ADVERTISEMENT

’ಅಯೋಗ್ಯ ಚಿತ್ರದ ಭಿತ್ತಿ ಪತ್ರದಲ್ಲಿ ಆಕ್ಷೇಪಾರ್ಹ ಪದ ಬಳಕೆ’

ಗ್ರಾಮ ಪಂಚಾಯಿತಿ ಸದಸ್ಯರು ಗರಂ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2018, 17:28 IST
Last Updated 25 ಆಗಸ್ಟ್ 2018, 17:28 IST
ನ್ಯಾಮತಿ ಶ್ರೀಶೈಲ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿರುವ ಆಯೋಗ್ಯ ಚಿತ್ರದ ಭಿತ್ತಿಪತ್ರದಲ್ಲಿ ಆಕ್ಷೇಪ ಪದ ಮುದ್ರಣಗೊಂಡಿರುವುದಕ್ಕೆ ಗ್ರಾಮ ಪಂಚಾಯಿತಿ ಸದಸ್ಯರು ಚಿತ್ರಮಂದಿರದ ಮಾಲೀಕರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು
ನ್ಯಾಮತಿ ಶ್ರೀಶೈಲ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿರುವ ಆಯೋಗ್ಯ ಚಿತ್ರದ ಭಿತ್ತಿಪತ್ರದಲ್ಲಿ ಆಕ್ಷೇಪ ಪದ ಮುದ್ರಣಗೊಂಡಿರುವುದಕ್ಕೆ ಗ್ರಾಮ ಪಂಚಾಯಿತಿ ಸದಸ್ಯರು ಚಿತ್ರಮಂದಿರದ ಮಾಲೀಕರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು   

ನ್ಯಾಮತಿ: ಪಟ್ಟಣದ ಶ್ರೀಶೈಲ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿರುವ ಅಯೋಗ್ಯ ಚಲನಚಿತ್ರದ ಭಿತ್ತಿಪತ್ರದ ಕೆಳಗಡೆ ‘ಗ್ರಾಮ ಪಂಚಾಯಿತಿ ಸದಸ್ಯ’ ಎಂದು ಮುದ್ರಣಗೊಂಡಿರುವುದಕ್ಕೆ ನ್ಯಾಮತಿ ಗ್ರಾಮ ಪಂಚಾಯಿತಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಕಳೆದ ವಾರ ಬಿಡುಗಡೆಗೊಂಡ ಟಿ.ಆರ್. ಚಂದ್ರಶೇಖರ ನಿರ್ಮಾಣದ, ಎಸ್. ಮಹೇಶಕುಮಾರ ನಿರ್ದೇಶನದ ಆಯೋಗ್ಯ ಚಲನಚಿತ್ರದ ಹೆಸರು ಅಯೋಗ್ಯ ಎಂದು ಮಾತ್ರ ಇದೆ. ಆದರೆ ಸ್ಥಳೀಯ ಚಿತ್ರಮಂದಿರದ ಮಾಲೀಕರು ಪ್ರಚಾರಪಡಿಸಿರುವ ಭಿತ್ತಿ ಪತ್ರದಲ್ಲಿ ಅಯೋಗ್ಯ ಚಿತ್ರದ ಟೈಟಲ್ ಕೆಳಗಡೆ ‘ಗ್ರಾಮ ಪಂಚಾಯಿತಿ ಸದಸ್ಯ’ ಎಂದು ಇದೆ. ರಾಜ್ಯದಾದ್ಯಂತ ಎಲ್ಲಿಯೂ ಈ ರೀತಿ ಮುದ್ರಣಗೊಂಡಿಲ್ಲ’ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಪೂಜಾರ ಹಾಗೂ ಅಧ್ಯಕ್ಷೆ ರೇಣುಕಮ್ಮ ನೇತೃತ್ವದಲ್ಲಿ ಸದಸ್ಯರು ಚಿತ್ರಮಂದಿರದ ಎದುರು ಬಂದು ಭಿತ್ತಿ ಪತ್ರಗಳನ್ನು ಪರಿಶೀಲಿಸಿದರು. ನಿಜಾಂಶವನ್ನು ತಿಳಿದು ಚಿತ್ರಮಂದಿರದ ಮಾಲೀಕ ಮತ್ತು ವ್ಯವಸ್ಥಾಪಕರ ವಿರುದ್ದ ವಾಗ್ದಾಳಿ ನಡೆಸಿದರು.

ADVERTISEMENT

ಚಿತ್ರಮಂದಿರದ ವ್ಯವಸ್ಥಾಪಕ ಮಹೇಶ್ವರಯ್ಯ ಸಮಜಾಯಿಷಿ ನೀಡಿ, ‘ಬೆಂಗಳೂರಿನ ಬಾಲಾಜಿ ಲಿಥೋ ಮುದ್ರಣಾಲಯದ ಅಚಾತುರ್ಯದಿಂದ ಈ ರೀತಿ ಆಗಿದೆ’ ಎಂದರು.

ಇದನ್ನು ಒಪ್ಪದ ಸದಸ್ಯರು ಚಿತ್ರಮಂದಿರದ ಮಾಲೀಕ ಮುದ್ರಣ ಸಂಸ್ಥೆಯವರನ್ನು ಗ್ರಾಮ ಪಂಚಾಯಿತಿ ಕಚೇರಿಗೆ ಖುದ್ದಾಗಿ ಬಂದು ಸಮಜಾಯಿಷಿ ನೀಡುವಂತೆ ತಾಕೀತು ಮಾಡಿದರು. ಚಿತ್ರಮಂದಿರದ ಮಾಲೀಕ ಸರಿಯಾದ ಸಮಜಾಯಿಷಿ ನೀಡದಿದ್ದರೆ ನ್ಯಾಮತಿ-ಹೊನ್ನಾಳಿ ತಾಲ್ಲೂಕಿನ 47 ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಚಿತ್ರಮಂದಿರದ ಎದುರು ಪ್ರತಿಭಟನೆ ನಡೆಸಿ ಪ್ರದರ್ಶನ ರದ್ದುಪಡಿಸಬೇಕಾಗುತ್ತದೆ ಎಂದು ಅಧ್ಯಕ್ಷೆ ರೇಣುಕಮ್ಮ ಎಚ್ಚರಿಸಿದರು.

ಸದಸ್ಯರಾದ ಪಿ. ಚಂದ್ರಶೇಖರ, ಕೆ.ಆರ್. ಗಂಗಾಧರ, ಗಿರೀಶ, ಎ. ಪ್ರಸಾದ, ಎ.ಕೆ. ಸುರೇಶ, ಬಾಬು, ವರಲಕ್ಷ್ಮೀ, ಎಸ್.ಟಿ. ರೂಪಾ, ಎನ್. ಸುನೀತಾ, ಜೀರಿಗೆ ಸುನಂದಮ್ಮ, ಶಕುಂತಲಮ್ಮ, ಯಶೋದಾ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.