ADVERTISEMENT

World Organ Donation Day | ಯಾರೆಲ್ಲ ಅಂಗಾಂಗ ದಾನ ಮಾಡಬಹುದು? ಇಲ್ಲಿದೆ ಮಾಹಿತಿ

ಅಂಗಾಂಗಗಳನ್ನು ಸ್ವರ್ಗಕ್ಕೆ ಕೊಂಡೊಯ್ಯದೇ ದಾನ ನೀಡಿ ಇಲ್ಲಿಯೇ ಸ್ವರ್ಗ ಸೃಷ್ಟಿಸಬಹುದು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 6:56 IST
Last Updated 13 ಆಗಸ್ಟ್ 2025, 6:56 IST
ಅಂಗಾಂಗ ದಾನ (ಪ್ರಾತಿನಿಧಿಕ ಚಿತ್ರ)
ಅಂಗಾಂಗ ದಾನ (ಪ್ರಾತಿನಿಧಿಕ ಚಿತ್ರ)   

ಇನ್ನೊಬ್ಬರ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವ, ಮಾನವೀಯತೆಯ ಅತ್ಯುತ್ತಮ ಕೊಡುಗೆ ಎನ್ನಿಸಿಕೊಂಡಿರುವ ಅಂಗಾಂಗ ದಾನ ಇಂದಿನ ಅಗತ್ಯಗಳಲ್ಲೊಂದು. ಅಂಗಾಂಗ ದಾನ ಜೀವದಾನಕ್ಕೆ ಸಮ. ಇದರ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ.

ಮನುಷ್ಯ ತನ್ನ ಜೀವಿತ ಅಥವಾ ಮರಣೋತ್ತರ ಅವಧಿಯಲ್ಲಿ ತನ್ನ ಅಂಗಗಳನ್ನು ಅಗತ್ಯವಿರುವ ವ್ಯಕ್ತಿಗೆ ದಾನವಾಗಿ ನೀಡುವುದು. ಇದರಿಂದ ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ವ್ಯಕ್ತಿಗೆ ಜೀವದಾನ ನೀಡಿದಂತಾಗಿ ಆತ ಮತ್ತೆ ಆರೋಗ್ಯವಾಗಿ ಬದುಕಬಹುದು. ಇದು ಅಗತ್ಯವಿದ್ದವರ ಜೀವನದಲ್ಲಿ ಹೊಸಬೆಳಕು ಹರಿಸುವುದಲ್ಲದೆ, ಬದುಕುವ ಭರವಸೆ ನೀಡಬಲ್ಲದು. ಅಂಗಾಂಗ ವೈಫಲ್ಯದಿಂದ ನರಳುತ್ತಿರುವವರು ದಾನಿಗಳ ನಿರೀಕ್ಷೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದು, ಅಂಥವರಿಗೆ ಆಶಾಕಿರಣವಾಗಿ ಅಂಗಾಂಗ ಲಭಿಸಬೇಕಿದೆ.

ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಮೂಢನಂಬಿಕೆ ಹಾಗೂ ಅಜ್ಞಾನ ಭಾರತದಲ್ಲಿ ಅಂಗಾಂಗ ದಾನದ ಪ್ರಮಾಣ ಕಡಿಮೆ ಆಗಿರಲು ಪ್ರಮುಖ ಕಾರಣವಾಗಿದೆ. ಆದರೆ, ನಮ್ಮ ಮರಣದ ನಂತರ ಮಣ್ಣಲ್ಲಿ ಮಣ್ಣಾಗಿ ಹೋಗುವ ನಮ್ಮ ಅಂಗ ಇನ್ನೊಬ್ಬರ ಬಾಳಿಗೆ ಬೆಳಕಾದಲ್ಲಿ ಅದು ಖಂಡಿತ ನಮ್ಮ ಜೀವನದ ಸಾರ್ಥಕತೆಯೂ ಹೌದು.

ADVERTISEMENT
ಯಾರೆಲ್ಲ ಅಂಗಾಂಗ ದಾನ ಮಾಡಬಹುದು?

