ADVERTISEMENT

‘ಪ್ರಜಾವಾಣಿ’ ಕ್ವಿಜ್‌ ಚಾಂಪಿಯನ್‌ಷಿಪ್‌: ಜ್ಞಾನದ ಬುತ್ತಿ ಹಂಚಿ ತಿಂದ ಮಕ್ಕಳು

ದಾವಣಗೆರೆ ವಲಯದ ‘ಪ್ರಜಾವಾಣಿ’ ಕ್ವಿಜ್‌ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 11 ಜನವರಿ 2019, 13:26 IST
Last Updated 11 ಜನವರಿ 2019, 13:26 IST
ದಾವಣಗೆರೆಯಲ್ಲಿ ಶುಕ್ರವಾರ ನಡೆದ ವಲಯ ಮಟ್ಟದ ಪ್ರಜಾವಾಣಿ ಕ್ವಿಜ್‌ನಲ್ಲಿ ಪ್ರಶ್ನೆಗಳಿಗೆ ಉತ್ತರಿಸಿ ವಿದ್ಯಾರ್ಥಿಗಳು ಪೈಪೋಟಿಗೆ ಇಳಿದಿರುವುದು.
ದಾವಣಗೆರೆಯಲ್ಲಿ ಶುಕ್ರವಾರ ನಡೆದ ವಲಯ ಮಟ್ಟದ ಪ್ರಜಾವಾಣಿ ಕ್ವಿಜ್‌ನಲ್ಲಿ ಪ್ರಶ್ನೆಗಳಿಗೆ ಉತ್ತರಿಸಿ ವಿದ್ಯಾರ್ಥಿಗಳು ಪೈಪೋಟಿಗೆ ಇಳಿದಿರುವುದು.   

ದಾವಣಗೆರೆ: ಕನಸು ಹೊತ್ತು ಬಂದಿದ್ದ ವಿದ್ಯಾರ್ಥಿಗಳಲ್ಲಿ ಗೆಲ್ಲುವ ತವಕ; ಪ್ರಶ್ನೆ ಕೇಳುತ್ತಿದ್ದಂತೆ ಉತ್ತರಿಸಲು ನಾ ಮುಂದು, ತಾ ಮುಂದು ಎಂದು ಪೈಪೋಟಿಗಿಳಿದ ಮಕ್ಕಳು. ಹಲವರ ಮೊಗದಲ್ಲಿ ತಪ್ಪು ಉತ್ತರ ನೀಡಿದ ನಿರಾಸೆ. ಮತ್ತೆ ಕೆಲವರಲ್ಲಿ ಸರಿ ಉತ್ತರ ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡ ಸಂಭ್ರಮ. ಇನ್ನು ಕೆಲವರಲ್ಲಿ ತಮಗೆ ಅವಕಾಶ ಸಿಗಲಿಲ್ಲ ಎಂಬ ಬೇಸರ...

ಇದು ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗ ನಗರದ ಕುವೆಂಪು ಕನ್ನಡ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ದಾವಣಗೆರೆ ವಲಯ ಮಟ್ಟದ ‘ಪ್ರಜಾವಾಣಿ’ ಕ್ವಿಜ್‌ನ ಐದನೇ ಆವೃತ್ತಿಯಲ್ಲಿ ಕಂಡುಬಂದ ದೃಶ್ಯಗಳು. ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಹಾವೇರಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಂದ ಮುಂಜಾನೆಯೇ ಬಂದಿದ್ದ ಹಲವು ಶಾಲೆಗಳ 300ಕ್ಕೂ ಹೆಚ್ಚು ತಂಡಗಳು ತಮ್ಮ ‘ಸಾಮಾನ್ಯ ಜ್ಞಾನ’ದ ಬುತ್ತಿಯನ್ನು ಬಿಚ್ಚಿದರು.

ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಯಾವ ಕಾರ್ಯಕ್ರಮಕ್ಕೆ ಪ್ರಯಾಗ ಸಜ್ಜಾಗುತ್ತಿದೆ ಎಂಬ ಪ್ರಶ್ನೆಗೆ ರಾಣೆಬೆನ್ನೂರಿನ ನಿಟ್ಟೂರು ಸೆಂಟ್ರಲ್‌ ಶಾಲೆಯ ಈಶಾ ಕೋಟಿ ಹಾಗೂ ಯಾವ ರಾಜ್ಯ ಸಭಾ ಸದಸ್ಯರ ಪೂರ್ತಿ ಹೆಸರಿನಲ್ಲಿ ಮಂಗಟೆ ಚುಂಗ್‌ನಿಜಂಗ್‌ ಇದೆ ಎಂಬ ಪ್ರಶ್ನೆಗೆ ಗುರುಬಸಪ್ಪ ಆಂಗ್ಲ ಮಾಧ್ಯಮ ಶಾಲೆಯ ಜಯಂತ ಸರಿ ಉತ್ತರ ನೀಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲು ಆಯ್ಕೆಯಾದರು.

ADVERTISEMENT

‘ಕ್ಯೂರಿಯೊಸಿಟಿ ಸೊಲ್ಯುಷನ್ಸ್‌’ ಸಂಸ್ಥೆಯ ಕ್ವಿಜ್‌ ಮಾಸ್ಟರ್‌ ಮೇಘವಿ ಗೌಡ ಅವರು 20 ಪ್ರಶ್ನೆಗಳಿಗೆ ಲಿಖಿತ ಉತ್ತರ ಬರೆಯುವ ಪೂರ್ವಭಾವಿ ಸುತ್ತನ್ನು ಆರಂಭಿಸಿದಾಗ ವಿದ್ಯಾರ್ಥಿಗಳ ಎದೆಯ ಗೂಡಿನಲ್ಲಿ ಸಂಭ್ರಮದ ಜೊತೆಗೆ ದುಗುಡವೂ ಮನೆ ಮಾಡಿತ್ತು. ಒಂದೊಂದೇ ಪ್ರಶ್ನೆಗಳನ್ನು ಕೇಳುತ್ತ ಹೋದಂತೆ ತಂಡದ ಸದಸ್ಯರೊಂದಿಗೆ ಮೆಲು ದನಿಯಲ್ಲಿ ಚರ್ಚಿಸಿ, ಕಿವಿಯಲ್ಲಿ ಗುಟ್ಟಾಗಿ ಉತ್ತರವನ್ನು ಹೇಳಿ ಖಚಿತಪಡಿಸಿಕೊಂಡು ಪತ್ರಿಕೆಯಲ್ಲಿ ಬರೆಯತೊಡಗಿದರು. ಸುಮಾರು ಒಂದು ಗಂಟೆ ಕಾಲ ನಡೆದ ಈ ಸುತ್ತು ವಿದ್ಯಾರ್ಥಿಗಳ ಓದಿನ ಹರವನ್ನು ಓರೆಗೆ ಹಚ್ಚಿತು.

ನಂತರ ಕ್ವಿಜ್‌ ಮಾಸ್ಟರ್‌ ಈ ಸುತ್ತಿನ ಒಂದೆಂದೇ ಪ್ರಶ್ನೆಗಳನ್ನು ಪ್ರೇಕ್ಷಕರಿಗೆ ಕೇಳುತ್ತ ಸರಿ ಉತ್ತರ ನೀಡಿದ ವಿದ್ಯಾರ್ಥಿಗಳಿಗೆ ‘ಪ್ರಜಾವಾಣಿ’ ಕ್ಯಾಲೆಂಡರ್‌ ಹಾಗೂ ಚಾಕಲೇಟ್‌ ನೀಡಿ ಪ್ರಶಂಸಿದರು. ಉಳಿದವರು ಚಪ್ಪಾಳೆಯ ಮಳೆ ಸುರಿಸಿ ಸರಿ ಉತ್ತರ ಹೇಳಿದವರನ್ನು ಪ್ರೋತ್ಸಾಹಿಸಿದರು.

