ದಾವಣಗೆರೆ: ಜಿಲ್ಲೆಯ ಹರಿಹರ ರೈಲು ನಿಲ್ದಾಣದ ಪಶ್ಚಿಮ ಭಾಗದಲ್ಲಿ (ರಾಣೆಬೆನ್ನೂರು ಕಡೆಗೆ) ಹಳಿಗಳನ್ನು ದಾಟಲು ಸೇತುವೆಯ ವ್ಯವಸ್ಥೆ ಇಲ್ಲದಿರುವುದು ಸ್ಥಳೀಯ ಸಾರ್ವಜನಿಕರು ಹಾಗೂ ಪ್ರಯಾಣಿಕರ ಪ್ರಾಣಕ್ಕೆ ಕಂಟಕವಾಗಿದೆ. ಹಳಿ ಮೇಲೆ ಸಂಚರಿಸಲು ಮುಂದಾಗಿ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.
ರೈಲು ನಿಲ್ದಾಣದಲ್ಲಿ ಹಳಿ ದಾಟಲು ಯತ್ನಿಸಿ ನಾಲ್ಕು ತಿಂಗಳಲ್ಲಿ ಇಬ್ಬರು ಚಲಿಸುತ್ತಿದ್ದ ರೈಲಿಗೆ ಸಿಲುಕಿ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ರೈಲು ಹಳಿ ದಾಟುತ್ತಿದ್ದ ಎಂಬಿಎ ವಿದ್ಯಾರ್ಥಿನಿಯೊಬ್ಬರು ಏ.29ರಂದು ಪ್ರಾಣ ಕಳೆದುಕೊಂಡ ಬಳಿಕ ಸೇತುವೆ ಅಗತ್ಯದ ಬಗ್ಗೆ ಒತ್ತಾಯ ಕೇಳಿಬಂದಿದೆ.
ಹರಿಹರ ರೈಲು ನಿಲ್ದಾಣದಲ್ಲಿ ಸೂಪರ್ ಪಾಸ್ಟ್, ಎಕ್ಸ್‌ಪ್ರೆಸ್, ಸರಕು ಸಾಗಣೆ ಸೇರಿ 40ಕ್ಕೂ ಹೆಚ್ಚು ರೈಲುಗಳು ನಿತ್ಯ ಸಂಚರಿಸುತ್ತವೆ. ಪ್ರಯಾಣಿಕರ ಬಳಕೆಗೆ ಮೂರು ಪ್ಲಾಟ್‌ಫಾರಂಗಳಿದ್ದು, ನಿಲ್ದಾಣದಲ್ಲಿ 7 ರೈಲು ಹಳಿಗಳಿವೆ. ಹರಿಹರ, ಹೊನ್ನಾಳಿ, ಹರಪನಹಳ್ಳಿ ಸೇರಿ ಹಲವು ತಾಲ್ಲೂಕಿನ ಜನರು ಈ ನಿಲ್ದಾನದ ಮೇಲೆ ಅವಲಂಬಿತರಾಗಿದ್ದಾರೆ. ನಿಲ್ದಾಣದ ದಕ್ಷಿಣ ಭಾಗದಲ್ಲಿ ಮಾತ್ರ ಪ್ರವೇಶಾವಕಾಶವಿದೆ.
ರೈಲು ನಿಲ್ದಾಣದ ಪೂರ್ವ ಭಾಗಕ್ಕೆ (ದಾವಣಗೆರೆ ಕಡೆ) ಪಾದಚಾರಿ ಮೇಲ್ಸೇತುವೆ (ಎಫ್‌ಒಬಿ) ಇದೆ. ನಿಲ್ದಾಣದ 1ರಿಂದ 3ನೇ ಪ್ಲಾಟ್‌ಫಾರಂಗೆ ಇದು ಸಂಪರ್ಕ ಕಲ್ಪಿಸುತ್ತದೆ. 1, 2 ಮತ್ತು 3ನೇ ಪ್ಲಾಟ್‌ಫಾರಂಗೆ ಬರುವ ರೈಲುಗಳಲ್ಲಿ ಸಂಚರಿಸುವ ಪ್ರಯಾಣಿಕರು ಈ ಸೇತುವೆ ಬಳಸಬೇಕು. ಆದರೆ, ಇದು ನಿಲ್ದಾಣದ ಮತ್ತೊಂದು ತುದಿಯಲ್ಲಿದ್ದು, ಪ್ರಯಾಣಿಕ ಸ್ನೇಹಿಯಾಗಿಲ್ಲ. ಇದರಿಂದ ಬಹುತೇಕರು ರೈಲು ಹಳಿಗಳನ್ನು ದಾಟುತ್ತಿದ್ದಾರೆ.
