ADVERTISEMENT

ದಾವಣಗೆರೆ: ಡಿ.16ರಿಂದ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ – ಡಿಸಿ ಡಾ.ಬಗಾದಿ ಗೌತಮ್‌

ಡಿ. 5ರಿಂದ 15ರವರೆಗೆ ರೈತರ ನೋಂದಣಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2018, 13:49 IST
Last Updated 29 ನವೆಂಬರ್ 2018, 13:49 IST
   

ದಾವಣಗೆರೆ: ಕೇಂದ್ರ ಸರ್ಕಾರದ ನಿರ್ದೇಶನದಂತೆ 2017-18ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಸಾಮಾನ್ಯ ಭತ್ತವನ್ನು ₹ 1,750 ಹಾಗೂ ‘ಎ’ ಗ್ರೇಡ್ ಭತ್ತವನ್ನು ₹ 1,770 ದರದಲ್ಲಿ ನೋಂದಾಯಿತ ರೈತರಿಂದ ಡಿಸೆಂಬರ್ 16ರಿಂದ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘2 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಗುರಿ ನೀಡಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಪ್ರತಿಯೊಬ್ಬ ರೈತರಿಂದ 40 ಕ್ವಿಂಟಲ್ ಭತ್ತವನ್ನು ಮಾತ್ರ ಖರೀದಿಸಲಾಗುತ್ತದೆ. ಡಿಸೆಂಬರ್ 5ರಿಂದ 15ರವರೆಗೆ ರೈತರು ಹೆಸರು ನೋಂದಣಿ ಮಾಡಿಕೊಳ್ಳಬಹುದು’ ಎಂದರು.

ಬೆಳೆ ಕಾಲಂನಲ್ಲಿ ಭತ್ತ ಎಂದು ನಮೂದಾಗಿರುವ ಪಹಣಿಯನ್ನು ರೈತರು ತರಬೇಕು. ಪಹಣಿಯಲ್ಲಿ ನಮೂದಾಗಿರದೇ ಇದ್ದರೆ ಸಂಬಂಧಿಸಿದ ಗ್ರಾಮ ಲೆಕ್ಕಾಧಿಕಾರಿಯಿಂದ ದೃಢೀಕರಣ ಪತ್ರ ತರಬೇಕು. ಜೊತೆಗೆ ಆಧಾರ್ ಕಾರ್ಡ್‌, ಭತ್ತ ಖರೀದಿಯ ಹಣ ಜಮಾ ಮಾಡಲು ಬ್ಯಾಂಕ್ ಖಾತೆಯ ವಿವರ ನೀಡಬೇಕು. ಭತ್ತ ಮಾರಲು ಇಚ್ಛಿಸುವ ರೈತರು ತಮ್ಮ ಹೆಸರನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಇಲ್ಲವೇ ತಾಲ್ಲೂಕು ಕೇಂದ್ರಗಳ ಎ.ಪಿ.ಎಂ.ಸಿ ಆವರಣದಲ್ಲಿನ ಆಹಾರ ನಾಗರಿಕ ಸರಬರಾಜು ನಿಗಮದ ಸಗಟು ಮಳಿಗೆಗಳಲ್ಲಿ (ದಾವಣಗೆರೆ, ಹರಿಹರ, ಚನ್ನಗಿರಿ, ಹೊನ್ನಾಳಿ) ನೋಂದಣಿ ಮಾಡಿಕೊಳ್ಳಬಹುದು ಎಂದು ವಿವರಿಸಿದರು.

ADVERTISEMENT

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಖ ಮಂಜುನಾಥನ್, ‘ಸರ್ಕಾರ ಭತ್ತ ಖರೀದಿಗೆ 3 ಏಜೆನ್ಸಿಗಳನ್ನು ನಿಗದಿಪಡಿಸಿದೆ. ಜಿಲ್ಲೆಯಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ಸಂಗ್ರಹಣಾ ಏಜೆನ್ಸಿಯಾಗಿದೆ. ಜಿಲ್ಲೆಯಲ್ಲಿ ಕಾರ್ಯನಿರತ ಅಕ್ಕಿ ಗಿರಣಿಗಳನ್ನು ಭತ್ತ ಖರೀದಿ ಕಾರ್ಯಕ್ಕೆ ನೋಂದಾಯಿಸಿಕೊಂಡು ಅಕ್ಕಿ ಗಿರಣಿಗಳ ಹಲ್ಲಿಂಗ್ ಹಾಗೂ ಶೇಖರಣಾ ಸಾಮರ್ಥ್ಯಕ್ಕೆ ಅನುಗುಣವಾಗಿ ಸಂಗ್ರಹಣೆ ಮಾಡಲಾಗುವುದು’ ಎಂದು ತಿಳಿಸಿದರು.

