ದಾವಣಗೆರೆ: ಅನ್ನ, ಅಕ್ಷರ, ಆಶ್ರಯ, ಆಧ್ಯಾತ್ಮ ಮತ್ತು ಆರೋಗ್ಯ ಎಂಬ ಪಂಚ ದಾಸೋಹವನ್ನು ಭಕ್ತರಿಗೆ ನೀಡಲು ಪೀಠ ಒಲವು ತೋರಿದೆ. ₹ 10 ಕೋಟಿಯನ್ನು ಬ್ಯಾಂಕಿನಲ್ಲಿ ಠೇವಣಿ ಇರಿಸಿ ಕಾರ್ಯಪ್ರವೃತ್ತರಾಗುವ ಆಲೋಚನೆ ಇದೆ ಎಂದು ಹರಿಹರ ಪಂಚಮಸಾಲಿ ಲಿಂಗಾಯತ ಗುರುಪೀಠದ ವಚನಾನಂದ ಸ್ವಾಮೀಜಿ ಹೇಳಿದರು.
ಇಲ್ಲಿನ ದೇವರಾಜ ಅರಸು ಬಡಾವಣೆಯ ಶಿವ ಪಾವರ್ತಿ ಕಲ್ಯಾಣ ಮಂಟಪದಲ್ಲಿ ಹರ ಸೇವಾ ಸಂಸ್ಥೆ ಮತ್ತು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಶ್ರಾವಣಮಾಸದಲ್ಲಿ ಭಕ್ತರ ಮನೆಗಳಿಗೆ ಭೇಟಿ ನೀಡಲಾಗುತ್ತಿದೆ. ಆರ್ಥಿಕ ಹಾಗೂ ಸಾಮಾಜಿಕವಾಗಿ ಸದೃಢರಾಗುವಂತೆ ಎಲ್ಲರನ್ನೂ ಹರಸಲಾಗುವುದು. ಪೀಠದ ಕಾರ್ಯಕ್ಕೆ ಸಮುದಾಯದ ಭಕ್ತರ ಸಹಕಾರ ಬೇಕಿದೆ. ರಾಜ್ಯದಲ್ಲಿ ಪಂಚಮಸಾಲಿ ಲಿಂಗಾಯತ ಸಮುದಾಯ ಪ್ರಭಾವಿಯಾಗಿ ರೂಪುಗೊಳ್ಳುತ್ತಿದೆ. ಸಮುದಾಯಕ್ಕೆ ಉತ್ತಮ ದಿನಗಳು ಬರುತ್ತಿವೆ’ ಎಂದು ಹೇಳಿದರು.
‘ವಿಶ್ವ ಸಾಕಷ್ಟು ವೇಗವಾಗಿ ಬೆಳೆಯುತ್ತಿದೆ. ಇದಕ್ಕೆ ಅನುಗುಣವಾಗಿ ಸಮುದಾಯದ ಭಕ್ತರು ಬೆಳವಣಿಗೆ ಹೊಂದಬೇಕು ಎಂಬುದು ಪೀಠದ ಆಶಯ. ಯುವಕರು ಸಂಘಟಿತರಾಗಬೇಕು. ಶಿಕ್ಷಣದಲ್ಲಿ ನಡೆಯುತ್ತಿರುವ ಹೊಸ ಆವಿಷ್ಕಾರಗಳಿಗೆ ಹೊಂದಿಕೊಳ್ಳಬೇಕು. ಪ್ರತಿಭಾವಂತ ವಿದ್ಯಾರ್ಥಿಗಳು ಮುಂದಿನ ಒಂದು ದಶಕದಲ್ಲಿ ಉತ್ತಮ ಪ್ರಜೆಗಳಾಗಿ ಸಮುದಾಯದ ಆಸ್ತಿಯಾಗಬೇಕು’ ಎಂದು ಕಿವಿಮಾತು ಹೇಳಿದರು.
