ADVERTISEMENT

ದಾವಣಗೆರೆ: ಭತ್ತದ ಬೆಳೆಗೆ ‘ಸೊಳ್ಳೆರೋಗ’ದ ಕಾಟ

ರೈತರಿಗೆ ರೋಗ ನಿಯಂತ್ರಣದ್ದೇ ಚಿಂತೆ; ಇಳುವರಿ ಕಡಿಮೆಯಾಗುವ ಆತಂಕ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 6:03 IST
Last Updated 7 ನವೆಂಬರ್ 2025, 6:03 IST
ನಿಟ್ಟೂರು ಗ್ರಾಮದ ಹೊರವಲಯದ ಭತ್ತದ ಗದ್ದೆಯಲ್ಲಿ ಸೊಳ್ಳೆರೋಗ ನಿಯಂತ್ರಿಸಲು ಕ್ರಿಮಿನಾಶಕ ಸಿಂಪಡಣೆ ಮಾಡುತ್ತಿರುವ ಕೃಷಿ ಕಾರ್ಮಿಕರು
ನಿಟ್ಟೂರು ಗ್ರಾಮದ ಹೊರವಲಯದ ಭತ್ತದ ಗದ್ದೆಯಲ್ಲಿ ಸೊಳ್ಳೆರೋಗ ನಿಯಂತ್ರಿಸಲು ಕ್ರಿಮಿನಾಶಕ ಸಿಂಪಡಣೆ ಮಾಡುತ್ತಿರುವ ಕೃಷಿ ಕಾರ್ಮಿಕರು   

ಮಲೇಬೆನ್ನೂರು: ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಭತ್ತದ ಬೆಳೆಯು ಕಾಳು ಕಟ್ಟುವ ಹಂತದಲ್ಲಿದ್ದು, ಸೊಳ್ಳೆ ರೋಗಬಾಧೆ (ಕಂದು ಜಿಗಿಹುಳು) ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು. 

‘ಪ್ರತಿ ಬಾರಿ ಭತ್ತದ ಒಕ್ಕಲು ಆರಂಭಕ್ಕೂ ಮುನ್ನ ಸೊಳ್ಳೆ ರೋಗ ಕಾಣಿಸಿಕೊಳ್ಳುವುದು ವಾಡಿಕೆ. ಪ್ರಸಕ್ತ ಮಳೆಗಾಲದ ಅಂತ್ಯದಲ್ಲಿ ಮಳೆ ಸುರಿದ ಕಾರಣ ಕಡಿಮೆ ಆಗಿತ್ತು. ಈಗ ಮಳೆ ನಿಂತಿದ್ದು, ಬಿಸಿಲು ಹೆಚ್ಚಾಗುತ್ತಿದೆ. ಮಂಜಿನೊಂದಿಗೆ ಮಾಗಿ ಚಳಿ ಕೂಡ ಬೀಳುತ್ತಿದೆ. ಮುಂಚಿತವಾಗಿ ನಾಟಿ ಮಾಡಿದ ಭತ್ತ ಕಾಳು ಕಟ್ಟುವ ಹಂತದಲ್ಲಿದೆ. ದೇವರಬೆಳಕೆರೆ ಅಚ್ಚುಕಟ್ಟಿನಲ್ಲಿ ಭತ್ತ ಒಣಗಿದ್ದು, ಕಟಾವು ಭರದಿಂದ ಆರಂಭವಾಗಿದೆ. ಕೆಲವು ಕಡೆ ಮಾತ್ರ ಸೊಳ್ಳೆರೋಗ ಕಾಣಿಸಿಕೊಳ್ಳುತ್ತಿದೆ’ ಎಂದು ರೈತ ಹೊಸಳ್ಳಿ ಕರಿಬಸಪ್ಪ ಮಾಹಿತಿ ನೀಡಿದರು. 

‘ಸೊಳ್ಳೆ ಕಾಣಿಸಿಕೊಳ್ಳುವ ಭಾಗದಲ್ಲಿ ರೋಗ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಔಷಧೋಪಚಾರ ಅನಿವಾರ್ಯವಾಗಿದೆ’ ಎಂದು ಕುಂಬಳೂರು ಗ್ರಾಮದ ರೈತ ಹನುಮಂತು ಬೇಸರ ವ್ಯಕ್ತಪಡಿಸಿದರು. 

