ADVERTISEMENT

ತುರುಬಿನ ಮಾತನಾಡಿ ಈಶ್ವರಪ್ಪ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ-ಪರಮೇಶ್ವರನಾಯ್ಕ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 13:05 IST
Last Updated 25 ಅಕ್ಟೋಬರ್ 2019, 13:05 IST
ಪಿ.ಟಿ.ಪರಮೇಶ್ವರ ನಾಯ್ಕ
ಪಿ.ಟಿ.ಪರಮೇಶ್ವರ ನಾಯ್ಕ   

ದಾವಣಗೆರೆ: ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಕಾಂಗ್ರೆಸ್‌ ಅನ್ನು ಮುದುಕಿಯ ತುರುಬಿಗೆ ಹೋಲಿಸಿ ಹೇಳಿಕೆ ನೀಡುವ ಮೂಲಕ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಎಂದು ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಾಂಗ್ರೆಸ್ ಪಕ್ಷದ ಸಿದ್ಧಾಂತ ತತ್ವ ಈಶ್ವರಪ್ಪ ಅವರಿಗೆ ಗೊತ್ತಿಲ್ಲ. ತುರುಬು ಶಾಶ್ವತ ಅಲ್ಲ. ಮಹಿಳೆಯರಿಗೆ ತುರುಬು ಬಿಚ್ಚುವುದು ಗೊತ್ತು. ಕಟ್ಟುವುದು ಗೊತ್ತು. ಅದೇ ರೀತಿ ಈಶ್ವರಪ್ಪ ಅವರನ್ನು ಮನೆಗೆ ಕಳುಹಿಸುವುದು ಮಹಿಳೆಯರಿಗೆ ಗೊತ್ತಿದೆ. ನಮ್ಮ ದೇಶದ ಸಂಸ್ಕೃತಿ ಪರಂಪರೆಯಲ್ಲಿ ಮಹಿಳೆಯರಿಗೆ ಗೌರವದ ಸ್ಥಾನ ನೀಡಿದ್ದೇವೆ. ಆದರೆ ಅವರ ಬಗ್ಗೆ ಹಗುರವಾಗಿ ಮಾತನಾಡಿ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ’ ಎಂದರು.

‘ಉಪಮುಖ್ಯಮಂತ್ರಿ ಆಗಿದ್ದ ಈಶ್ವರಪ್ಪ ಅವರು ಈಗ ಸಚಿವರಾಗಿದ್ದಾರೆ. ಸ್ವಾಭಿಮಾನ, ಆತ್ಮಸಾಕ್ಷಿ ಇದ್ದರೆ ಅವರು ಆ ಹುದ್ದೆಯಲ್ಲಿ ಮುಂದುವರೆಯಬಾರದಿತ್ತು. ಹಿರಿಯ ನಾಯಕರು ಎಂದು ಹೇಳಿಕೊಂಡು ಅವರ ಬೆನ್ನನ್ನು ಅವರೇ ತಟ್ಟಿಕೊಳ್ಳುತ್ತಿದ್ದಾರೆ. ಮಾತನಾಡುವಾಗ ಜವಾಬ್ದಾರಿ ಇರಬೇಕು. ಉಪಮುಖ್ಯಮಂತ್ರಿಯಾಗಿದ್ದವರು ಸಚಿವರಾಗಿದ್ದಾರೆ ಎಂದರೆ ಅವರ ಯೋಗ್ಯತೆ ಏನು ಎಂಬುದು ತಿಳಿಯುತ್ತದೆ. ಪ್ರಚಾರಕೋಸ್ಕರ ಹೇಳಿಕೆ ನೀಡುವುದು ಸರಿಯಲ್ಲ’ ಎಂದರು.

ADVERTISEMENT

‘ಹತ್ತಿದ ಏಣಿ ಒದೆಯುವುದು ಬಿಜೆಪಿಗೆ ಹೊಸದಲ್ಲ. 2008ರಲ್ಲೂ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ಬೆಂಬಲ ಕೊಟ್ಟಿದ್ದ ಗೂಳಿಹಟ್ಟಿ ಶೇಖರ್, ವೆಂಕಟರಮಣಪ್ಪ, ತಂಗಡಗಿ ಅವರಿಗೆ ದ್ರೋಹ ಮಾಡಿದ್ದಾರೆ. ಕಾಂಗ್ರೆಸ್‌, ಜೆಡಿಎಸ್ ಶಾಸಕರನ್ನು ಖರೀದಿಸಿ ಆಪರೇಷನ್ ಕಮಲದ ಮೂಲಕ ಅನೈತಿಕ ಸರ್ಕಾರ ಮಾಡಿಕೊಂಡಿದ್ದಾರೆ. ಬಿಜೆಪಿ ನಂಬಿ ಮೋಸ ಹೋಗಬೇಡಿ ಎಂದು ಅನರ್ಹ ಶಾಸಕರಿಗೆ ನಾವು ಮೊದಲೇ ಹೇಳಿದ್ದೆವು. ಈಗ ಅವರಿಗೆ ಜ್ಞಾನೋದಯವಾಗಿದೆ’ ಎಂದು ಹೇಳಿದರು.

‘ಸಿದ್ದರಾಮಯ್ಯ ಸದನದಲ್ಲಿ ಸ್ಪೀಕರ್‌ ಬಗ್ಗೆ ಏಕವಚನದಲ್ಲಿ ಮಾತನಾಡಿಲ್ಲ. ಸದನದಲ್ಲಿ ನೆರೆ ಸಂತ್ರಸ್ತರ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ಸಿದ್ದರಾಮಯ್ಯ ಅವರಿಗೆ ಅವಕಾಶ ನೀಡದೇ ಇರುವುದು ಸರಿಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.