ADVERTISEMENT

ಸೆಸ್ ಹೆಚ್ಚಳಕ್ಕೆ ವಿರೋಧ: ವ್ಯಾಪಾರ ಸ್ಥಗಿತ

ವಾಣಿಜ್ಯ, ಕೈಗಾರಿಕಾ ಮಹಾಸಂಸ್ಥೆ, ಕರ್ನಾಟಕ ಮೆಕ್ಕೆಜೋಳ ವರ್ತಕರ ಸಂಘ, ದಲ್ಲಾಳರ ಸಂಘಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 3:23 IST
Last Updated 22 ಡಿಸೆಂಬರ್ 2020, 3:23 IST
ಎಪಿಎಂಸಿ ಮಾರುಕಟ್ಟೆ ಶುಲ್ಕ (ಸೆಸ್)ವನ್ನು ಹೆಚ್ಚಿಸಿರುವುದನ್ನು ಖಂಡಿಸಿ ವರ್ತಕರು ಪ್ರತಿಭಟನೆ ನಡೆಸಿದ ಕಾರಣ ದಾವಣಗೆರೆಯ ಎಪಿಎಂಸಿಯಲ್ಲಿ ಹಮಾಲಿಗಳು ಕೆಲಸವಿಲ್ಲದೇ ಖಾಲಿ ಕುಳಿತಿರುವುದು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಎಪಿಎಂಸಿ ಮಾರುಕಟ್ಟೆ ಶುಲ್ಕ (ಸೆಸ್)ವನ್ನು ಹೆಚ್ಚಿಸಿರುವುದನ್ನು ಖಂಡಿಸಿ ವರ್ತಕರು ಪ್ರತಿಭಟನೆ ನಡೆಸಿದ ಕಾರಣ ದಾವಣಗೆರೆಯ ಎಪಿಎಂಸಿಯಲ್ಲಿ ಹಮಾಲಿಗಳು ಕೆಲಸವಿಲ್ಲದೇ ಖಾಲಿ ಕುಳಿತಿರುವುದು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಕೃಷಿ ಮಾರುಕಟ್ಟೆ ಶುಲ್ಕ (ಸೆಸ್‌)ವನ್ನು ₹0.35 ಪೈಸೆಯಿಂದ ₹1ಕ್ಕೆ ಹೆಚ್ಚಿಸಿರುವುದನ್ನು ವಿರೋಧಿಸಿ ವ್ಯಾಪಾರಸ್ಥರು ಸೋಮವಾರ ವ್ಯವಹಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.

ದಾವಣಗೆರೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ, ಕರ್ನಾಟಕ ಮೆಕ್ಕೆಜೋಳ ವರ್ತಕರ ಸಂಘ ಹಾಗೂ ದಲ್ಲಾಳರ ಸಂಘಗಳು ಜಂಟಿಯಾಗಿಪ್ರತಿಭಟನೆ ನಡೆಸಿದ ನಂತರ ಹಳೆಯ ಶುಲ್ಕವನ್ನೇ ಮುಂದುವರಿಸುವಂತೆ ಆಗ್ರಹಿಸಿಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದವು.

ರೈತರಿಗೆ ಮೊದಲೇ ಸೂಚನೆ ನೀಡಿದ್ದರಿಂದ ಹೆಚ್ಚಿನ ಉತ್ಪನ್ನಗಳು ಎಪಿಎಂಸಿಗೆ ಬಂದಿರಲಿಲ್ಲ. ಸೋಮವಾರ ಯಾವುದೇ ಟೆಂಡರ್ ಪ್ರಕ್ರಿಯೆ,ತೂಕ ಮಾಪನ ಕಾರ್ಯ ನಡೆಯಲಿಲ್ಲ. ಅಲ್ಲಲ್ಲಿ ಕೆಲವು ರೈತರು ಮುಂಚಿತವಾಗಿ ತಾವು ಬೆಳೆದ ಬೆಳೆಯನ್ನು ತಂದಿದ್ದರು. ಆದರೆ ಖರೀದಿ ನಡೆಯದೇ ನಿರಾಶೆಗೊಂಡರು.

