ADVERTISEMENT

ದಾವಣಗೆರೆ: ಪ್ಲಾಸ್ಟಿಕ್ ಬಳಕೆ; ದಂಡ ಸಂಗ್ರಹದಲ್ಲೂ ದಾಖಲೆ

ಏಕಬಳಕೆ ಪ್ಲಾಸ್ಟಿಕ್‌ ಮಾರಾಟಗಾರರು, ಬಳಕೆದಾರರ ವಿರುದ್ಧ 851 ಪ್ರಕರಣ ದಾಖಲು; ₹9,84,420 ದಂಡ ಸಂಗ್ರಹ

ರಾಮಮೂರ್ತಿ ಪಿ.
Published 24 ನವೆಂಬರ್ 2025, 4:39 IST
Last Updated 24 ನವೆಂಬರ್ 2025, 4:39 IST
ದಾವಣಗೆರೆಯ ಕುಂದುವಾಡ ರಸ್ತೆಯ ಜೈನ್‌ ಲೇಔಟ್‌ನಲ್ಲಿನ ಖಾಲಿ ಜಾಗದಲ್ಲಿ ಕಂಡು ಬಂದ ಪ್ಲಾಸ್ಟಿಕ್ ತ್ಯಾಜ್ಯ
ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ
ದಾವಣಗೆರೆಯ ಕುಂದುವಾಡ ರಸ್ತೆಯ ಜೈನ್‌ ಲೇಔಟ್‌ನಲ್ಲಿನ ಖಾಲಿ ಜಾಗದಲ್ಲಿ ಕಂಡು ಬಂದ ಪ್ಲಾಸ್ಟಿಕ್ ತ್ಯಾಜ್ಯ ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ   

ದಾವಣಗೆರೆ: ಏಕಬಳಕೆ ಪ್ಲಾಸ್ಟಿಕ್‌ ಮಾರಾಟಗಾರರು ಹಾಗೂ ಬಳಕೆದಾರರ ವಿರುದ್ಧ ದಂಡಾಸ್ತ್ರ ಪ್ರಯೋಗಿಸುತ್ತಿರುವ ಮಹಾನಗರ ಪಾಲಿಕೆಯ ಅಧಿಕಾರಿಗಳು ಈ ವರ್ಷ ದಾಖಲೆಯ ಪ್ರಮಾಣದಲ್ಲಿ ದಂಡ ವಿಧಿಸಿದ್ದಾರೆ. 2025ರ ಜನವರಿಯಿಂದ ಅಕ್ಟೋಬರ್‌ 25ರವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ 851 ಪ್ರಕರಣಗಳನ್ನು ದಾಖಲಿಸಿ, ಬರೋಬ್ಬರಿ ₹9,84,420 ದಂಡ ವಿಧಿಸಿದ್ದಾರೆ. 

2024ರ ಜನವರಿಯಿಂದ ಡಿಸೆಂಬರ್‌ವರೆಗೆ ಅಕ್ರಮವಾಗಿ ಪ್ಲಾಸ್ಟಿಕ್‌ ಮಾರಾಟ, ಸಂಗ್ರಹ, ಬಳಕೆ ಮಾಡಿರುವವರ ವಿರುದ್ಧ ಒಟ್ಟು 1,078 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದ ಅಧಿಕಾರಿಗಳು ಒಟ್ಟು ₹5,07,920 ದಂಡ ಸಂಗ್ರಹಿಸಿದ್ದರು. 

ಏಕಬಳಕೆಯ ಪ್ಲಾಸ್ಟಿಕ್‌ ಸಾಮಗ್ರಿಗಳ ಉತ್ಪಾದನೆ, ಮಾರಾಟ ಹಾಗೂ ಬಳಕೆಯನ್ನು ಪಾಲಿಕೆ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೀಗಿದ್ದರೂ, ಪ್ಲಾಸ್ಟಿಕ್ ವಸ್ತುಗಳ ಮಾರಾಟ ಹಾಗೂ ಬಳಕೆ ಮುಂದುವರಿದಿದೆ. 