‘ಆಧ್ಯಾತ್ಮಿಕ ಶ್ರೀಮಂತಿಕೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು. ವಿಭೂತಿ ಧಾರಣೆ, ಲಿಂಗ ಪೂಜೆ, ಕಾಯಕ, ದಾಸೋಹ, ಸಹಜ ಶಿವಯೋಗದಂತಹ ಸಂಸ್ಕಾರವನ್ನು ಪಾಲಕರು ನೀಡಬೇಕು. ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದವರು ಬದುಕಿನಲ್ಲಿ ವಿಫಲರಾದ ನಿದರ್ಶನಗಳಿವೆ. ಅಂಕ ಪಡೆದಾಕ್ಷಣ ದೊಡ್ಡವರಾಗಲು ಸಾಧ್ಯವಿಲ್ಲ. ಬದುಕಿನ ಪರೀಕ್ಷೆ ಎದುರಿಸುವ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು’ ಎಂದು ಸಲಹೆ ನೀಡಿದರು.
‘ಸಮುದಾಯದ ಹಿರಿಯರು ಯುವ ಸಮೂಹಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ಪೀಳಿಗೆಯನ್ನು ಇನ್ನಷ್ಟು ಸದೃಢಗೊಳಿಸುವ ಕಾಳಜಿ ಹಿರಿಯರಲ್ಲಿದೆ. ಪ್ರತಿಭಾ ಪುರಸ್ಕಾರ, ಸಾಮೂಹಿಕ ವಿವಾಹ, ವಧು–ವರರ ಸಮಾವೇಶ ಮಾಡುತ್ತ ಸಮುದಾಯದ ಹಿತಾಸಕ್ತಿ ಕಾಪಾಡುತ್ತಿದ್ದೇವೆ’ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಪರಮೇಶ್ ಪಟ್ಟಣಶೆಟ್ಟಿ ಹೇಳಿದರು.
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ 80ಕ್ಕೂ ಹೆಚ್ಚು ಅಂಕ ಪಡೆದ 250 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಹಲವು ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ವೀರಶೈವ ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸಿ. ಉಮಾಪತಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಭೀಮಾಶಂಕರ ಜೋಷಿ ವಿಶೇಷ ಉಪನ್ಯಾಸ ನೀಡಿದರು.
ವೀರಶೈವ ಲಿಂಗಾಯತ ಪಂಚಮಸಾಲಿ ರಾಜ್ಯ ಸಂಘದ ಅಧ್ಯಕ್ಷ ಸೋಮನಗೌಡ ಪಾಟೀಲ, ಪಂಚಮಸಾಲಿ ಹರಿಹರ ಪೀಠದ ಆಡಳಿತಾಧಿಕಾರಿ ಎಚ್.ಪಿ. ರಾಜಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ವಸಂತ ಹುಲ್ಲತ್ತಿ ಹಾಜರಿದ್ದರು.
‘ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ಬೀಗ ಹಾಕಿರುವ ವಿಚಾರ ತಿಳಿದು ಬೇಸರವಾಗಿದೆ. ಕುಟುಂಬದ ಸದಸ್ಯರೊಬ್ಬರಿಗೆ ತೊಂದರೆಯಾದ ರೀತಿಯಲ್ಲಿ ನೋವಾಗಿದೆ’ ಎಂದು ಹರಿಹರ ಪಂಚಮಸಾಲಿ ಲಿಂಗಾಯತ ಗುರುಪೀಠದ ವಚನಾನಂದ ಸ್ವಾಮೀಜಿ ಹೇಳಿದರು. ‘ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಕೂಡ ಒಳ್ಳೆಯವರೇ. ಕೆಲ ವಿಚಾರಗಳನ್ನು ಮಾಧ್ಯಮದ ಎದುರು ಹೇಳಲು ಸಾಧ್ಯವಿಲ್ಲ. ಮುಂದೆ ಎಲ್ಲವೂ ಸರಿಹೋಗುವ ವಿಶ್ವಾಸವಿದೆ’ ಎಂದು ಸುದ್ದಿಗಾರರೊಂದಿಗೆ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.