳ ಹಿಂದೆ ಇದೇ ಸಂಸ್ಥೆ ಈ ರಸ್ತೆಗೆ ಡಾಂಬರೀಕರಣ ಮಾಡಿತ್ತು. ನಂತರ ಯುಜಿಡಿ ಕಾಮಗಾರಿ ನಡೆಸಿದ್ದರಿಂದ ರಸ್ತೆ ಹದಗೆಟ್ಟಿತ್ತು.
ತಗ್ಗು, ಗುಂಡಿಯ ಈ ರಸ್ತೆಯಲ್ಲಿ ಗರ್ಭಿಣಿಯರು, ಅನಾರೋಗ್ಯಪೀಡಿತರು ಓಡಾಡುವುದು ಕಷ್ಟದಾಯಕವಾಗಿತ್ತು. ಶಿಕ್ಷಣ ಸಂಸ್ಥೆಯವರು ನಗರಸಭೆಗೆ ಹಲವು ಬಾರಿ ಪತ್ರ ಬರೆದು ರಸ್ತೆ ಅಭಿವೃದ್ಧಿಗೆ ಮನವಿ ಮಾಡಿದ್ದರೂ, ಅಧಿಕಾರಿಗಳು ಸ್ಪಂದಿಸಿರಲಿಲ್ಲ.
1998ರಲ್ಲಿ ಆರಂಭವಾದ ಈ ಶಿಕ್ಷಣ ಸಂಸ್ಥೆ, ದೇಶದ ಪ್ರತಿಷ್ಠಿತ ಮ್ಯಾನೇಜ್‌ಮೆಂಟ್ ಸಂಸ್ಥೆಗಳ ಪೈಕಿ ಪ್ರಮುಖ ಸ್ಥಾನದಲ್ಲಿದೆ. ಹೊರ ರಾಜ್ಯದಿಂದಲೂ ಇಲ್ಲಿಗೆ ನೂರಾರು ವಿದ್ಯಾರ್ಥಿಗಳು ಬಂದು ಶಿಕ್ಷಣ ಪಡೆಯುತ್ತಿದ್ದಾರೆ. ಪದವಿ ಮತ್ತು ಸ್ನಾತ್ತಕೋತ್ತರ ಪದವಿ ಸೇರಿ 300ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದು, ವಸತಿ ವ್ಯವಸ್ಥೆಯೂ ಇದೆ.
ಈ ಕಾಲೇಜಿಗೆ ಸೇರುವ ವಿದ್ಯಾರ್ಥಿಗಳು ಹಾಗೂ ಪಾಲಕರು ರಸ್ತೆಯ ದುರವಸ್ಥೆಗೆ ಬೇಸತ್ತಿದ್ದರು. ಹೈಟೆಕ್ ಶಿಕ್ಷಣ ಕೊಡುತ್ತಿದ್ದರೂ ಸಂಸ್ಥೆಗೆ ಬಂದು ಹೋಗುವ ರಸ್ತೆ ಹಾಳಾಗಿದ್ದರಿಂದ ಸಂಸ್ಥೆಯವರಿಗೂ ಕಿರಿಕಿರಿ ಉಂಟು ಮಾಡಿತ್ತು.
‘ನಗರಸಭೆಯಿಂದ ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತದೆ ಎಂದು ಕಾದುಕಾದು ಸಾಕಾದ ಸಂಸ್ಥೆಯವರು, ಸ್ವಂತ ಅನುದಾನದಿಂದ ರಸ್ತೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದರಿಂದಾಗಿ ನಗರಸಭೆಯವರು ತಮ್ಮ ಹಣ ಉಳಿಯಿತೆಂದು ಸಮಾಧಾನಪಡುವ ಬದಲು ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗೆ ಸುಸಜ್ಜಿತ ರಸ್ತೆ ಸೌಲಭ್ಯ ಒದಗಿಸಲು ಸಾಧ್ಯವಾಗಲಿಲ್ಲವಲ್ಲ ಎಂದು ವ್ಯಥೆಪಡಬೇಕಿದೆ’ ಎಂದು ಸ್ಥಳೀಯರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಕಿರು ನೀರು ಸರಬರಾಜು ಟ್ಯಾಂಕ್ ಮತ್ತು ಪೈಪ್ ಅಳವಡಿಕೆ ಕಾಮಗಾರಿ ನಡೆಸದೇ ₹95 ಲಕ್ಷವನ್ನು ಗುತ್ತಿಗೆದಾರರಿಗೆ ನೀಡಿರುವ ಹಗರಣ ಹಸಿಯಾಗಿದೆ. ಕಿಮ್ಸ್ ಸಂಸ್ಥೆ ನಿರ್ಮಿಸಿರುವ ಈ ರಸ್ತೆಗೂ ನಗರಸಭೆಯ ಕೆಲವರು ಬೋಗಸ್ ಬಿಲ್ ಮಾಡಿ ಹಣ ಲಪಟಾಯಿಸದಂತೆ ಎಚ್ಚರ ವಹಿಸಬೇಕಿದೆಪಿ.ಜೆ.ಮಹಾಂತೇಶ್ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಸಂಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.