ADVERTISEMENT

ಪಾಲಿಕೆಯ ಆರೋಗ್ಯ ನಿರೀಕ್ಷಕರು ಪ್ರತೀ ವರ್ಷ ಟನ್‌ಗಟ್ಟಲೇ ಏಕಬಳಕೆಯ ಪ್ಲಾಸ್ಟಿಕ್ ಸಾಮಗ್ರಿಗಳನ್ನು ಜಪ್ತಿ ಮಾಡಿ, ಸರಾಸರಿ ₹4 ಲಕ್ಷದಿಂದ ₹6 ಲಕ್ಷದವರೆಗೆ ದಂಡ ವಿಧಿಸುತ್ತಿದ್ದರು. ಆದರೆ, ಇದೇ ಮೊದಲ ಬಾರಿ ದಂಡದ ಮೊತ್ತ ₹10 ಲಕ್ಷದ ಗಡಿ ದಾಟಿದಂತಾಗುತ್ತಿದೆ. 

2024ರಲ್ಲಿ ದಾಖಲಿಸಿದ್ದ 1,078 ಪ್ರಕರಣಗಳಿಗೆ ಹೋಲಿಸಿದರೆ ಈ ವರ್ಷ ಪ್ರಕರಣಗಳ (851) ಸಂಖ್ಯೆ ಕಡಿಮೆ ಇದೆ. ಆದರೆ, ಗೋದಾಮುಗಳ ಮೇಲೆ ನಡೆಸಿದ ದಾಳಿ ವೇಳೆ ಪತ್ತೆಯಾದ ಪ್ಲಾಸ್ಟಿಕ್‌ ಸಂಗ್ರಹದ ಪ್ರಮಾಣ ದೊಡ್ಡ ಮಟ್ಟದಲ್ಲಿದೆ. ಈ ಕಾರಣಕ್ಕೆ  ದಂಡದ ಮೊತ್ತವೂ ಹೆಚ್ಚಾಗಿದೆ ಎನ್ನುತ್ತಾರೆ ಅಧಿಕಾರಿಗಳು. 

2025ರ ಆಗಸ್ಟ್‌ನಲ್ಲಿ 177 ಪ್ರಕರಣಗಳನ್ನು ದಾಖಲಿಸಿಕೊಂಡು ₹3,64,500 ದಂಡ ಸಂಗ್ರಹಿಸಲಾಗಿದೆ. ಇದು ತಿಂಗಳೊಂದರಲ್ಲಿ ಸಂಗ್ರಹಿಸಿದ ಗರಿಷ್ಠ ದಂಡದ ಮೊತ್ತವಾಗಿದೆ. ಉಳಿದಂತೆ ಸೆಪ್ಟೆಂಬರ್‌ನಲ್ಲಿ 152 ಪ್ರಕರಣಗಳಿಂದ ₹1,34,020, ಮಾರ್ಚ್‌ನಲ್ಲಿ 25 ಪ್ರಕರಣಗಳಿಂದ ₹1,12,600, ಏಪ್ರಿಲ್‌ನಲ್ಲಿ 84 ಪ್ರಕರಣಗಳಿಂದ ₹88,700 ಹಾಗೂ ಅಕ್ಟೋಬರ್‌ನಲ್ಲಿ 107 ಪ್ರಕರಣಗಳಿಂದ 83,500 ದಂಡ ಸಂಗ್ರಹಿಸಲಾಗಿದೆ. ಇನ್ನುಳಿದ ತಿಂಗಳುಗಳಲ್ಲಿ ₹80,000ಕ್ಕಿಂತ ಕಡಿಮೆ ದಂಡ ಸಂಗ್ರಹಿಸಲಾಗಿದೆ. ಫೆಬ್ರುವರಿಯಲ್ಲಿ 53 ಪ್ರಕರಣ ದಾಖಲಿಸಿ ಸಂಗ್ರಹಿಸಿದ ₹25,300 ದಂಡವೇ ಅತೀ ಕಡಿಮೆ ಎನಿಸಿದೆ.  