ಸೈಕಲ್‌ ಏರಿ ಬಂದ ಸರಸ್ವತಿ ಹಾಗೂ ಸಂಜೀವಿನಿ ಪರ್ವತ ಹೊತ್ತುಕೊಂಡು ಬಂದ ಹನುಮಂತನ ಚಿತ್ರ ಇರುವ ಜಾಹೀರಾತು ಯಾವ ಕಂಪನಿಗೆ ಸೇರಿದೆ ಎಂದು ಕೇಳಿದಾಗ ‘ಸೈಕಲ್‌ ಪ್ಯೂರ್‌ ಅಗರಬತ್ತಿ’ ಎಂದು ಎಲ್ಲರೂ ನಗುತ್ತಲೇ ಹೇಳಿದರು. ಆನಗೋಡಿನಲ್ಲಿ 1990ರಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಗಣ್ಯ ವ್ಯಕ್ತಿ ಯಾರು ಎಂಬ ಪ್ರಶ್ನೆಗೂ ವಿದ್ಯಾರ್ಥಿಗಳು ‘ಶಂಕರನಾಗ್‌’ ಎಂದು ಒಕ್ಕೊರಲಿನಿಂದ ಕೂಗಿದರು.

ಹಳೆಯ ಅಂಗಡಿಯ ಚಿತ್ರವನ್ನು ತೋರಿಸಿ ಇದು ಯಾವುದಕ್ಕೆ ಖ್ಯಾತಿ ಹೊಂದಿದೆ ಎಂದು ಕೇಳಿದಾಗ ತುರ್ಗಘಟ್ಟ ಶಾಲೆಯ ಪಲ್ಲವಿ, ಶ್ರೀ ಗುರು ಕೊಟ್ಟೂರೇಶ್ವರ ‘ಬೆಣ್ಣೆದೋಸೆ’ ಅಂಗಡಿ ಉತ್ತರಿಸಿದಾಗ, ಹಲವರು ತಮಗೆ ಇದು ತಿಳಿಯಲೇ ಇಲ್ಲ ಎಂದು ನಿರಾಶರಾದರು.

ದಿನದ 24 ಗಂಟೆಯೂ ವರದಿಗಾರನಾಗಿ ಕೆಲಸ ಮಾಡಿದ ಈ ವ್ಯಕ್ತಿ ಯಾರು ಎಂದು ವಿಡಿಯೊ ತೋರಿಸಿದಾಗ, ರಾಷ್ಟ್ರೋತ್ಥಾನ ಶಾಲೆಯ ಕುನಾಲ್‌ ‘ರೋಬೊ ವರದಿಗಾರ’ ಎಂಬ ಉತ್ತರ ನೀಡಿ, ಉಳಿದವರು ಹುಬ್ಬೇರಿಸುವಂತೆ ಮಾಡಿದ.

ಫೈನಲ್‌ ಸುತ್ತಿಗೆ ಅಂತಿಮವಾಗಿ ಆರು ತಂಡಗಳನ್ನು ಆಯ್ಕೆ ಮಾಡಲಾಯಿತು.

ಕುತೂಹಲ ಮೂಡಿಸಿದ ಅಂತಿಮ ಐದು ಸುತ್ತು: ಅಂತಿಮ ಹಂತದ ಸ್ಪರ್ಧೆಯಲ್ಲಿ ಐಸ್‌ ಬ್ರೇಕರ್ಸ್‌, ಇಮೇಜ್‌, ಮಿಕ್ಸ್ಡ್‌ ಬ್ಯಾಗ್‌, ಕನೆಕ್ಟ್ಸ್‌ ಮತ್ತು ನೇರ ಪ್ರಶ್ನೆಯ ಐದು ಸುತ್ತುಗಳಿದ್ದವು. ಕ್ವಿಜ್‌ ಮಾಸ್ಟರ್‌ ಮೇಘವಿ ಮೊದಲ ನೇರ ಪ್ರಶ್ನೆಯ ಸುತ್ತನ್ನು ಆರಂಭಿಸುತ್ತಿದ್ದಂತೆ ಸ್ಪರ್ಧಾಳುಗಳು ಉತ್ಸಾಹದಿಂದಲೇ ಉತ್ತರಿಸಲು ಆರಂಭಿಸಿದರು.

