ADVERTISEMENT

ಕೊರೊನಾ ಪಾಸಿಟಿವ್‌ ಎಂದು ತಪ್ಪಾಗಿ ವರದಿಯಾಗಿದ್ದ ಮಹಿಳೆಯ ನವಜಾತ ಶಿಶು ಸಾವು

ಲ್ಯಾಬ್‌ನ ತಪ್ಪಿಗೆ ಪಾಪು ಕಳೆದುಕೊಂಡೆವು: ಹೆತ್ತವರ ಅಳಲು

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 12:24 IST
Last Updated 24 ಜೂನ್ 2020, 12:24 IST
ನವಜಾತ ಶಿಶು ಸಾವು (ಸಾಂದರ್ಭಿಕ ಚಿತ್ರ)
ನವಜಾತ ಶಿಶು ಸಾವು (ಸಾಂದರ್ಭಿಕ ಚಿತ್ರ)   

ದಾವಣಗೆರೆ: ಗರ್ಭಿಣಿಗೆ ಕೊರೊನಾ ಪಾಸಿಟಿವ್‌ ಇದೆ ಎಂದು ತಪ್ಪಾಗಿ ಗುರುತಿಸಲಾಗಿದ್ದ ಮಹಿಳೆಯ ನವಜಾತ ಶಿಶು ಮೃತಪಟ್ಟಿದೆ. ‘ಲ್ಯಾಬ್‌ನ ತಪ್ಪು ಮಾಹಿತಿಯಿಂದಲೇ ಮಗುವನ್ನು ಕಳೆದುಕೊಂಡೆವು’ ಎಂದು ಹೆತ್ತವರು ಅಳಲು ತೋಡಿಕೊಂಡಿದ್ದಾರೆ.

ಮಾರುತಿ–ಮಂಜುಳಾ ದಂಪತಿ ಮಗುವನ್ನು ಕಳೆದುಕೊಂಡವರು. ಜೂನ್‌ 18ರಂದು ಜನನವಾಗಿದ್ದ ಗಂಡು ಮಗು ಜೂನ್‌ 23ರಂದು ಬೆಳಿಗ್ಗೆ ಮೃತಪಟ್ಟಿದೆ.

‘ಪತಿಮನೆ ದಾವಣಗೆರೆ ಮುದ್ದಭೋವಿ ಕಾಲೊನಿ. ಮಂಜುಳಾ ಅವರು ಕಳೆದ ಒಂದೂವರೆ ತಿಂಗಳಿನಿಂದ ಮಿಟ್ಲಕಟ್ಟೆ ಬಿಸಲೇರಿ ಬಳಿಯ ದುರ್ಗಾಂಬಿಕಾ ಕ್ಯಾಂಪ್‌ನಲ್ಲಿನತವರು ಮನೆಯಲ್ಲೇ ಇದ್ದರು. ಹೆರಿಗೆಗಾಗಿ ಜೂನ್‌ 18ರಂದು ಬೆಳಿಗ್ಗೆ 7.30ಕ್ಕೆ ದಾಖಲಾಗಿದ್ದರು. 10.30ರ ಹೊತ್ತಿಗೆ ಸಹಜ ಹೆರಿಗೆಯಾಗಿತ್ತು. ತಾಯಿ, ಗಂಡು ಮಗು ಆರೋಗ್ಯವಾಗಿದ್ದರು. ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮನೆಗೆ ಕರೆದೊಯ್ಯಬೇಕು ಎಂದು ಮನೆಯವರು ಯೋಚನೆ ಮಾಡುವ ಹೊತ್ತಿಗೆ ‘ಆಕೆಗೆ ಕೊರೊನಾ ಪಾಸಿಟಿವ್‌’ ಇದೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದರು. ನಮ್ಮನ್ನೆಲ್ಲ ಕ್ವಾರಂಟೈನ್‌ ಮಾಡಿದರು’ ಎಂದು ಮಹಿಳೆಯ ಸಹೋದರ ಮಾರುತಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಕೊರೊನಾ ಕಾರಣದಿಂದ ಮೊದಲು ತಾಯಿ ಮಗುವನ್ನು ಬೇರೆ ಬೇರೆ ಇಟ್ಟಿದ್ದರು. ಬೇರೆಯವರು ಭೇಟಿಯಾಗುವುದೂ ಸಮಸ್ಯೆಯಾಯಿತು. ಈ ಮಧ್ಯೆ ಮಗು ಒಂದೇ ಸಮನೆ ಅಳತೊಡಗಿತ್ತು. ಹೊಕ್ಕುಳ ಬಳ್ಳಿ ಕತ್ತರಿಸಿದ ಜಾಗದಲ್ಲಿ ಕೀವು ಆಗಿದೆ ಎಂದು ಪತ್ನಿ ಮಾಹಿತಿ ನೀಡಿದಳು. ಕೊರೊನಾ ಇದೆ ಎನ್ನುವ ಕಾರಣಕ್ಕೆ ನರ್ಸ್‌ಗಳ ಸಹಿತ ಯಾರೂ ಹತ್ತಿರಕ್ಕೆ ಬರುತ್ತಿರಲಿಲ್ಲ’ ಎಂದು ಪತಿ ಮಾರುತಿ ಮಾಹಿತಿ ನೀಡಿದರು.

