ದಾವಣಗೆರೆ: ಬಾಕಿ ಇರುವ ಆಸ್ತಿ ತೆರಿಗೆ ವಸೂಲಾತಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಮಾದರಿಯಲ್ಲಿ ‘ಒಂದು ಬಾರಿ ಪರಿಹಾರ’ (ಒಟಿಎಸ್) ಯೋಜನೆಯನ್ನು ದಾವಣಗೆರೆಯಲ್ಲಿ ಅನುಷ್ಠಾನಗೊಳಿಸುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಮಹಾನಗರ ಪಾಲಿಕೆ ಸಜ್ಜಾಗಿದೆ.
ಮೇಯರ್ ಕೆ.ಚಮನ್ ಸಾಬ್ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಆಸ್ತಿ ತೆರಿಗೆಯ ದಂಡದ ಮೊತ್ತಕ್ಕೆ ವಿನಾಯಿತಿ ನೀಡಲು ಹಾಗೂ ಕೈಗಾರಿಕಾ ಕಟ್ಟಡಗಳಿಗೆ ಕಲ್ಪಿಸಿರುವ ವಿನಾಯಿತಿ ಹೆಚ್ಚಿಸುವಂತೆ ಕೋರಲು ನಿರ್ಧರಿಸಲಾಗಿದೆ. ಈ ಸಂಬಂಧ ‘ಕರ್ನಾಟಕ ಪೌರನಿಗಮಗಳ ಅಧಿನಿಯಮ–1976’ಕ್ಕೆ ತಿದ್ದುಪಡಿ ತರುವಂತೆ ಮನವಿ ಮಾಡಲಾಗುತ್ತಿದೆ.
ಮಹಾನಗರ ಪಾಲಿಕೆಯ 45 ವಾರ್ಡ್‌ಗಳ ವ್ಯಾಪ್ತಿಯಲ್ಲಿ 1.35 ಲಕ್ಷ ಆಸ್ತಿಗಳಿವೆ. ಇದರಲ್ಲಿ ವಾಣಿಜ್ಯ, ಕೈಗಾರಿಕಾ ಉದ್ದೇಶದ 13 ಸಾವಿರಕ್ಕೂ ಹೆಚ್ಚು ಕಟ್ಟಡಗಳಿವೆ. ಉಳಿದವು ವಸತಿ ಉದ್ದೇಶದ ನಿವೇಶನ ಹಾಗೂ ಕಟ್ಟಡಗಳಾಗಿವೆ. ಪ್ರತಿ ವರ್ಷ ಆಸ್ತಿ ತೆರಿಗೆ ಪಾವತಿಗೆ ಏಪ್ರಿಲ್‌ವರೆಗೆ ಶೇ 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ತೆರಿಗೆ ಪಾವತಿಗೆ ಮೇ ಮತ್ತು ಜೂನ್‌ವರೆಗೆ ಅವಕಾಶ ಕಲ್ಪಿಸಲಾಗುತ್ತದೆ. ಜುಲೈ ಬಳಿಕ ದಂಡ ವಿಧಿಸಲಾಗುತ್ತದೆ.
ವಸತಿ ಉದ್ದೇಶದ ಕಟ್ಟಡಗಳ ಆಸ್ತಿ ತೆರಿಗೆಯನ್ನು ಬಹುತೇಕ ಮಾಲೀಕರು ಆಯಾ ವರ್ಷವೇ ಪಾವತಿಸುತ್ತಿದ್ದಾರೆ. ವಾಣಿಜ್ಯ ಹಾಗೂ ಕೈಗಾರಿಕಾ ಉದ್ದೇಶದ ಕಟ್ಟಡಗಳು ಹಲವು ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿವೆ. ಉದ್ಯಮದಲ್ಲಾದ ನಷ್ಟ ಹಾಗೂ ತೆರಿಗೆಯ ಭಾರದಿಂದ ಅನೇಕರು ತೆರಿಗೆ ಪಾವತಿಸಲು ಉತ್ಸುಕತೆ ತೋರಿಲ್ಲ. ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ವ್ಯಾಪ್ತಿಯಲ್ಲಿರುವ ಕೈಗಾರಿಕೆಗಳು ಹಾಗೂ ಮಂಡಕ್ಕಿ ಭಟ್ಟಿಗಳಿಂದ ಸಾಕಷ್ಟು ಪ್ರಮಾಣದ ಆಸ್ತಿ ತೆರಿಗೆ ಬಾಕಿ ಇದೆ.
