ADVERTISEMENT

ದಾವಣಗೆರೆ: ಮಾರ್ಚ್‌ 3ಕ್ಕೆ ಕೃಷಿ ಪ್ರಧಾನ ಚಿತ್ರ ‘ಕಾಸಿನಸರ’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2023, 4:50 IST
Last Updated 25 ಫೆಬ್ರುವರಿ 2023, 4:50 IST
‘ಕಾಸಿನಸರ’ ಚಿತ್ರದ ನಟ ವಿಜಯ ರಾಘವೇಂದ್ರ, ನಟಿ ಹರ್ಷಿಕಾ ಪೂಣಚ್ಚ
‘ಕಾಸಿನಸರ’ ಚಿತ್ರದ ನಟ ವಿಜಯ ರಾಘವೇಂದ್ರ, ನಟಿ ಹರ್ಷಿಕಾ ಪೂಣಚ್ಚ   

ದಾವಣಗೆರೆ: ಸಾವಯವ ಕೃಷಿ ಬಗ್ಗೆ ಹೇಳುವ ಕೃಷಿ ಪ್ರಧಾನ ಚಿತ್ರ ‘ಕಾಸಿನಸರ’ ಚಿತ್ರ ಮಾರ್ಚ್‌ 3ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಎನ್.ಆರ್. ನಂಜುಂಡೇಗೌಡ ತಿಳಿಸಿದರು.

ನೇಟಿವ್ ಕ್ರಿಯೇಷನ್ಸ್ ಬ್ಯಾನರ್‌ನಡಿ ಈ. ದೊಡ್ಡನಾಗಯ್ಯ ಚಿತ್ರ ನಿರ್ಮಿಸಿದ್ದು, ‘ಚಿನ್ನಾರಿಮುತ್ತ’ ಖ್ಯಾತಿಯ ನಟ ವಿಜಯರಾಘವೇಂದ್ರ ಪ್ರಗತಿಪರ ರೈತನಾಗಿ ಕಾಣಿಸಿಕೊಂಡಿದ್ದಾರೆ. ನಟಿ ಹರ್ಷಿಕಾ ಪೂಣಚ್ಚ, ಉಮಾಶ್ರೀ, ನೀನಾಸಂ ಅಶ್ವತ್‌ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಸಾಹಿತಿ ಎಸ್‌.ಜಿ. ಸಿದ್ಧರಾಮಯ್ಯ ಸಂಭಾಷಣೆ ಬರೆದಿದ್ದಾರೆ. ಶ್ರೀಧರ್‌ ಸಂಭ್ರಮ್‌ ಸಂಗೀತ ಚಿತ್ರಕ್ಕಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜಾಗತೀಕರಣದಿಂದ ಇಂದು ಕೃಷಿ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಮನರಂಜನೆ ಜತೆ ಸಂದೇಶವನ್ನೂ ಚಿತ್ರ ಹೇಳುತ್ತದೆ. 100 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದರು.

ADVERTISEMENT

ಜನ ಚಿತ್ರಮಂದಿರಗಳತ್ತ ಬರಲು ಏನು ಮಾಡಬೇಕೆಂಬ ಜಿಜ್ಞಾಸೆ ಇಂದಿನ ದಿನಗಳಲ್ಲಿ ಕಾಡಲಾರಂಭಿಸಿದೆ. ಚಿತ್ರವನ್ನು ಜನರಿಗೆ ತಲುಪಿಸಲು ಪ್ರಚಾರ ಇಂದಿನ ಅಗತ್ಯ. ಮನರಂಜನೆಯನ್ನು ನೆಪವಾಗಿಟ್ಟುಕೊಂಡು ಮಣ್ಣು, ಕೃಷಿಯ ಮಹತ್ವ ಸಾರುವ ಮಹತ್ವದ ಸಂದೇಶ ಈ ಚಿತ್ರದಲ್ಲಿದೆ. ಚಿತ್ರ ಹೊಸ ಅನುಭವ ನೀಡಿದೆ. ಚಿತ್ರಕ್ಕೆ ದಾವಣಗೆರೆ ಜನರ ಪ್ರೋತ್ಸಾಹ ಬೇಕು ಎಂದು ನಟ ವಿಜಯ ರಾಘವೇಂದ್ರ ಮನವಿ ಮಾಡಿದರು.

‘ನನ್ನ ವೃತ್ತಿ ಜೀವನದ ವಿಶೇಷ ಚಿತ್ರ ಇದು. ರಾಷ್ಟ್ರಪ್ರಶಸ್ತಿ ಪಡೆದ ನಟ ವಿಜಯ ರಾಘವೇಂದ್ರ, ನಿರ್ದೇಶಕ ನಂಜುಂಡೇಗೌಡ, ಕಲಾವಿದೆ ಉಮಾಶ್ರೀ ಜತೆ ಅಭಿನಯಿಸಿದ ಖುಷಿ ಇದೆ. ಸಿನಿಮಾ ನೋಡಿದ ಪ್ರೇಕ್ಷಕರಿಗೆ ಚಿತ್ರ ಒಳ್ಳೆಯ ಅನುಭವ ನೀಡಲಿದೆ‘ ಎಂದು ನಟಿ ಹರ್ಷಿಕಾ ಪೂಣಚ್ಚ ಹೇಳಿದರು.

ನಿರ್ಮಾಪಕ ಈ. ದೊಡ್ಡನಾಗಯ್ಯ, ಸಾಹಿತಿ ಎಸ್‌.ಜಿ. ಸಿದ್ಧರಾಮಯ್ಯ, ಶ್ರೀಧರ್‌ ವಿ. ಸಂಭ್ರಮ್‌ ಮಾತನಾಡಿದರು.

ಸಹ ನಿರ್ದೇಶಕ ಕೋಲಾರ ನಾಗೇಶ್, ಕಲಾವಿದ ನೀನಾಸಂ ಅಶ್ವತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.