‘ಐಸಿಯುಗೆ ಹಾಕಿದರು. ಮಗುವಿಗೆ ಉಸಿರಾಟದ ಸಮಸ್ಯೆ ಇದೆ ಎಂದು ಆನಂತರ ವೈದ್ಯರು ತಿಳಿಸಿದ್ದರು. ಬುಧವಾರ ಬೆಳಿಗ್ಗೆ 6.40 ಹೊತ್ತಿಗೆ ಮಗು ಮೃತಪಟ್ಟಿದೆ ಎಂದು ಮಾಹಿತಿ ನೀಡಿದರು. ವರದಿಯಲ್ಲಿ 7.10ಕ್ಕೆ ಮೃತಪಟ್ಟಿದೆ ಎಂದು ತಿಳಿಸಿದರು. ಮಗುವಿಗೆ ಸಂಬಂಧಿಸಿದಂತೆ ಕೊರೊನಾ ವರದಿ ಬರಬೇಕು. ಪಾಸಿಟಿವ್‌ ಬಂದರೆ ಮೃತದೇಹ ಕೊಡುವುದಿಲ್ಲ ಎಂದು ಹೇಳಿದ್ದರು. ನೆಗೆಟಿವ್‌ ಎಂದು ವರದಿ ಬಂದಿದೆ ಇವತ್ತು ಬೆಳಿಗ್ಗೆ ಮೃತದೇಹ ನೀಡಿದರು’ ಎಂದು ಅವರು ಘಟನೆಯನ್ನು ವಿವರಿಸಿದರು.

‘ಕೊರೊನಾ ಪಾಸಿಟಿವ್‌ ಬಂದಿದೆ ಎಂದು ವೈದ್ಯರು, ನರ್ಸ್‌ ಯಾರೂ ಮಗುವನ್ನು ಮುಟ್ಟಿಲ್ಲ. ನಾವು ಮಗುವನ್ನು ಕಳೆದುಕೊಂಡೆವು’ ಎಂದು ಬಾಣಂತಿಯ ತಾಯಿ ರೇಣುಕಮ್ಮ ಕಣ್ಣೀರು ಸುರಿಸಿದರು.

ನೆಗೆಟಿವ್‌ ಇದ್ದರೂ ಪಾಸಿಟಿವ್‌ ಎಂದು ವರದಿ ನೀಡಿದ ಲ್ಯಾಬ್‌ನವರ ಮೇಲೆ ಕ್ರಮ ಕೈಗೊಳ್ಳಬೇಕು. ಮಗು ಕಳೆದುಕೊಂಡ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

‘ಯಾವಕಾರಣದಿಂದ ಮಗು ಮೃತಪಟ್ಟಿದೆ ಎಂಬುದನ್ನು ತಿಳಿದುಕೊಂಡು ಮಾಹಿತಿ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.