‘ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರು ಏಕಬಳಕೆಯ ಪ್ಲಾಸ್ಟಿಕ್‌ ಬಳಕೆ ನಿಯಂತ್ರಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಪ್ಲಾಸ್ಟಿಕ್‌ ಕವರ್‌ಗಳನ್ನು ತಯಾರಿಸುವ ಕಾರ್ಖಾನೆಗಳು, ಘಟಕಗಳು ಇಲ್ಲ. ಹೀಗಾಗಿ ಬೇರೆಡೆಯಿಂದ ತಂದು ಇಲ್ಲಿನ ಗೋದಾಮುಗಳಲ್ಲಿ ಸಂಗ್ರಹಿಸಿಟ್ಟು ಮಾರಾಟ ಮಾಡಲಾಗುತ್ತಿದೆ. ಅಂತಹ ಗೋದಾಮುಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ಜಪ್ತಿ ಮಾಡಿ, ದಂಡ ವಿಧಿಸಲಾಗುತ್ತಿದೆ’ ಎಂದು ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಆರೋಗ್ಯ) ಜಗದೀಶ್ ಹೇಳಿದರು. 

ವಿವಿಧ ಇಲಾಖೆಗಳ ಸಹಕಾರವೂ ಅಗತ್ಯ: 

‘ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಆರ್‌ಟಿಒ), ವಾಣಿಜ್ಯ ತೆರಿಗೆ ಅಧಿಕಾರಿಗಳು, ಪೊಲೀಸರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಹಕಾರ ಅಗತ್ಯ. ಬೇರೆಡೆಯಿಂದ ಬೃಹತ್ ವಾಹನಗಳಲ್ಲಿ ಪ್ಲಾಸ್ಟಿಕ್‌ ತರುವುದನ್ನು ನಗರದ ಹೊರಗಡೆಯೇ ಅಧಿಕಾರಿಗಳು ತಡೆಯಬಹುದು. ಆದರೆ, ಅದು ಸಮರ್ಪಕವಾಗಿ ನಡೆಯುತ್ತಿಲ್ಲ. ನಗರದೊಳಗೆ ಪ್ರವೇಶಿಸಿದ ಪ್ಲಾಸ್ಟಿಕ್‌ ಅನ್ನು ಒಂದೇ ಕಡೆ ಇಡದೇ, ಹಲವು ಕಡೆಗಳಲ್ಲಿ ಸಂಗ್ರಹಿಸಿಡುತ್ತಾರೆ. ಇದರಿಂದ ಪತ್ತೆ ಕಾರ್ಯವೂ ಸವಾಲಿನಿಂದ ಕೂಡಿರುತ್ತದೆ. ಹೀಗಾಗಿ ಪೂರ್ಣ ಪ್ರಮಾಣದಲ್ಲಿ ಪ್ಲಾಸ್ಟಿಕ್‌ ಬಳಕೆ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ’ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು. 

ದಂಡ: 

ನ್ಯಾಮತಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಗಡಿ ಮುಂಗಟ್ಟುಗಳಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಕವರ್‌ಗಳನ್ನು ಬಳಸದಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಿ.ಗಣೇಶ್ ರಾವ್ ಮತ್ತು ಸಿಬ್ಬಂದಿ ಎಚ್ಚರಿಕೆ ನೀಡುತ್ತಿದ್ದಾರೆ. 

ಕೆಲವು ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದ ಪ್ಲಾಸ್ಟಿಕ್ ಕವರ್‌ಗಳನ್ನು ವಶಪಡಿಸಿಕೊಂಡು, ಅಂದಾಜು ₹30,000 ದಂಡ ವಸೂಲಿ ಮಾಡಲಾಗಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ಕವರ್‌ ಬಳಕೆ ಕಡಿಮೆಯಾಗುತ್ತಿದ್ದು, ಅಂಗಡಿ ವರ್ತಕರು ಸಹಕರಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. 