ಜೀವಂತ ದಾನಿಗಳು: ಜೀವಿತ ಸಮಯದಲ್ಲಿ ಒಬ್ಬ ವ್ಯಕ್ತಿ ಬಯಸಿದಲ್ಲಿ ತನ್ನ ರಕ್ತ ಸಂಬಂಧಿಗಳಿಗೆ ತನ್ನ ಒಂದು ಕಿಡ್ನಿ ಅಥವಾ ತನ್ನ ಲಿವರ್‌ನ ಒಂದು ಭಾಗ, ಮೇದೋಜೀರಕ ಗ್ರಂಥಿಯ ಒಂದು ಭಾಗವನ್ನು ದಾನ ಮಾಡಬಹುದು.

ಮೃತ ದಾನಿಗಳು: ಅಪಘಾತಕ್ಕೆ ಒಳಗಾಗಿ ‘ಬ್ರೇನ್‌ ಡೆಡ್‌’ ಎಂದು ಘೋಷಿತ ವ್ಯಕ್ತಿಯ ಹಲವು ಅಂಗಾಂಗಗಳನ್ನು ಆ ವ್ಯಕ್ತಿಯ ಕುಟುಂಬದವರ  ಒಪ್ಪಿಗೆ ಮೇರೆಗೆ ಪಡೆಯಬಹುದು.

ಒಬ್ಬ ವ್ಯಕ್ತಿ ಕಿಡ್ನಿ, ಲಿವರ್, ಹೃದಯದ ಕವಾಟ, ಶ್ವಾಸಕೋಶ, ಮೇದೋಜೀರಕ ಗ್ರಂಥಿ, ಕಣ್ಣು, ಮೂಳೆ, ಮೂಳೆಮಜ್ಜೆಗಳನ್ನು ದಾನವಾಗಿ ನೀಡಬಹುದು. ಒಬ್ಬ ದಾನಿ ಎಂಟು ಜನರಿಗೆ ಅಂಗಾಂಗ ನೀಡಬಹುದು ಅಥವಾ 75 ಜನರಿಗೆ ಅಂಗಾಂಶಗಳನ್ನು ದಾನ ಮಾಡಿ ಜೀವ ಉಳಿಸಬಹುದು.

ಭಾರತದಲ್ಲಿ ಪ್ರತಿವರ್ಷ ಅಂದಾಜು 5 ಲಕ್ಷ ಜನರಿಗೆ ಅಂಗಾಂಗ ದಾನದ ಅಗತ್ಯವಿದೆ. ಆದರೆ, ಕೇವಲ 15,000 ಅಂಗಾಂಗ ದಾನ ಪ್ರಕ್ರಿಯೆ  ನಡೆಯುತ್ತಿದೆ. ಜಗತ್ತಿನಾದ್ಯಂತದ ಅಂಕಿ–ಅಂಶ ಗಮನಿಸಿದರೆ ಭಾರತದಲ್ಲಿ ಶೇ 0.52ರಷ್ಟು ಜನರು ಮಾತ್ರ ಅಂಗಾಂಗ ದಾನ ಮಾಡುತ್ತಿದ್ದಾರೆ.

ಕಾರಣಗಳು

ಅರಿವಿನ ಕೊರತೆ, ಭಯ ಮತ್ತು ಮೂಢನಂಬಿಕೆ, ಧಾರ್ಮಿಕ ನಂಬಿಕೆಗಳು, ಅಂಗಾಂಗ ಕಸಿಗೆ ಬೇಕಾದ ಮೂಲ ಸೌಕರ್ಯಗಳ ಕೊರತೆ, ಅಂಗಾಂಗ ಮಾರಾಟ ಜಾಲದ ಭಯ, ದುಃಖದಲ್ಲಿರುವ ಕುಟುಂಬಕ್ಕೆ ಸಮರ್ಪಕ ಮಾರ್ಗದರ್ಶನದ ಕೊರತೆ.

