ADVERTISEMENT

ಚುನಾವಣೆಗಳು ಸರಳವಾಗಬೇಕು: ಮಹಿಮಾ ಪಟೇಲ್ 

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 7:45 IST
Last Updated 17 ಏಪ್ರಿಲ್ 2024, 7:45 IST
ತ್ಯಾವಣಿಗೆ ಸಮೀಪದ ಕಾರಿಗನೂರು ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ಸಮಾಧಿಗೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು
ತ್ಯಾವಣಿಗೆ ಸಮೀಪದ ಕಾರಿಗನೂರು ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ಸಮಾಧಿಗೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು    

ತ್ಯಾವಣಿಗೆ: ದೇಶ ಅಭಿವೃದ್ಧಿಯಾಗಲು ಚುನಾವಣೆಗಳು ಸರಳವಾಗುವ ಅವಶ್ಯಕತೆ ಇದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇನೆ. ಮತ್ತೊಮ್ಮೆ ಈ ಬಗ್ಗೆ ಅವರ ಬಳಿ ಪ್ರಸ್ತಾಪಿಸುತ್ತೇನೆ ಎಂದು ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮಾ ಪಟೇಲ್ ತಿಳಿಸಿದರು.

ಸಮೀಪದ ಕಾರಿಗನೂರು ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ಸಮಾದಿಗೆ ಪುಷ್ಪನಮನ ಸಲ್ಲಿಸಿ, ನಂತರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಎಲ್ಲರನ್ನು ಒಳಗೊಂಡು ಆಲೋಚನೆ ಮಾಡುವುದು ಮುಖ್ಯ. ಸಮಾಜದ ಬಗ್ಗೆ ಚಿಂತನೆ ಮಾಡಬೇಕು. ಕಾಂಗ್ರೆಸ್, ಜೆಡಿಎಸ್ ವಿರೋಧಿಗಳು ಎನ್ನುವುದರ ಬದಲು ಎಲ್ಲರೂ ಒಟ್ಟಾಗಿ ಜನರ ಬಗ್ಗೆ ಯೋಚನೆ ಮಾಡುವಂತಹ ವಾತಾವರಣ ನಿರ್ಮಿಸಲು ಮೊದಲು ಯಾವ ಪಕ್ಷ ಪ್ರಯತ್ನ ಮುಂದುವರಿಸುತ್ತದೆಯೋ ಆ ಪಕ್ಷದ ಜೊತೆ ಬೆಂಬಲವಾಗಿ ನಿಲ್ಲುತ್ತೇವೆ’ ಎಂದು ತಿಳಿಸಿದರು.

ADVERTISEMENT

‘ಜೆ.ಎಚ್. ಪಟೇಲ್ ಅವರು ನಿಧನರಾದ ಸಂದರ್ಭದಲ್ಲಿ ಈ ಸ್ಥಳಕ್ಕೆ ಬಂದಿದ್ದೆ. ಈಗ ಮತ್ತೊಮ್ಮೆ ಇಲ್ಲಿಗೆ ಬರುವ ಅವಕಾಶ ಬಂದಿದೆ. ನಾಡಿಗೆ ಅವರ ಮಾರ್ಗದರ್ಶನದ ಅವಶ್ಯಕತೆ ಇತ್ತು’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಪಟೇಲ್ ಅವರ ಮಕ್ಕಳಾದ ಮಹಿಮಾ ಪಟೇಲ್, ತೇಜಸ್ವಿ ಪಟೇಲ್ ಅವರು ಬುದ್ಧಿವಂತರಿದ್ದು, ಅವರ ಸೇವೆ ಸಮಾಜಕ್ಕೆ ಅಗತ್ಯವಿದೆ ಎಂದು ತಿಳಿಸಿದರು.

ಜಿ.ಎಂ.ಸಿದ್ದೇಶ್ವರ ಅವರು ಪ್ರತಿ ಬಾರಿ ಚುನಾವಣೆಯಲ್ಲಿ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡುತ್ತಿದ್ದರು. ಈ ಬಾರಿ ಮೈತ್ರಿ ಧರ್ಮ ಪಾಲಿಸುವ ಉದ್ದೇಶದಿಂದ ಗಾಯಿತ್ರಿ ಸಿದ್ದೇಶ್ವರ ಅವರನ್ನು ಬೆಂಬಲಿಸುವುದು ಅನಿರ್ವಾಯವಾಗಿದೆ. ಆದರೆ, ಬಿಜೆಪಿ ಬಗೆಗಿನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರೈತ ಮುಖಂಡ ತೇಜಸ್ವಿ ಪಟೇಲ್ ಹೇಳಿದರು.

2009ರಲ್ಲಿ ಸಹಕಾರಿ ಸಕ್ಕರೆ ಕಾರ್ಖನೆಗಳ ಪನರ್ ಆರಂಭಕ್ಕೆ ಮತ್ತು ದೊಡ್ಡಬಾತಿಯಲ್ಲಿ 185 ಎಕರೆ ಭೂ-ಸ್ವಾಧೀನ ಕೈ ಬಿಡುವಂತೆ ಒತ್ತಾಯಿಸಿ ಹೋರಾಟ ಮಾಡಿದಾಗ ಬಿ.ಎಸ್‌. ಯಡಿಯೂರಪ್ಪ ಅವರು ಹೋರಾಟಕ್ಕೆ ಸ್ಪಂದಿಸಿ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸುವುದಾಗಿ ತಿಳಿಸಿದ್ದರು ಎಂದು ಸ್ಮರಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಅನಸೂಯಮ್ಮ, ಮುರುಗೇಶ್ ನಿರಾಣಿ, ರವಿಂದ್ರನಾಥ್, ಎನ್. ರವಿಕುಮಾರ್, ಬಿ.ಜಿ. ಅಜಯ್‌ಕುಮಾರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.