ನಗರದ ಮಧ್ಯಭಾಗದಲ್ಲಿರುವ ರೈಲು ನಿಲ್ದಾಣದ ಉತ್ತರ ಭಾಗದಲ್ಲಿ ಟಿಪ್ಪು ನಗರ, ಕೇಶವ ನಗರ, ವಿಜಯನಗರ, ಲೇಬರ್ ಕಾಲೊನಿ, ಕೆ.ಆರ್.ನಗರ, ಹರ್ಲಾಪುರ ಸೇರಿ ಹಲವು ಬಡಾವಣೆಗಳಿವೆ. ದಕ್ಷಿಣ ಭಾಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸೇರಿದಂತೆ ಸರ್ಕಾರಿ ಕಚೇರಿಗಳಿವೆ. ಈ ಬಡಾವಣೆಗಳ ಜನರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಮಾರುಕಟ್ಟೆಗೆ ಬರಲು ವಾಹನ ಸಂಚಾರಕ್ಕೆ ನಿರ್ಮಿಸಿದ ರೈಲ್ವೆ ಕೆಳಸೇತುವೆ ಬಳಸಬೇಕು. ಈ ಸೇತುವೆಗಳು ತುಂಬಾ ದೂರದಲ್ಲಿರುವುದರಿಂದ ಸಾರ್ವಜನಿಕರು ರೈಲು ನಿಲ್ದಾಣದ ಸಮೀಪವೇ ಹಳಿ ದಾಟುತ್ತಿದ್ದಾರೆ.
ಹಳಿ ದಾಟದಂತೆ ರೈಲ್ವೆ ಪೊಲೀಸರು ಹಾಗೂ ಸಿಬ್ಬಂದಿ ನಿರಂತರವಾಗಿ ಎಚ್ಚರಿಕೆ ನೀಡುತ್ತಲೇ ಇದ್ದಾರೆ. ರಾಣೆಬೆನ್ನೂರು ಕಡೆಯಿಂದ ಬರುವ ರೈಲುಗಳು ತುಂಗಭದ್ರಾ ನದಿ ದಾಟುತ್ತಿದ್ದಂತೆ ಹಾಗೂ ದಾವಣಗೆರೆ ಕಡೆಯಿಂದ ಬರುವ ರೈಲುಗಳು ಅಮರಾವತಿ ಕಾಲೊನಿ ಸಮೀಪದಿಂದಲೇ ಹಾರ್ನ್ ಮಾಡುತ್ತಿವೆ. ಈ ಸೂಚನೆಯನ್ನು ಹಳಿ ದಾಟುವವರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೆಲವರು ಕಿವಿಗೆ ಏರ್‌ಬಡ್ಸ್ ಹಾಕಿ ಸಂಚರಿಸುತ್ತಿರುವ ಪರಿಣಾಮ ರೈಲಿನ ಹಾರ್ನ್ ಕೂಡ ಕೇಳುತ್ತಿಲ್ಲ. ಇದರಿಂದ ಹೆಚ್ಚು ಅವಘಡಗಳು ಸಂಭವಿಸುತ್ತಿವೆ.
‘ರೈಲು ನಿಲ್ದಾಣದಲ್ಲಿ ಈಗಾಗಲೇ ಒಂದು ಪಾದಚಾರಿ ಮೇಲ್ಸೇತುವೆ ಇದ್ದು, ಅಮೃತ್ ಭಾರತ್ ಯೋಜನೆಯಡಿ ಎಸ್ಕಲೇಟರ್ ನಿರ್ಮಾಣ ಮಾಡಲಾಗುತ್ತಿದೆ. ಬಡಾವಣೆಯ ಜನರ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ರೈಲ್ವೆ ಇಲಾಖೆ ಅಧಿಕಾರಿಗಳು.
‘ಪ್ರಯಾಣಿಕರು ಹಾಗೂ ಸಾರ್ವಜನಿಕರು ಹಳಿ ದಾಟುವ ಸೇತುವೆ ನಿರ್ಮಾಣಕ್ಕೆ ಕಾಲಾವಕಾಶ ಹಿಡಿಯುತ್ತದೆ. ಅಗತ್ಯ ಭೂಮಿಯನ್ನು ಒದಗಿಸಲು ರಾಜ್ಯ ಸರ್ಕಾರವೂ ಒಲವು ತೋರಬೇಕು. ಹಳಿ ದಾಟದಂತೆ ತಡೆಯಲು ನಿಲ್ದಾಣದ ಎರಡೂ ಬದಿಯಲ್ಲಿ ಕಾಂಪೌಂಡ್ ನಿರ್ಮಾಣಕ್ಕೆ ಅವಕಾಶವಿದೆ. ಈ ಕುರಿತು ಪರಿಶೀಲಿಸಲಾಗುವುದು’ ಎಂದು ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.
ಬಸ್ ನಿಲ್ದಾಣದಿಂದ ಕೇಶವನಗರಕ್ಕೆ ತೆರಳಲು ರಸ್ತೆ ಮಾರ್ಗದಲ್ಲಿ ಸಾಕಷ್ಟು ಸುತ್ತಬೇಕು. ರೈಲು ನಿಲ್ದಾಣ ಸಮೀಪ ಹಳಿ ದಾಟಿದರೆ ಕೆಲವೇ ನಿಮಿಷ ಸಾಕಾಗುತ್ತದೆ-ಶಂಭುಲಿಂಗ, ಸ್ಥಳೀಯ ನಿವಾಸಿ ಹರಿಹರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.