ADVERTISEMENT

ಓಜಿ ಕುಪ್ಪಂ ಡಕಾಯಿತರು ಹೊನ್ನಾಳಿ ಪೊಲೀಸ್‌ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 6:06 IST
Last Updated 28 ಜುಲೈ 2021, 6:06 IST
ಡಕಾಯಿತರ ಗುಂಪಿನ ಸದಸ್ಯರನ್ನು ಹೊನ್ನಾಲಿಯ ಕರ್ನಾಟಕ ಬ್ಯಾಂಕ್ ಬಳಿ ಕರೆದುಕೊಂಡು ಬಂದು ತನಿಖೆ ನಡೆಸಲಾಯಿತು. 
ಡಕಾಯಿತರ ಗುಂಪಿನ ಸದಸ್ಯರನ್ನು ಹೊನ್ನಾಲಿಯ ಕರ್ನಾಟಕ ಬ್ಯಾಂಕ್ ಬಳಿ ಕರೆದುಕೊಂಡು ಬಂದು ತನಿಖೆ ನಡೆಸಲಾಯಿತು.    

ಹೊನ್ನಾಳಿ: ಹೊನ್ನಾಳಿ ಸೇರಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಹಣವನ್ನು ದೋಚುತ್ತಿದ್ದ ಆಂಧ್ರಪ್ರದೇಶದ ಓಜಿ ಕುಪ್ಪಂ ಡಕಾಯಿತರ ಗುಂಪಿನ ಸದಸ್ಯರನ್ನು ಬಾಡಿ ವಾರೆಂಟ್‌ ಮೂಲಕ ವಶಕ್ಕೆ ಪಡೆದಿರುವ ಹೊನ್ನಾಳಿ ಪೊಲೀಸರು ಮಂಗಳವಾರ ವಿಚಾರಣೆ ಆರಂಭಿಸಿದ್ದಾರೆ.

ತಾಲ್ಲೂಕಿನ ಹರಳಹಳ್ಳಿ ಗ್ರಾಮದ ಸುರೇಶ್ ಎಂಬುವರು ಮೆಕ್ಕೆಜೋಳ ಮಾರಿದ್ದ ₹ 3.54 ಲಕ್ಷವನ್ನು ಮಾರ್ಚ್ 1ರಂದು ಕರ್ನಾಟಕ ಬ್ಯಾಂಕ್‌ನಲ್ಲಿ ಡ್ರಾ ಮಾಡಿಕೊಂಡು ಬೈಕ್‌ನ ಕಿಟ್‌ನಲ್ಲಿ ಇಟ್ಟುಕೊಂಡು ಹೊರಡುವ ಸಮಯದಲ್ಲಿ ಈ ಗುಂಪು ಅವರ ಗಮನವನ್ನು ಬೇರೆಡೆ ಸೆಳೆದು ಹಣವನ್ನು ದೋಚಿದ್ದರು.

ಘಂಟ್ಯಾಪುರ ಗ್ರಾಮದ ಚಂದ್ರನಾಯ್ಕ್ ಎಂಬುವವರು ಮೆಕ್ಕೆಜೋಳ ಮಾರಾಟ ಮಾಡಿದ ₹ 4.85 ಲಕ್ಷ ಹಣವನ್ನು ಕೆನರಾ ಬ್ಯಾಂಕ್‌ನಿಂದ ಬಿಡಿಸಿಕೊಂಡು ಬರುವಾಗಲೂ ಅವರ ಗಮನವನ್ನು ಬೇರೆಡೆ ಸೆಳೆದು ಹಣವನ್ನು ದೋಚಿದ್ದರು. ಈ ಎರಡೂ ಪ್ರಕರಣಗಳು ಹೊನ್ನಾಳಿ ಪೊಲೀಸರಿಗೆ ತಲೆನೋವಾಗಿತ್ತು.

ADVERTISEMENT

ದಾವಣಗೆರೆ ಡಿಸಿಆರ್‌ಬಿ ಪೊಲೀಸರು ಈಚೆಗೆ ಗುಂಪಿನ ಸದಸ್ಯರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಡಕಾಯಿತರ ಗುಂಪಿನ ಸದಸ್ಯರು ಹೊನ್ನಾಳಿಯ ಎರಡೂ ಪ್ರಕರಣಗಳಲ್ಲಿ ಬೇಕಾಗಿದ್ದರು. ಬಾಡಿ ವಾರೆಂಟ್ ಮೂಲಕ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಸಿಪಿಐ ದೇವರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.