‘ನೋಂದಾಯಿಸಿಕೊಂಡ ರೈತರಿಗೆ ಇಲಾಖೆಯಿಂದ ಕಳುಹಿಸುವ ಎಸ್.ಎಂ.ಎಸ್ ಆಧಾರದಲ್ಲಿ ಸಂಬಂಧಿಸಿದ ಅಕ್ಕಿ ಗಿರಣಿಗೆ ಭತ್ತದ

ಡಾ. ಬಗಾದಿ ಗೌತಮ್‌

ಮಾದರಿಗಳನ್ನು ರೈತರು ನೀಡಬೇಕು. ಅಕ್ಕಿ ಗಿರಣಿ ಮಾಲೀಕರು ರೈತರಿಂದ ಸ್ವೀಕರಿಸಿದ ಭತ್ತದ ಮಾದರಿಗಳನ್ನು ಸಂಗ್ರಹಣಾ ಏಜೆನ್ಸಿಗಳಿಂದ ನೇಮಕವಾಗುವ ಗುಣಮಟ್ಟ ಪರಿಶೀಲನಾ ಅಧಿಕಾರಿಯ ಮೂಲಕ ಗುಣಮಟ್ಟ ದೃಢೀಕರಣ ಪಡೆದ ನಂತರವೇ ಅಕ್ಕಿ ಗಿರಣಿಯವರು ಭತ್ತವನ್ನು ಖರೀದಿಸಿ ಸಂಗ್ರಹಿಸಬೇಕು. ಭತ್ತವನ್ನು ರೈತರು ತಮ್ಮ ಚೀಲಗಳಲ್ಲಿ ತಂದು ಅಕ್ಕಿ ಗಿರಣಿಗೆ ಸಲ್ಲಿಸಿದಾಗ ಪ್ರತಿ ಕ್ವಿಂಟಲ್ ಚೀಲಕ್ಕೆ ₹ 6ರಂತೆ ಖರೀದಿ ಏಜೆನ್ಸಿಗಳು ಪಾವತಿಸಲಿವೆ’ ಎಂದು ಮಾಹಿತಿ ನೀಡಿದರು.

ಅಕ್ಕಿ ಗಿರಣಿ ಮಾಲೀಕರಿಂದ ಭತ್ತದ ಖರೀದಿ ವಿವರ ಲಭ್ಯವಾದ ತಕ್ಷಣ ಏಜೆನ್ಸಿಯಿಂದ ರೈತರಿಗೆ ಮೂರು ದಿನಗಳ ಒಳಗೆ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುವುದು. ವಿವರಗಳಿಗೆ ಆಹಾರ ನಿಮಗದ ಜಿಲ್ಲಾ ವ್ಯವಸ್ಥಾಪಕ ಮುನೀರ್ ಬಾಷಾ (ಮೊ: 8310649796) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ಆಹಾರ ನಿಮಗದ ಜಿಲ್ಲಾ ವ್ಯವಸ್ಥಾಪಕ ಮುನೀರ್ ಬಾಷಾ ಉಪಸ್ಥಿತರಿದ್ದರು.

ಅಂಕಿ–ಅಂಶಗಳು

* ₹ 1,750 ಸಾಮಾನ್ಯ ಗ್ರೇಡ್‌ ಭತ್ತಕ್ಕೆ ನಿಗದಿಪಡಿಸಿದ ದರ

* ₹ 1,770 ‘ಎ’ ಗ್ರೇಡ್‌ ಭತ್ತಕ್ಕೆ ನಿಗದಿಪಡಿಸಿದ ದರ

* 40 ಕ್ವಿಂಟಲ್‌ ಪ್ರತಿ ರೈತರಿಂದ ಭತ್ತ ಖರೀದಿಗೆ ಅವಕಾಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.