ADVERTISEMENT

‘ಸೊಳ್ಳೆರೋಗದಿಂದ ಇಳುವರಿ ಕುಸಿತ ನಿಶ್ಚಿತ. ಗದ್ದೆ ಒಣಗಿಸಿ ನೀರು ಕೊಡಬೇಕು. ಕಡಿಮೆ ನೀರು ಬಳಸಬೇಕು, ಕಡಿಮೆ ಪ್ರಮಾಣದ ಔಷಧೋಪಚಾರ ಮಾಡಬೇಕು’ ಎನ್ನುತ್ತಾರೆ ಅನುಭವಿ ರೈತ ನಂದಿತಾವರೆ ಗ್ರಾಮದ ಪೂಜಾರ ಗದ್ದಿಗೆಪ್ಪ.

‘ಬೆಳೆ ಪರಿವರ್ತನೆಯಿಂದ ರೋಗ ನಿಯಂತ್ರಿಸಲು ಸಾಧ್ಯ’ ಎನ್ನುತ್ತಾರೆ ಕುಂಬಳೂರಿನ ಶರಣ ಮುದ್ದಣ ಸಾವಯವ ಕೃಷಿಕರ ಬಳಗದ ಸಂಚಾಲಕ ಎನ್.‌ ಆಂಜನೇಯ.

ಬೆಳೆ ಉಳಿಸಿಕೊಳ್ಳಲು ಕೃಷಿಕರು ಹಲವಾರು ಬಗೆಯ ಕ್ರಿಮಿನಾಶಕ ಬಳಸುತ್ತಿದ್ದಾರೆ. ಯಾಂತ್ರೀಕೃತ ಸಿಂಪಡಣೆ ದೃಶ್ಯ ಸಾಮಾನ್ಯವಾಗಿದೆ. ಔಷಧಿ ಸಿಂಪಡಣೆ ಮಾಡುವ ಕೃಷಿ ಕಾರ್ಮಿಕರಿಗೂ, ಯಂತ್ರಗಳಿಗೂ ಬೇಡಿಕೆ ಹೆಚ್ಚಾಗಿದೆ.

ಸಂಪೂರ್ಣ ರೋಗ ನಿಯಂತ್ರಣ ಕಷ್ಟ. ಬೆಳೆ ಪರಿವರ್ತನೆ ಆಳ ಉಳುಮೆ ಸಸಿ ತಯಾರಿ ವೇಳೆ ಬೀಜೋಪಚಾರ ಕಡಿಮೆ ನೀರು ಗೊಬ್ಬರ ಬಳಕೆ ಮಾಡುವುದರಿಂದ ರೋಗ ನಿಯಂತ್ರಿಸಬಹುದು.
– ಹೇಮಂತ್, ಪ್ರಭಾರ ಸಹಾಯಕ ಕೃಷಿ ಅಧಿಕಾರಿ ಮಲೇಬೆನ್ನೂರು

ಸೊಳ್ಳೆರೋಗ ಎಂದರೇನು?

ನಾಟಿ ಮಾಡಿದ ಭತ್ತ ಕಾಳು ಕಟ್ಟುವ ಹಂತದಲ್ಲಿ ಹಸಿರು ಇರುವ ಬೆಳೆ ಕಂದು ಬಣ್ಣಕ್ಕೆ ತಿರುಗುವುದು ಇದನ್ನೇ ರೈತರು ಆಡುಭಾಷೆಯಲ್ಲಿ ‘ಸೊಳ್ಳೆರೋಗ’ ಎಂದು ಕರೆಯುವವರು. ಇದಕ್ಕೆ ಬಿಪಿಎಚ್‌ (ಭತ್ತಕ್ಕೆ ಕಂದು ಜಿಗಿಹುಳು) ಎಂದು ಕರೆಯುವವರು. ಈ ರೋಗ ಬಂದರೆ ತೆನೆ ಚನ್ನಾಗಿ ಕಂಡರೂ ಕಾಳುಗಟ್ಟುವುದಿಲ್ಲ. ಜೊಳ್ಳೆ ಜಾಸ್ತಿ ಆಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.