ADVERTISEMENT

ಪಿ.ಜಿ ನಿವಾಸಿಗಳ ಗೋಳು ಕೇಳೋರಿಲ್ಲ..

ಕೇಂದ್ರ ತೊರೆಯಲು ಮಾಲೀಕರ ಒತ್ತಡ, ಊಟವಿಲ್ಲದೆ ನಿವಾಸಿಗಳ ಪರದಾಟ

ಚಂದ್ರಶೇಖರ ಆರ್‌.
Published 31 ಮಾರ್ಚ್ 2020, 19:30 IST
Last Updated 31 ಮಾರ್ಚ್ 2020, 19:30 IST
   

ದಾವಣಗೆರೆ: ಕೊರೊನಾ ಭೀತಿ ಹಿನ್ನೆಲೆಯಲ್ಲಿನಗರದ ಹಲವು ಪಿ.ಜಿ. ನಿವಾಸಿಗಳು ತೊಂದರೆ ಎದುರಿಸುವಂತಾಗಿದೆ. ಕೆಲ ಮಾಲೀಕರು ಒತ್ತಾಯಪೂರ್ವಕವಾಗಿ ನಿವಾಸಿಗಳನ್ನು ಮನೆಗಳಿಗೆ ಹೋಗುವಂತೆ ಒತ್ತಾಯಿಸುತ್ತಿದ್ದರೆ, ಇನ್ನು ಕೆಲವೆಡೆ ಊಟ ಸಿಗದೆ ನಿವಾಸಿಗಳು ಪರದಾಡುವಂತಾಗಿದೆ.

ಇಲ್ಲಿನ ವಿದ್ಯಾನಗರ, ಎಸ್‌.ಎಸ್. ಲೇಔಟ್‌, ಸಿದ್ಧವೀರಪ್ಪ ಬಡಾವಣೆ ಸೇರಿ ನಗರದ ಹಲವೆಡೆ ಪಿ.ಜಿ. ಕೇಂದ್ರಗಳಿವೆ. ಹಲವು ಪಿ.ಜಿಗಳನ್ನು ಈಗಾಗಲೇ ಮುಚ್ಚಲಾಗಿದೆ. ಕೆಲ ಪಿ.ಜಿಗಳಲ್ಲಿರುವ ವಿದ್ಯಾರ್ಥಿಗಳು, ಉದ್ಯೋಗಿಗಳು ಈಗಾಗಲೇ ತಮ್ಮೂರಿಗೆ ಹೋಗಿದ್ದಾರೆ. ಇರುವ ಕೆಲವರಿಗೆ ಪಿ.ಜಿ. ಕೇಂದ್ರ ತೊರೆಯುವಂತೆ ಮಾಲೀಕರು ಒತ್ತಡ ಹೇರುತ್ತಿದ್ದಾರೆ. ಇನ್ನು ಕೆಲವೆಡೆ ಕೇಂದ್ರಗಳಲ್ಲಿ ಊಟವನ್ನೂ ನೀಡುತ್ತಿಲ್ಲ. ಇದರಿಂದ ನಿವಾಸಿಗಳ ಸ್ಥಿತಿ ಹೇಳತೀರದಾಗಿದೆ.

‘ಲಾಕ್‌ಡೌನ್‌’ ಹಿನ್ನೆಲೆಯಲ್ಲಿ ಜನರು ಅನಗತ್ಯವಾಗಿ ಹೊರಗೆ ಬರುವಂತಿಲ್ಲ. ಇದರಿಂದ ಪಿ.ಜಿ. ನಿವಾಸಿಗಳು ಊಟವಿಲ್ಲದೆ ಸಮಸ್ಯೆ ಎದುರಿಸುವಂತಾಗಿದೆ. ಕೆಲ ಕೇಂದ್ರಗಳಲ್ಲಿರುವ ಉದ್ಯೋಗಿಗಳು, ವಿದ್ಯಾರ್ಥಿನಿಯರು ಊಟ ತಂದು ಕೊಡಿ ಎಂದು ಹೊರಗೆ ಕಾಣುವ ಎಲ್ಲರನ್ನೂ ಕೇಳುವ ಸ್ಥಿತಿ ಇದೆ.

