ADVERTISEMENT

ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ಸರ್ಕಾರ ಬದ್ಧ: ಮಧು ಬಂಗಾರಪ್ಪ

ಚನ್ನಗಿರಿ: ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 6:53 IST
Last Updated 21 ಸೆಪ್ಟೆಂಬರ್ 2025, 6:53 IST
ಚನ್ನಗಿರಿಯ ಮೌದ್ಗಲ್ ಆಂಜನೇಯ ಸ್ವಾಮಿ ಸಮುದಾಯ ಭವನದಲ್ಲಿ ಶನಿವಾರ ನಡೆದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ಬಸವರಾಜು ವಿ. ಶಿವಗಂಗಾ, ಜಿ. ಕೊಟ್ರೇಶ್ ಇದ್ದರು.
ಚನ್ನಗಿರಿಯ ಮೌದ್ಗಲ್ ಆಂಜನೇಯ ಸ್ವಾಮಿ ಸಮುದಾಯ ಭವನದಲ್ಲಿ ಶನಿವಾರ ನಡೆದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ಬಸವರಾಜು ವಿ. ಶಿವಗಂಗಾ, ಜಿ. ಕೊಟ್ರೇಶ್ ಇದ್ದರು.   

ಚನ್ನಗಿರಿ: ‘ದೇವಸ್ಥಾನಗಳಲ್ಲಿ ಗಂಟೆ ಹೊಡೆಯುವ ಬದಲು ಸಮಯಕ್ಕೆ ಸರಿಯಾಗಿ ಶಾಲೆಗಳಲ್ಲಿ ಗಂಟೆ ಹೊಡೆದರೆ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಂಡು ದೇಶದ ಪ್ರಗತಿಗೆ ಕೈಜೋಡಿಸುತ್ತಾರೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಪಟ್ಟಣದ ಮೌದ್ಗಲ್ ಆಂಜನೇಯ ಸ್ವಾಮಿ ಸಮುದಾಯ ಭವನದಲ್ಲಿ ಶಿಕ್ಷಣ ಇಲಾಖೆಯಿಂದ ನಡೆದ ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನನ್ನ ರಕ್ತದ ಪ್ರತಿ ಕಣದಲ್ಲೂ ಕನ್ನಡ ಇದೆ. ಕನ್ನಡಕ್ಕೆ ಮೊದಲ ಆದ್ಯತೆ. ಒಂದು ದೇಶ ಅಭಿವೃದ್ಧಿ ಹೊಂದಲು ಶಿಕ್ಷಣದಿಂದ ಮಾತ್ರ ಸಾಧ್ಯ. ರಾಜ್ಯದಲ್ಲಿ ಶಿಕ್ಷಕರ ನೂರಾರು ಸಮಸ್ಯೆಗಳಿದ್ದು, ಈ ಎಲ್ಲ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುವುದು. 2023ರಿಂದ ಸರ್ಕಾರಿ ಶಾಲೆಗಳಿಗೆ ಸರ್ಕಾರದಿಂದ ಉಚಿತ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

‘ಚುನಾವಣಾ ಪೂರ್ವದ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ನಮ್ಮ ಸರ್ಕಾರ ಸಿದ್ಧ ವಿದೆ. ಮುಂದಿನ ಮೂರು ವರ್ಷಗಳಲ್ಲಿ ಮತ್ತೆ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲಾಗುವುದು. ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರತರಾಗಿರುವ ಶಿಕ್ಷಕರು ಕಡ್ಡಾಯವಾಗಿ ಟಿಇಟಿ ಪರೀಕ್ಷೆಯನ್ನು ಪಾಸು ಮಾಡಬೇಕು ಎಂದು ಸುಪ್ರೀಂಕೋರ್ಟ್ ಆದೇಶ ಮಾಡಿದೆ. ಹಾಗಾಗಿ ಕೋರ್ಟ್ ಆದೇಶವನ್ನು ಎಲ್ಲರೂ ಪಾಲಿಸಲೇಬೇಕಿದೆ’ ಎಂದು ಹೇಳಿದರು.

‘ವಿವೇಕ ಯೋಜನೆ ಅಡಿ ಈಗಾಗಲೇ 41 ಶಾಲಾ ಕೊಠಡಿಗಳನ್ನು ನಿರ್ಮಿಸಿದ್ದು, ಇನ್ನೂ 85 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದೆ. ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕಗಳನ್ನು ಪಡೆಯುವ ಪ್ರತಿ ವಿದ್ಯಾರ್ಥಿಗೂ ಪ್ರತಿ ವರ್ಷ ವೈಯಕ್ತಿವಾಗಿ ₹ 1 ಲಕ್ಷ ನಗದು ಬಹುಮಾನ ನೀಡಲಾಗುವುದು’ ಎಂದು ಶಾಸಕ ಬಸವರಾಜು ಶಿವಗಂಗಾ ತಿಳಿಸಿದರು.

ಶಾಲಾ ಶಿಕ್ಷಣ ಇಲಾಖೆ ಡಿಡಿಪಿಐ ಜಿ. ಕೊಟ್ರೇಶ್, ಡಯಟ್ ಡಿಡಿಪಿಐ ಎಸ್. ಗೀತಾ, ತಹಶೀಲ್ದಾರ್ ಎನ್.ಜೆ. ನಾಗರಾಜ್, ತಾಲ್ಲೂಕು ಪಂಚಾಯಿತಿ ಇಒ ಎಂ.ಆರ್. ಪ್ರಕಾಶ್, ಬಿಇಒ ಎಲ್. ಜಯಪ್ಪ, ಬಿಆರ್‌ಸಿ ಎಸ್. ಶಂಕರಪ್ಪ, ಕಾಂಗ್ರೆಸ್ ಮುಖಂಡ ಅಮಾನುಲ್ಲಾ, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಪಿ.ವಿ. ಸ್ವಾಮಿ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಜಯಪ್ರಕಾಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.