ಪೂರಕ ಮಾಹಿತಿ: ಡಿ.ಎಂ. ಹಾಲಾರಾಧ್ಯ, ಡಿ.ಶ್ರೀನಿವಾಸ್. 

ದಾವಣಗೆರೆಯಲ್ಲಿ ನಾಗರಿಕರು ಪ್ಲಾಸ್ಟಿಕ್‌ ಕವರ್‌ಗಳಲ್ಲಿ ಅಗತ್ಯ ವಸ್ತು ತೆಗೆದುಕೊಂಡು ಹೋಗುತ್ತಿರುವುದು 
ದಾವಣಗೆರೆಯಲ್ಲಿ ಮಹಿಳೆಯೊಬ್ಬರು ಪ್ಲಾಸ್ಟಿಕ್ ಕವರ್‌ ಹಿಡಿದು ಸಾಗಿದರು
ನ್ಯಾಮತಿಯ ಅಂಗಡಿಯೊಂದರಲ್ಲಿ ಅಧಿಕಾರಿಗಳು ಏಕಬಳಕೆಯ ಪ್ಲಾಸ್ಟಿಕ್ ಕವರ್‌ಗಳನ್ನು ಜಪ್ತಿ ಮಾಡಿದರು
ಜಗಳೂರಿನಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಮಾರಾಟ ಮಾಡುತ್ತಿರುವ ಕಿರಾಣಿ ಅಂಗಡಿಗಳ ಮೇಲೆ ಈಚೆಗೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದರು
ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಹಾಗೂ ಅದರ ಸುತ್ತಮುತ್ತಲಿನ ಅಂಗಡಿಗಳಲ್ಲಿ ಏಕಬಳಕೆಯ ಪ್ಲಾಸ್ಟಿಕ್‌ ಲೋಟಗಳನ್ನು ಮಾರುವವರಿಗೆ ₹20000 ದಿಂದ ₹25000 ದಂಡ ವಿಧಿಸಲಾಗಿದೆ
ಬಸವಣ್ಣ ಪರಿಸರ ಎಂಜಿನಿಯರ್ ಮಹಾನಗರ ಪಾಲಿಕೆ
ಅಂಗಡಿಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಸಬಾರದು ಎಂಬ ನಿಯಮವಿದ್ದರೂ ಕೆಲವು ವರ್ತಕರು ಬಳಸುತ್ತಿದ್ದಾರೆ. ಹೆಚ್ಚಿನ ವರ್ತಕರು ಕಾಗದ ಕವರ್ ಬಳಸುತ್ತಿದ್ದಾರೆ
ಎನ್.ಎಂ.ವಸಂತಕುಮಾರ್ ಕಿರಾಣಿ ವರ್ತಕ ನ್ಯಾಮತಿ