ADVERTISEMENT

‘ಪಿ.ಜಿ.ಯಲ್ಲಿ ಇರಬೇಡಿ. ನಿಮ್ಮೂರಿಗೆ ಹೋಗಿ ಎಂದು ಮಾಲೀಕರು ಒತ್ತಾಯಿಸುತ್ತಿದ್ದಾರೆ. ಅವರ ಕಾಟ ತಾಳಲಾರದೆ ಸ್ನೇಹಿತೆಯ ಮನೆಯಲ್ಲಿದ್ದೇನೆ. ಎಷ್ಟು ದಿನ ಎಂದು ಸ್ನೇಹಿತರ ಮನೆಯಲ್ಲಿ ಇರುವುದು. ಊರಿಗೆ ಹೋಗೋಣವೆಂದರೆ ಸಾರಿಗೆ ವ್ಯವಸ್ಥೆ ಇಲ್ಲ’ ಎಂದು ಉದ್ಯೋಗಿ ಗಾಯತ್ರಿ ಅಳಲು ತೋಡಿಕೊಂಡರು.

‘ನಮ್ಮೂರು ಬೆಳಗಾವಿ ಅಲ್ಲಿಗೆ ಹೋಗುವುದು ಹೇಗೆ. ಮನೆಯಲ್ಲಿ ವೃದ್ಧ ತಾಯಿ ಹಾಗೂ ಪುತ್ರಿ ಮಾತ್ರ ಇದ್ದಾರೆ. ಇಲ್ಲಿ ಇರಲೂ ಆಗುತ್ತಿಲ್ಲ. ಅಲ್ಲಿಗೂ ಹೋಗಲೂ ಆಗದ ತೊಳಲಾಟದಲ್ಲಿದ್ದೇನೆ’ ಎಂದು ಅವರು ‘ಪ್ರಜಾವಾಣಿ’ ಜೊತೆ ನೋವು ತೋಡಿಕೊಂಡರು.

‘ಪಿ.ಜಿ.ಯಲ್ಲಿದ್ದ ಬಹುತೇಕ ಸ್ನೇಹಿತರು, ವಿದ್ಯಾರ್ಥಿಗಳು ಊರಿಗೆ ಬಂದಿದ್ದೇವೆ. ಲಾಕ್‌ಡೌನ್‌ ಹಾಗೂ ಪರೀಕ್ಷೆ ಇಲ್ಲದ ಕಾರಣ ಮುಂಜಾಗ್ರತೆಯಿಂದ ಬಂದಿದ್ದೇವೆ. ಕೆಲ ಪಿ.ಜಿ. ಕೇಂದ್ರಗಳಲ್ಲಿ ಒತ್ತಡ ಇದೆ’ ಎಂದು ವಿದ್ಯಾರ್ಥಿನಿ ಅಕ್ಷತಾ ತಿಳಿಸಿದರು.

‘ಕೊರೊನಾ ಹಿನ್ನೆಲೆಯಲ್ಲಿ ವಾರದ ಹಿಂದೆಯೇ ನಮ್ಮ ಕೇಂದ್ರವನ್ನು ಬಂದ್‌ ಮಾಡಿದ್ದೇವೆ. ಇರುವ ವಿದ್ಯಾರ್ಥಿಗಳೆಲ್ಲ ಊರಿಗೆ ಹೋಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕೇಂದ್ರವನ್ನು ಮುಚ್ಚಿದ್ದೇವೆ’ ಎಂದು ಪಿ.ಜಿ. ಕೇಂದ್ರದ ಮಾಲೀಕ ವಿನಯ್‌ ಹೇಳಿದರು.

ಇಲ್ಲಿನ ಎಂಜಿನಿಯರಿಂಗ್‌ ಕಾಲೇಜು ಬಳಿಯ ಪಿ.ಜಿ. ಕೇಂದ್ರವೊಂದರಲ್ಲಿ ನಿವಾಸಿಗಳು ಊಟ ಇಲ್ಲದೆ ತೊಂದರೆ ಅನುಭವಿಸುತ್ತಿದ್ದು, ದಾರಿಹೋಕರಿಗೆ ಊಟ ತಂದು ಕೊಡುವಂತೆ ಕೇಳುತ್ತಿದ್ದ ದೃಶ್ಯ ಮನ ಕಲಕುವಂತಿತ್ತು ಎಂದು ಸ್ಥಳೀಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.