ಅಂಗಾಂಗ ದಾನಿಯು ಹೆಸರು ನೋಂದಾಯಿಸಿದ 2 ವಾರಗಳಲ್ಲಿ ಡೋನರ್ ಕಾರ್ಡ್ ಲಭ್ಯವಾಗುತ್ತದೆ. ಇದಾದ ನಂತರ ತಮ್ಮ ಇಚ್ಛೆಯನ್ನು  ಕುಟುಂಬದವರೊಂದಿಗೆ ಚರ್ಚಿಸಬೇಕು. ಕುಟುಂಬದವರ ಒಪ್ಪಿಗೆ ಇಲ್ಲದೇ ಯಾವ ದಾನವೂ ಸಾಧ್ಯವಿಲ್ಲ. ವಿಲ್‌ ಬರೆದರೂ ಅಂಗಾಂಗ ದಾನ ಸಾಧ್ಯ.

ದಾನ ಹೆಚ್ಚಳದ ಕ್ರಮಗಳು:

ಪತ್ರಿಕಗಳಲ್ಲಿ ಲೇಖನ, ಟಿ.ವಿ, ರೇಡಿಯೋ, ಸಾಮಾಜಿಕ ಜಾಲತಾಣಗಳ ಮೂಲಕ ದಾನಿಗಳ ಪ್ರೇರಣಾದಾಯಕ ಕಥೆಯನ್ನು ಮನಸ್ಸಿಗೆ ತಲುಪುವಂತೆ ಮಾಡುವುದು. ಅಂಗಾಂಗ ದಾನದ ಮಹತ್ವವನ್ನು ಚಿಕ್ಕವಯಸ್ಸಿನಲ್ಲೇ ತಿಳಿಸುವುದು. ಜಾಗೃತಿ ಕಾರ್ಯಕ್ರಮ, ಪ್ರಬಂಧ ಸ್ಪರ್ಧೆ, ಚರ್ಚಾಕೂಟ ಆಯೋಜಿಸಿದರೆ, ಧರ್ಮಗುರುಗಳ ಅಥವಾ ಸಮುದಾಯದ ನಾಯಕರೂ ಜಾಗೃತಿ ಮೂಡಿಸಿದರೆ ಜ್ಞಾನ ದೊರೆಯಲು ಸಾಧ್ಯ.

ವ್ಯಕ್ತಿಯ ಬ್ರೇನ್‌ ಡೆಡ್ ವೇಳೆ ಕುಟುಂಬವನ್ನು ಸಮಾಧಾನಪಡಿಸಿ ದಾನ ಪ್ರಕ್ರಿಯೆ ವಿವರಿಸುವುದು. ಪ್ರೀತಿಪಾತ್ರರನ್ನು ಕಳೆದುಕೊಳ್ಳುವುದು ಒಂದು ದುಃಖದ ಸಂಗತಿ. ಆ ಶೋಕದ ಕ್ಷಣದಲ್ಲಿ ಅಂಗಾಂಗ ದಾನದ ನಿರ್ಧಾರ ತೆಗೆದುಕೊಳ್ಳುವುದು ಕಷ್ಟಕರ. ಅನ್ನ, ರಕ್ತ, ಹಣ, ವಿದ್ಯೆ, ಬಟ್ಟೆಬರೆ, ಆಸ್ತಿ ದಾನ ಮಾಡಿರಬಹುದು. ಆದರೆ, ನೇತ್ರ ದಾನದಿಂದ ಒಬ್ಬ ಅಂಧ ವ್ಯಕ್ತಿಯ ಜೀವನಕ್ಕೆ ಬೆಳಕು ನೀಡಬಹುದು. ಹೃದಯ ನೀಡಿದರೆ ಜೀವದಾನ ಮಾಡಿದಂತೆಯೇ. ನೀವು ಯಾರಿಗಾದರೂ ಜೀವಿಸಲು ಎರಡನೇ ಅವಕಾಶ ನೀಡಬಹುದಾದ್ದರಿಂದ ಅಂಥ ಅವಕಾಶವನ್ನು ತಪ್ಪಿಸಿಕೊಳ್ಳುವುದು ಎಷ್ಟು ಸೂಕ್ತ ಅಲ್ಲವೇ?

(ಲೇಖಕರು, ದಾವಣಗೆರೆಯ ಜ.ಜ.ಮ. ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.