ADVERTISEMENT

‘ಈಗ ಯಾವುದೇ ಸೀಸನ್ ಇಲ್ಲದೇ ಇರುವುದರಿಂದ 500 ಕ್ವಿಂಟಲ್ ಮೆಕ್ಕೆಜೋಳ, 300 ಕ್ವಿಂಟಲ್ ಭತ್ತ ಬರುತ್ತಿತ್ತು. ಆದರೆ ಸೋಮವಾರ ರೈತರು ಬಂದಿರಲಿಲ್ಲ. ಭತ್ತ ಹಾಗೂ ರಾಗಿ ಖರೀದಿ ಕೇಂದ್ರದಲ್ಲೇ ರೈತರು ನೋಂದಣಿ ಮಾಡಿಸಿದರು’ ಎಂದು ಎಪಿಎಂಸಿ ಕಾರ್ಯದರ್ಶಿ ದೊರೆಸ್ವಾಮಿ ತಿಳಿಸಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಜ್ಜಂಪುರಶೆಟ್ರು ಶಂಭುಲಿಂಗಪ್ಪ, ‘ಎಪಿಎಂಸಿ ಕಾಯ್ದೆಗಳ ಅನ್ವಯ ರಾಜ್ಯ ಸರ್ಕಾರ ಎಪಿಎಂಸಿ ಪ್ರಾಂಗಣ ಹೊರತುಪಡಿಸಿ, ಬೇರೆಡೆ ಮಾರಾಟ ಮಾಡಿದರೆ ಅದಕ್ಕೆ ಶುಲ್ಕ ವಿನಾಯಿತಿ ನೀಡಿದೆ. ಇದರಿಂದ ಹೆಚ್ಚಿನ ರೈತರು, ವ್ಯಾಪಾರಿಗಳು ಶುಲ್ಕವಿಲ್ಲದ ಕಡೆಯಲ್ಲಿ ವ್ಯವಹರಿಸುವುದರಿಂದ ಮಾರುಕಟ್ಟೆಯಲ್ಲಿ ಹಣ ತೊಡಗಿಸಿರುವ ದಲ್ಲಾಳಿಗಳಿಗೆ ಮತ್ತು ಇದನ್ನೇ ವೃತ್ತಿಯನ್ನಾಗಿಸಿಕೊಂಡ ಹಮಾಲರು ಮತ್ತು ಕೂಲಿ ಕಾರ್ಮಿಕರು ಜೀವನ ನಡೆಸುವುದು ಕಷ್ಟಕರವಾಗುತ್ತದೆ’ ಎಂದರು.

‘ಎಪಿಎಂಸಿ ಪ್ರಾಂಗಣದಲ್ಲಿ ಸೆಸ್ ಅನ್ನು ಶೇ 1ಕ್ಕೆ ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದರಿಂದ ಯಾವ ವ್ಯಾಪಾರಿಗಳು ಎಪಿಎಂಸಿಗೆ ಬರುವುದಿಲ್ಲ. ಬದಲಾಗಿ ಬೇರೆಡೆ ಮಾರಾಟ ಮಾಡುತ್ತಾರೆ. ಮಾರುಕಟ್ಟೆಗೆ ಕೃಷಿ ಉತ್ಪನ್ನಗಳು
ಬರುವುದೇ ದುಸ್ತರವಾಗುತ್ತದೆ.ರೈತರ ಸರಕುಗಳಿಗೆ ಸ್ಪರ್ಧಾತ್ಮ ಬೆಲೆ ಸಿಗಬೇಕಾದರೆಎಪಿಎಂಸಿ ಒಳಗೆ ಹಾಗೂ ಹೊರಗಡೆ ಏಕರೂಪ ಶುಲ್ಕ ವಿಧಿಸಬೇಕು’ ಎಂದು ಆಗ್ರಹಿಸಿದರು.

‘ಸೆಸ್‌ನಿಂದ ಪರೋಕ್ಷವಾಗಿ ರೈತರಿಗೆ ಹೊರೆಯಾಗುತ್ತಿದ್ದು, ಮಾರುಕಟ್ಟೆ ಒಳಗಡೆ ಹಾಗೂ ಹೊರಗಡೆ ಒಂದೇ ಬಗೆಯ ಸೆಸ್ ಹಾಕಬೇಕು. ಈ ಹಿಂದೆ ₹0.35 ಪೈಸೆಯನ್ನು ಪುನಃ ಜಾರಿಗೊಳಿಸಬೇಕು’ ಎಂದು ಕರ್ನಾಟಕ ಮೆಕ್ಕೆಜೋಳ ವರ್ತಕರ ಸಂಘ ಜಿಲ್ಲಾ ಘಟಕದ ಕಾರ್ಯದರ್ಶಿ ಕೆ. ಜಾವೇದ್ ಆಗ್ರಹಿಸಿದರು.

ದಲ್ಲಾಳರ ಸಂಘದ ಜಿ.ಎಸ್. ಪರಮೇಶ್ವರ ಗೌಡ್ರು, ಬಿ.ಎನ್.ಟಿ.ಸದಾನಂದ, ಎಚ್.ದಯಾನಂದ, ಕಿರುವಾಡಿ ಸೋಮಶೇಖರ್, ಮಾಗಾನಹಳ್ಳಿ ನಿಜಾನಂದಪ್ಪ, ವರ್ತಕ ಪ್ರತಿನಿಧಿ ದೊಗ್ಗಹಳ್ಳಿ ಬಸವರಾಜ್, ಕಬ್ಬೂರು ಪ್ರಕಾಶ್, ಕೆ.ಇಜಾಜ್ ಅಹ್ಮದ್, ಇಕ್ಬಾಲ್, ಬಿ. ಷಣ್ಮುಖಪ್ಪ, ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.