
ರಾಮೇಶ್ವರ(ನ್ಯಾಮತಿ): ಶಾಲಾ–ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸಮಾಜ ಸೇವೆಯನ್ನು ಬಿತ್ತುವ ಕೆಲಸವನ್ನು ಶಿಕ್ಷಕರು ಮತ್ತು ಪೋಷಕರು ಮಾಡಬೇಕು ಎಂದು ತರಳಬಾಳು ಶಾಖಮಠ ಹರಳಕಟ್ಟಿಯ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.
ನ್ಯಾಮತಿ ತಾಲ್ಲೂಕಿನ ರಾಮೇಶ್ವರ ಗ್ರಾಮದಲ್ಲಿ ಶುಕ್ರವಾರ ಮುಲ್ಕಿಗೌಡ್ರ ದೇವಿಕೊಪ್ಪದ ಈಶ್ವರಪ್ಪ ಅವರ ಪುಣ್ಯಸ್ಮರಣೆ ಮತ್ತು ಗ್ರಾಮದ ನಿವೃತ್ತ ಆಧಿಕಾರಿ ಡಿ.ಇ. ಬಸವರಾಜಪ್ಪ ಅವರು ಬರೆದಿರುವ ‘ಒಂದು ಬೊಗಸೆ’ ಆತ್ಮ ಕಥನ ಪುಸ್ತಕ ಬಿಡುಗಡೆ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದರು.
ಆತ್ಮಕಥೆ ಬರೆಯುವವರು ಪ್ರಾಮಾಣಿಕ ಹಾಗೂ ಆತ್ಮಸ್ಥೈರ್ಯ ಇರುವವರು ಮಾತ್ರ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಅಧಿಕಾರಿಯಾಗಿದ್ದ ಬಸವರಾಜಪ್ಪ ಅವರು ಆತ್ಮಕಥೆ ಬರೆದಿರುವುದು ಶ್ಲಾಘನೀಯ ಎಂದರು.
ಶಾಸಕ ಡಿ.ಜಿ.ಶಾಂತನಗೌಡ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ಲೇಖಕ ಬಸವರಾಜಪ್ಪ ಅವರು ತಮ್ಮ ಆತ್ಮಕಥೆಗೆ ಬೊಗಸೆ ಎಂದು ಹೆಸರಿಡಲು ಮತ್ತು ಆತ್ಮಕಥೆ ಬರೆಯಲು ಪ್ರೇರಣೆಯಾದ ಬಗ್ಗೆ ತಿಳಿಸಿದರು.
ಅಭಿಜಾತ ಕನ್ನಡ ಸಂಶೋಧನಾ ಪತ್ರಿಕೆ ಸಂಪಾದಕ ಎ.ಎಂ.ಎಂ. ಕೊಟ್ರಸ್ವಾಮಿ, ಎನ್‌ಐಸಿ ಉಪ ಮಹಾನಿರ್ದೇಶಕ ದಶರಥ ಮಾಶಾಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಜಿ.ವಿಶ್ವನಾಥ, ಮಾಜಿ ಶಾಸಕ ವೈದ್ಯ ಡಿ.ಬಿ.ಗಂಗಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಮಹಾಬಲೇಶ್ವರಗೌಡ್ರು, ವಿಶ್ರಾಂತ ಪ್ರಾಧ್ಯಾಪಕ ಯು.ಎನ್. ಉಜ್ಜನಯ್ಯ, ಮಹೇಶ್ವರಯ್ಯ, ನಿವೃತ್ತ ಎಂಜಿನಿಯರ್ ಓದೋ ಗಂಗಪ್ಪ, ಮನೋಹರ ಎಂ.ಕಮ್ಮಾರ, ವೈದ್ಯ ಡಿ.ಜಯರಾಜು, ಸದಾನಂದ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.