
ಸಾವು
(ಪ್ರಾತಿನಿಧಿಕ ಚಿತ್ರ)
ಚಿತ್ರದುರ್ಗ: ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ನಗರದ ಗಾಂಧಿ ವೃತ್ತದಲ್ಲಿ ನ.22ರಂದು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಆಟೊ ಚಾಲಕ ಮಂಗಳವಾರ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.
ಮಾಳಪ್ಪನಹಟ್ಟಿಯ ಆಟೊ ಚಾಲಕ ತಿಪ್ಪೇಸ್ವಾಮಿ ದಾವಣಗೆರೆಯ ಖಾಸಗಿ ಅಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನಿಯಮ ಉಲ್ಲಂಘನೆ ಆರೋಪದ ಮೇಲೆ ಪೊಲೀಸರು ತಿಪ್ಪೇಸ್ವಾಮಿ ಆಟೊ ತಡೆದಿದ್ದರು. ಇದರಿಂದ ಬೇಸತ್ತ ಆಟೊ ಚಾಲಕ ಆಟೊ ಬಿಟ್ಟು ತೆರಳಿದ್ದರು. ಕೆಲವೇ ಹೊತ್ತಿನಲ್ಲಿ ಪೆಟ್ರೋಲ್ ಜೊತೆ ಬಂದ ಅವರು ಜನರು, ಪೊಲೀಸರು ನೋಡುತ್ತಿದ್ದಂತೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ಈ ದೃಶ್ಯಾವಳಿಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಘಟನೆಯ ನಂತರ ಪೊಲೀಸರು ಹಾಗೂ ಕುಟುಂಬ ಸದಸ್ಯರ ನಡುವೆ ಮಾತುಕತೆ ನಡೆದಿತ್ತು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
‘ಇಡೀ ಘಟನೆಯನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಆಟೊ ಚಾಲಕ ಬಲಿಯಾಗಿದ್ದಾನೆ. ಕುಟುಂಬ ಸದಸ್ಯರಿಗೆ ಪೊಲೀಸರು ₹ 7 ಲಕ್ಷ ಕೊಟ್ಟು ಕೈತೊಳೆದುಕೊಂಡರು. ಆಟೊ ಚಾಲಕ ಸಾವು– ಬದುಕಿನ ನಡುವೆ ಹೋರಾಡುವಾಗ ಪೊಲೀಸರು ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಸಂಭ್ರಮಿಸಿದರು. ಅಮಾಯಕ ಜೀವಕ್ಕೆ ಪೊಲೀಸರು ಎರವಾದರು. ಘಟನೆಗೆ ಕಾರಣವಾದ ಪೊಲೀಸರಿಗೆ ತಕ್ಕ ಶಿಕ್ಷೆಯಾಗಬೇಕು’ ಎಂದು ವಕೀಲರೊಬ್ಬರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.