ಜಗಳೂರು: ಪ್ಲಾಸ್ಟಿಕ್ ಬಳಕೆ ಅವ್ಯಾಹತ 

ಜಗಳೂರು: ಪಟ್ಟಣದ ಬಹುತೇಕ ಅಂಗಡಿಗಳಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಸಾಮಗ್ರಿಗಳನ್ನು ಅವ್ಯಾಹತವಾಗಿ ಬಳಕೆ ಮಾಡಲಾಗುತ್ತಿದೆ.  ಕಿರಾಣಿ ಬೀಡಾ ಅಂಗಡಿಗಳು ಹೋಟೆಲ್ ಹಾಗೂ ಮಾಂಸಹಾರ ಮಾರಾಟದ ಅಂಗಡಿಗಳಲ್ಲಿ ಯಾವುದೇ ಅಡೆತಡೆ ಇಲ್ಲದೇ ಪ್ಲಾಸ್ಟಿಕ್ ಕವರ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳು ಆಗಾಗ್ಗೆ ಕೆಲವು ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ಹಾಕುತ್ತಿದ್ದಾರೆ. ಆದರೂ ಸಂಪೂರ್ಣ ಮಾರಾಟ ತಡೆಯಲು ಸಾಧ್ಯವಾಗುತ್ತಿಲ್ಲ.  ‘ಪಟ್ಟಣದ ರಾಮಾಲಯ ರಸ್ತೆ ಹಾಗೂ ನೆಹರೂ ರಸ್ತೆ ಸೇರಿದಂತೆ ಕೆಲವೆಡೆ ಹೋಲ್‌ಸೇಲ್ ಪ್ಲಾಸ್ಟಿಕ್ ಅಂಗಡಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ್ ಸಾಮಗ್ರಿಗಳನ್ನು ಮಾರಾಟ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ಬಳಕೆಯ ನಂತರ ತ್ಯಾಜ್ಯ ಚರಂಡಿಗಳ ಮೂಲಕ ಜಗಳೂರಿನ ಕೆರೆ ಸೇರಿ ನೀರು ಕಲುಷಿತವಾಗುತ್ತಿದೆ. ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸದ ಕಾರಣ ಪ್ಲಾಸ್ಟಿಕ್ ಹಾವಳಿ ಹೆಚ್ಚಾಗಿದೆ’ ಎಂದು ವಕೀಲ ದೊಡ್ಡಬೊರಯ್ಯ ಹೇಳುತ್ತಾರೆ.  ‘ಪ್ಲಾಸ್ಟಿಕ್ ಮಾರಾಟ ಮಾಡುವ ಅಂಗಡಿಗಳ ಮೇಲೆ ಆಗಾಗ ದಾಳಿ ನಡೆಸಿ ಸಾಮಗ್ರಿಗಳನ್ನು ವಶಪಡಿಸಿಕೊಂಡು ದಂಡ ಹಾಕಲಾಗಿದೆ. 2024ರಲ್ಲಿ ಅಂದಾಜು ₹40000 ದಂಡ ಹಾಕಲಾಗಿತ್ತು. ಈ ವರ್ಷವೂ ಹೆಚ್ಚಿನ ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ. ಪ್ಲಾಸ್ಟಿಕ್ ಬಳಕೆ ನಿಯಂತ್ರಣಕ್ಕೆ ತರಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ತಿಳಿಸಿದರು. 

