
ದಾವಣಗೆರೆ: ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬ ಗಾದೆಯಂತೆ ವಿದ್ಯಾರ್ಥಿಗಳಿಗೆ ಆರಂಭದಲ್ಲೇ ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮುಂದಾಗಿದೆ.
ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸುವ ಜೊತೆಗೆ ಬಳಸಿದ ಪ್ಲಾಸ್ಟಿಕ್ ಅನ್ನು ಸೂಕ್ತವಾದ ರೀತಿಯಲ್ಲಿ ವಿಲೇವಾರಿ ಮಾಡುವ ಬಗ್ಗೆ ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳಲ್ಲಿ ‘ಸಾಗರಮಿತ್ರ’ ಪ್ಲಾಸ್ಟಿಕ್ ಮುಕ್ತ ಅಭಿಯಾನವನ್ನು ಕೈಗೊಳ್ಳಲಾಗಿದೆ.
‘ಪ್ಲಾಸ್ಟಿಕ್ ಮುಕ್ತ ಸಮಾಜ’ ನಿರ್ಮಾಣದ ಆಶಯದೊಂದಿಗೆ ಆರಂಭವಾಗಿರುವ ಈ ಅಭಿಯಾನದಡಿ ಜಿಲ್ಲೆಯ ಪ್ರೌಢಶಾಲೆಗಳಿಂದ ಇದುವರೆಗೂ 3 ಟನ್‌ಗೂ ಅಧಿಕ ಪ್ಲಾಸ್ಟಿಕ್ ಅನ್ನು ಸಂಗ್ರಹಿಸಲಾಗಿದೆ. 8, 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿನ ಪ್ಲಾಸ್ಟಿಕ್ ಅನ್ನು ಶಾಲೆಗೆ ತಂದು ನೀಡುತ್ತಿದ್ದಾರೆ.
ಆಗಸ್ಟ್ 11ರಿಂದ ಜಿಲ್ಲೆಯ ಎಲ್ಲಾ (512) ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರೌಢಶಾಲೆಗಳಲ್ಲಿ ಈ ಅಭಿಯಾನವನ್ನು ಆರಂಭಿಸಲಾಗಿದೆ. ಒಟ್ಟು 75,000 ವಿದ್ಯಾರ್ಥಿಗಳು ಈ ಅಭಿಯಾನದ ಭಾಗವಾಗಿದ್ದಾರೆ. ಕೆಲ ಶಾಲೆಗಳಲ್ಲಿ ವಾರದಲ್ಲಿ ಎರಡು ದಿನ, ಇನ್ನೂ ಕೆಲವು ಶಾಲೆಗಳಲ್ಲಿ ವಾರದಲ್ಲಿ 1 ದಿನ ವಿದ್ಯಾರ್ಥಿಗಳು ಮನೆಯಲ್ಲಿನ ಸಾಬೂನಿನ ಕವರ್, ಚಾಕ್ಲೇಟ್ ಕವರ್, ತರಕಾರಿ ತರುವ ಕವರ್, ಬಾಟಲಿ ಸೇರಿದಂತೆ ಇನ್ನಿತರ ಪ್ಲಾಸ್ಟಿಕ್ ಅನ್ನು ಶಾಲೆಗೆ ತಂದು ನೀಡುವುದು ಈ ಅಭಿಯಾನದ ಭಾಗವಾಗಿದೆ.
ಶಾಲೆಗಳಲ್ಲಿ ಸಂಗ್ರಹವಾದ ಪ್ಲಾಸ್ಟಿಕ್ ಅನ್ನು ಮಹಾನಗರ ಪಾಲಿಕೆಯ ಸ್ವಚ್ಛತಾ ಸಿಬ್ಬಂದಿ, ಗ್ರಾಮೀಣ ಭಾಗಗಳಲ್ಲಿ ಪಂಚಾಯಿತಿ ಸ್ವಚ್ಛತಾ ಕಾರ್ಮಿಕರು ಕಸದ ಗಾಡಿಗಳ ಮೂಲಕ ಸಂಗ್ರಹಿಸಿ, ವಿಲೇವಾರಿ ಮಾಡುತ್ತಾರೆ.