‘ಕೆಲವು ಆಸ್ತಿಗಳ ಮಾಲೀಕರು ದಶಕಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಸುಸ್ತಿ ಉಳಿಸಿಕೊಂಡ ತೆರಿಗೆಗೆ ಪ್ರತಿ ವರ್ಷ ದಂಡ ಹಾಗೂ ಬಡ್ಡಿ ವಿಧಿಸಲಾಗುತ್ತದೆ. ಪ್ರತಿ ತಿಂಗಳು ಶೇ 2ರಷ್ಟು ಬಡ್ಡಿ ಇರುವುದರಿಂದ ಇದರ ಮೊತ್ತ ಹೆಚ್ಚಾಗುತ್ತದೆ. ಇದನ್ನೇ ನೆಪ ಮಾಡಿಕೊಂಡು ಅನೇಕರು ಆಸ್ತಿ ತೆರಿಗೆ ಪಾವತಿಸುತ್ತಿಲ್ಲ. ‘ಒಟಿಎಸ್’ಗೆ ಅವಕಾಶ ಸಿಕ್ಕರೆ ಈ ಹೊರೆ ಕಡಿಮೆ ಆಗಲಿದೆ’ ಎನ್ನುತ್ತಾರೆ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ.
‘ಬೇರೆಡೆ ನೆಲೆಸಿರುವ ಆಸ್ತಿ ಮಾಲೀಕರು ಪ್ರತಿ ವರ್ಷ ತೆರಿಗೆ ಪಾವತಿಸಲು ಸಾಧ್ಯವಾಗಿಲ್ಲ. ಇನ್ನೂ ಕೆಲವರು ತೆರಿಗೆ ಬಗೆಗೆ ಉದಾಸೀನ ತೋರುತ್ತಿದ್ದಾರೆ. ಇಂಥವರಿಂದ ತೆರಿಗೆ ವಸೂಲಿ ಮಾಡಲು ‘ಒಟಿಎಸ್’ ಅನುಕೂಲ’ ಎಂಬುದು ಮಹಾನಗರ ಪಾಲಿಕೆಯ ಲೆಕ್ಕಾಚಾರ.
ಹಲವು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದ ವಸತಿ ಕಟ್ಟಡಗಳ ಸುಸ್ತಿದಾರರು ಐದು ವರ್ಷದ ಬಾಕಿಯನ್ನು ಮಾತ್ರ ಪಾವತಿಸುವ ಅವಕಾಶವನ್ನು ‘ಒಟಿಎಸ್’ ಯೋಜನೆಯಡಿ ಬಿಬಿಎಂಪಿ ಕಲ್ಪಿಸಿದೆ. ದಂಡ ಮತ್ತು ಬಡ್ಡಿಯ ಮೊತ್ತದಲ್ಲಿ ಕೂಡ ಶೇ 50ರಷ್ಟನ್ನು ಮನ್ನಾ ಮಾಡಲಾಗಿದೆ. ರಾಜ್ಯದ ಉಳಿದ ನಗರ ಸ್ಥಳೀಯ ಸಂಸ್ಥೆಗಳಿಗೆ ಈ ಸೌಲಭ್ಯವಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ಮಹಾನಗರ ಪಾಲಿಕೆಯ ನಿಯೋಗ, ‘ದಾವಣಗೆರೆ ಮಹಾನಗರ ಪಾಲಿಕೆಗೆ ‘ಒಟಿಎಸ್’ ಯೋಜನೆ ವಿಸ್ತರಿಸಿದರೆ ಅನುಕೂಲ’ ಎಂಬುದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿತ್ತು.
ಸಿದ್ಧವಾಗುತ್ತಿದೆ ಸುಸ್ತಿದಾರರ ಪಟ್ಟಿ
ಹಲವು ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಕಟ್ಟಡಗಳ ಸಮೀಕ್ಷೆಗೆ ಮಹಾನಗರ ಪಾಲಿಕೆ ಸಿದ್ಧತೆ ನಡೆಸಿದೆ. ದೊಡ್ಡ ಮೊತ್ತದ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿಗಳ ಮಾಲೀಕರ ಪಟ್ಟಿಯನ್ನು ತಯಾರಿಸಲಾಗುತ್ತಿದೆ. ‘ಒಂದು ಬಾರಿ ಪರಿಹಾರ’ (ಒಟಿಎಸ್) ಯೋಜನೆಯ ಪ್ರಸ್ತಾವಕ್ಕೆ ಸರ್ಕಾರದ ಅನುಮೋದನೆ ಸಿಗುತ್ತಿದ್ದಂತೆ ವಸೂಲಿ ಪ್ರಕ್ರಿಯೆ ಆರಂಭವಾಗಲಿದೆ. ಕಂದಾಯ ನಿರೀಕ್ಷಕರು ಈಗಾಗಲೇ ಇಂತಹ ಕಟ್ಟಡಗಳ ಪರಿಶೀಲನೆ ನಡೆಸುತ್ತಿದ್ದಾರೆ’ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಒಂದು ಬಾರಿ ಪರಿಹಾರ ಯೋಜನೆಗೆ (ಒಟಿಎಸ್) ಪಾಲಿಕೆಯ ಕೌನ್ಸಿಲ್ ಅನುಮೋದನೆ ಸಿಕ್ಕಿದೆ. ಈ ಕುರಿತ ಪ್ರಸ್ತಾವವನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡುವ ಪ್ರಕ್ರಿಯೆ ನಡೆಯುತ್ತಿದೆ.-ರೇಣುಕಾ, ಮಹಾನಗರ ಪಾಲಿಕೆ ಆಯುಕ್ತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.