ಬಯೋಡಿಗ್ರೇಡೆಬಲ್‌ ಪ್ಲಾಸ್ಟಿಕ್‌  ಔಷಧಿ ಮಳಿಗೆ

ಹಣ್ಣಿನ ಅಂಗಡಿಗಳು ಹಾಗೂ ಕೆಲವು ಹೋಟೆಲ್‌ಗಳಲ್ಲಿ ಈಚೆಗೆ ವ್ಯಾಪಾರಿಗಳು ಬಯೋಡಿಗ್ರೇಡೆಬಲ್‌ ಪ್ಲಾಸ್ಟಿಕ್‌ ಬಳಸುತ್ತಿದ್ದಾರೆ. ಪೇಪರ್ ಹಾಗೂ ಎಲೆಗಳು ಮಣ್ಣಿನಲ್ಲಿ ಕೊಳೆಯುವ ಹಾಗೂ ನೀರಿನಲ್ಲಿ ಕರಗುವ ಮೂಲಕ ಪರಿಸರದಲ್ಲಿ ಲೀನವಾಗುವ ರೀತಿಯಲ್ಲೇ ಬಯೋಡಿಗ್ರೇಡೆಬಲ್‌ ಪ್ಲಾಸ್ಟಿಕ್‌ ಕೂಡ ಜೈವಿಕ ವಿಘಟನೆಗೆ ಒಳಗಾಗುತ್ತದೆ.  ಬಯೋಡಿಗ್ರೇಡೆಬಲ್‌ ಪ್ಲಾಸ್ಟಿಕ್‌ ಅನ್ನು ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಳಸಲಾಗುತ್ತಿದೆ. ಆದರೆ ಇದು ಕೂಡ ಪೂರ್ಣ ಪ್ರಮಾಣದಲ್ಲಿ ಪರಿಸರ ಸ್ನೇಹಿ ಅಲ್ಲ. ಪರಿಸರದ ಮೇಲೆ ಪ್ಲಾಸ್ಟಿಕ್‌ ಮಾಡುವ ಹಾನಿಗೆ ಹೋಲಿಸಿದರೆ ಇದರ ಪ್ರಮಾಣ ಬಹಳಷ್ಟು ಕಡಿಮೆ ಇರುತ್ತದೆ. ಜನರು ಬಟ್ಟೆ ಬ್ಯಾಗ್‌ಗಳನ್ನು ಬಳಸಬೇಕು. ಔಷಧಿ ಮಳಿಗೆಗೆಳಲ್ಲಿ ಪೇಪರ್‌ ಕವರ್‌ಗಳನ್ನು ಬಳಸುವುದು ಉತ್ತಮ ಎನ್ನುತ್ತಾರೆ ಪಾಲಿಕೆಯ ಎಇಇ (ಆರೋಗ್ಯ) ಜಗದೀಶ್. 

ಪೇಪರ್‌ ಕಪ್‌ ಬಳಸದಂತೆ ಸೂಚನೆ 

ಟೀ ಹಾಗೂ ಜ್ಯೂಸ್‌ ಅಂಗಡಿಗಳಲ್ಲಿ ಪೇಪರ್‌ ಕಪ್‌ಗಳನ್ನು ಬಳಸದಂತೆ ವ್ಯಾಪಾರಿಗಳಿಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೂಚಿಸುತ್ತಿದ್ದಾರೆ. ಗ್ರಾಹಕರು ಟೀ ಹಾಗೂ ಜ್ಯೂಸ್ ಕುಡಿದ ನಂತರ ಪೇಪರ್‌ ಕಪ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ. ಸ್ವಚ್ಛತೆಯನ್ನು ಕಾಪಾಡುವುದು ಪೌರಕಾರ್ಮಿಕರಿಗೆ ಸವಾಲಾಗುತ್ತಿದೆ. ಈ ಕಾರಣಕ್ಕೆ ಟೀ ಕಾಫಿ ಹಾಗೂ ಜ್ಯೂಸ್ ನೀಡಲು ಗ್ಲಾಸ್‌ಗಳನ್ನೇ ಬಳಸಿ ಎಂದು ಅಧಿಕಾರಿಗಳು ಪದೇ ಪದೇ ವ್ಯಾಪಾರಿಗಳಿಗೆ ಸೂಚಿಸುತ್ತಿದ್ದಾರೆ.  ‘ಕೆಲ ಗ್ರಾಹಕರು ಗ್ಲಾಸ್‌ನಲ್ಲಿ ಟೀ ಕಾಫಿ ನೀಡಿದರೆ ನಿರಾಕರಿಸುತ್ತಾರೆ. ಪೇಪರ್‌ ಕಪ್‌ನಲ್ಲೇ ಟೀ ಕಾಫಿ ಕೊಡಿ ಎನ್ನುತ್ತಾರೆ. ಇದರಿಂದಾಗಿ ಪೂರ್ಣ ಪ್ರಮಾಣದಲ್ಲಿ ಗ್ಲಾಸ್‌ಗಳನ್ನೇ ಬಳಸಲು ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ಎವಿಕೆ ಕಾಲೇಜು ರಸ್ತೆಯಲ್ಲಿರುವ ಟೀ ಅಂಗಡಿಯೊಂದರ ಮಾಲೀಕ ಪರಶುರಾಮ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.