ಪ್ರೇರಣೆ: ಮಹಾರಾಷ್ಟ್ರದ ಪುಣೆಯಲ್ಲಿನ ‘ಸಾಗರಮಿತ್ರ’ ಸಂಸ್ಥೆಯು ಪ್ಲಾಸ್ಟಿಕ್ ನಿರ್ಮೂಲನೆಯಲ್ಲಿ ಬಹುದೊಡ್ಡ ಯಶಸ್ಸು ಕಂಡಿದೆ. 2011ರಿಂದಲೇ ಪ್ಲಾಸ್ಟಿಕ್ ಮುಕ್ತ ಅಭಿಯಾನ ಆರಂಭಿಸಿರುವ ಸಂಸ್ಥೆಯು ಇದುವರೆಗೂ 1,000 ಟನ್‌ಗೂ ಅಧಿಕ ಪ್ಲಾಸ್ಟಿಕ್ ಅನ್ನು 300ಕ್ಕೂ ಅಧಿಕ ಶಾಲೆಗಳ ವಿದ್ಯಾರ್ಥಿಗಳಿಂದ ಸಂಗ್ರಹಿಸಿದೆ. ಇದರಿಂದ ಪ್ರೇರಿತರಾಗಿರುವ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಜಿಲ್ಲೆಯಲ್ಲೂ ಈ ಅಭಿಯಾನವನ್ನು ಆರಂಭಿಸಿದ್ದಾರೆ.
ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ, ಪಾಲಿಕೆ ಆಯುಕ್ತರು, ಡಿಡಿಪಿಐ, ಬಿಇಒಗಳು ಹಾಗೂ ಎಲ್ಲಾ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರೊಂದಿಗೆ ಸಭೆಯೂ ನಡೆದಿತ್ತು. ‘ಸಾಗರಮಿತ್ರ’ ಮೂಲ ಅಭಿಯಾನದ ರೂವಾರಿ ಪುಣೆಯ ವಿನೋದ್ ಭೋದನ್‌ಕರ್ ಅವರು ವೆಬಿನಾರ್ ಮೂಲಕ ಅಧಿಕಾರಿಗಳಿಗೆ ಮಾರ್ಗದರ್ಶನವನ್ನೂ ನೀಡಿದ್ದರು.
ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ಬಳಸದಂತೆ ಅರಿವು ಮೂಡಿಸುವ ಕಾರ್ಯವನ್ನೂ ಮಾಡುತ್ತಿದೆ.
‘ಶಾಲೆಯಲ್ಲಿ ಹಸಿ ಕಸ, ಒಣ ಕಸ ಹಾಗೂ ಪ್ಲಾಸ್ಟಿಕ್ ಸಂಗ್ರಹಿಸಲು 3 ಪ್ರತ್ಯೇಕ ಡಸ್ಟ್‌ಬಿನ್‌ಗಳನ್ನು ಇಡಲಾಗಿದೆ. ವಿದ್ಯಾರ್ಥಿಗಳು ಮನೆಯಿಂದಲೂ ಪ್ಲಾಸ್ಟಿಕ್ ತಂದು ಹಾಕುತ್ತಾರೆ. ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಸ್ವಚ್ಛತೆಯ ನಿರ್ವಹಣೆಗೆ ತಂಡವನ್ನೂ ರಚಿಸಲಾಗಿದೆ’ ಎಂದು ದಾವಣಗೆರೆ ಶ್ರೀರಾಮ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಎ.ಎಲ್. ನಾಗವೇಣಿ ತಿಳಿಸಿದರು.
ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದರಿಂದ ಅವರು ತಮ್ಮ ಮನೆಗಳಲ್ಲಿ ಕುಟುಂಬದ ಸದಸ್ಯರಿಗೂ ಪ್ಲಾಸ್ಟಿಕ್ ಬಳಸದಂತೆ ಅರಿವು ಮೂಡಿಸುತ್ತಾರೆ. ಈ ಅಭಿಯಾನದಲ್ಲಿ ವಿದ್ಯಾರ್ಥಿಗಳೇ ಪಾಲುದಾರರು–ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾಧಿಕಾರಿ
ವಾರದಲ್ಲಿ 1 ಅಥವಾ 2 ದಿನ ಪಾಲಿಕೆಯ ವಾಹನಗಳು ಶಾಲೆಗಳಿಗೆ ತೆರಳಿ ಪ್ಲಾಸ್ಟಿಕ್ ಸಂಗ್ರಹಿಸುತ್ತವೆ. ಶಾಲೆಗಳಲ್ಲಿ ಪ್ಲಾಸ್ಟಿಕ್ ಸಂಗ್ರಹ ಹೆಚ್ಚಾದರೆ ಆ ಭಾಗದ ಆರೋಗ್ಯ ನಿರೀಕ್ಷಕರನ್ನು ಮುಖ್ಯ ಶಿಕ್ಷಕರು ಸಂಪರ್ಕಿಸಬಹುದು–ರೇಣುಕಾ, ಪಾಲಿಕೆ ಆಯುಕ್ತೆ
‘ಆಗಸ್ಟ್‌ನಿಂದಲೇ ಪ್ರೌಢಶಾಲೆಗಳಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ ಆರಂಭವಾಗಿತ್ತು. ಆ ಬಳಿಕ ಕೆಲದಿನಗಳ ನಂತರ ಶಾಲೆಗಳಿಗೆ ರಜೆ ನೀಡಿದ್ದರಿಂದ ಅಭಿಯಾನ ಸ್ಥಗಿತಗೊಂಡಿತ್ತು. ಇದೀಗ ಶಾಲೆಗಳು ಪುನಾರಂಭಗೊಂಡಿವೆ. ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಅಧಿಕೃತವಾಗಿ ನ.5ರಂದು ಚಾಲನೆ ನೀಡಲಾಗುತ್ತಿದೆ’ ಎಂದು ಡಿಡಿಪಿಐ ಜಿ.ಕೊಟ್ರೇಶ್ ತಿಳಿಸಿದರು. ‘ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆಗೊಂಡು 50 ವರ್ಷ ಕಳೆದಿದ್ದು ನಗರದ ಹೈಸ್ಕೂಲ್ ಮೈದಾನದಲ್ಲಿ ಅಂದು ಬೆಳಿಗ್ಗೆ 11 ಗಂಟೆಗೆ ಸುವರ್ಣ ಮಹೋತ್ಸವ ಆಯೋಜಿಸಲಾಗಿದೆ. ಆ ಕಾರ್ಯಕ್ರಮದಲ್ಲಿಯೇ ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ದೊರೆಯಲಿದೆ. ವಿನೋದ್ ಭೋದನಕರ್ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಮರುದಿನ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿ ಅಭಿಯಾನದ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ’ ಎಂದರು.
‘ಪ್ರತೀ ಶನಿವಾರ ಪ್ಲಾಸ್ಟಿಕ್ ಸಂಗ್ರಹಿಸಲಾಗುತ್ತಿದೆ. ಆರಂಭದಲ್ಲಿ 2–3 ಚೀಲ ಸಂಗ್ರಹವಾಗುತ್ತಿದ್ದ ಪ್ಲಾಸ್ಟಿಕ್ ಇದೀಗ 1 ಚೀಲಕ್ಕೆ ಇಳಿಕೆಯಾಗಿದೆ. ಕೆಲ ಪೋಷಕರು ಮನೆ ಬಳಿಯೇ ಸ್ವಚ್ಛತಾ ಕಾರ್ಮಿಕರಿಗೆ ಪ್ಲಾಸ್ಟಿಕ್ ಕೊಡುತ್ತೇವೆ. ವಿದ್ಯಾರ್ಥಿಗಳಿಗೆ ಏಕೆ ಕೊಡಬೇಕು ಎನ್ನುತ್ತಾರೆ’ ಎಂದು ಇಲ್ಲಿನ ನಿಟುವಳ್ಳಿಯ ಪಿಎಂಶ್ರೀ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸುರೇಶ್ ಎಂ. ತಿಳಿಸಿದರು. ‘ಪ್ಲಾಸ್ಟಿಕ್ ಅನ್ನು ಎಲ್ಲಿ ನೀಡುತ್ತಾರೆ ಎಂಬುದು ಮುಖ್ಯವಲ್ಲ. ಒಟ್ಟಾರೆ ಪ್ಲಾಸ್ಟಿಕ್ ಬಳಕೆಯನ್ನೇ ನಿಲ್ಲಿಸುವಂತೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಪ್ಲಾಸ್ಟಿಕ್ ರಹಿತ ಜೀವನ ರೂಪಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಲಾಗುತ್ತಿದೆ’ ಎಂದು ಡಿಡಿಪಿಐ ಜಿ.ಕೊಟ್ರೇಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.