ಮೊದಲ ಸುತ್ತಿನಲ್ಲಿ ರಾಣೆಬೆನ್ನೂರಿನ ನಿಟ್ಟೂರು ಸೆಂಟ್ರಲ್‌ ಸ್ಕೂಲ್‌ನ ಈಶಾ ಎಚ್‌. ಕೋಟಿ ಹಾಗೂ ತೇಜಸ್ವಿನಿ ಮಾಳಗಿ ಮೊದಲ ಸ್ಥಾನದಲ್ಲಿದ್ದರು. ಎರಡನೇ ಸುತ್ತಿನ ವೇಳೆಗೆ ಶಿವಮೊಗ್ಗದ ಭಾರತೀಯ ವಿದ್ಯಾಭವನದ ಟಿ.ಎಂ. ವಿದ್ಯಾಸಾಗರ ಹಾಗೂ ಎಸ್‌.ಆರ್‌. ಸ್ವಾಗತ್‌ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ನಿಟ್ಟೂರು ಶಾಲೆಯ ತಂಡಕ್ಕೆ ಸಮಾನವಾಗಿ 25 ಅಂಕಗಳನ್ನು ಪಡೆದಿದ್ದರು.

ಬರ್ಜರ್‌ ಒತ್ತುವ ಮೂರನೇ ಸುತ್ತಿನಲ್ಲಿ ಸರಿ ಉತ್ತರ ಹೇಳುವ ಮೂಲಕ ಭಾರತೀಯ ವಿದ್ಯಾಭವನ ತಂಡವು 15 ಅಂಕ ಹಾಗೂ ದಾವಣಗೆರೆಯ ತರಳಬಾಳು ಶಾಲೆಯ ತಂಡವು 20 ಅಂಕ ಗಳಿಸಿತು. ಸೀತಮ್ಮ ಬಾಲಕಿಯರ ಶಾಲೆಯ ತಂಡ ಎರಡು ತಪ್ಪು ಉತ್ತರ ಹೇಳಿ ಒಟ್ಟು 15 ಅಂಕ ಕಳೆದುಕೊಂಡರೆ, ಸೋಮೇಶ್ವರ ಶಾಲೆ ಮತ್ತು ಜೈನ ವಿದ್ಯಾಲಯ ತಂಡವು ತಲಾ 5 ಅಂಕಗಳನ್ನು ಕಳೆದುಕೊಂಡಿತು. ನಾಲ್ಕನೇ ಸುತ್ತಿನಲ್ಲಿ ಚಿತ್ರಾವಳಿಗಳನ್ನು ಗಮನಿಸಿ ಎರಡು ಸರಿ ಉತ್ತರಗಳನ್ನು ನೀಡಿದ ಭಾರತೀಯ ವಿದ್ಯಾಭವನ ತಂಡವು ಒಟ್ಟು 70 ಅಂಕಗಳನ್ನು ಪಡೆದು ಮೊದಲ ಸ್ಥಾನದಲ್ಲಿತ್ತು. ನಿಟ್ಟೂರು ಶಾಲೆಯು 25 ಅಂಕ ಪಡೆದು ಎರಡನೇ ಸ್ಥಾನದಲ್ಲಿತ್ತು.

ಅಂತಿಮ ಸುತ್ತಿನಲ್ಲಿ ಬೇರೆಯವರ ಸರದಿಯಲ್ಲಿ ಉತ್ತರವನ್ನು ಹೇಳುವ ಮೂಲಕ 11 ಅಂಕಗಳನ್ನು ಪಡೆದು ಭಾರತೀಯ ವಿದ್ಯಾಭವನದ ತಂಡವು ಒಟ್ಟು 80 ಅಂಕಗಳೊಂದಿಗೆ ದಾವಣಗೆರೆ ವಿಭಾಗದ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಈ ತಂಡ ಜನವರಿ 24ರಂದು ಬೆಂಗಳೂರಿನಲ್ಲಿ ನಡೆಯುವ ಫೈನಲ್‌ಗೆ ಅರ್ಹತೆ ಪಡೆದುಕೊಂಡಿತು.

ಕಳೆದ ಬಾರಿಯ ಚಾಂಪಿಯನ್‌ ನಿಟ್ಟೂರು ಶಾಲೆಯ 25 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆಯಿತು. ಜೈನ ವಿದ್ಯಾಲಯ ಹಾಗೂ ತರಳಬಾಳು ಶಾಲೆ ತಲಾ 20 ಅಂಕ ಪಡೆದಿತ್ತು. ದಾವಣಗೆರೆಯ ಯಾವ ಕ್ರೀಡಾಪಟುಗೆ ಕರ್ನಾಟಕದ ಎಕ್ಸ್‌ಪ್ರೆಸ್‌ ಎನ್ನಲಾಗುತ್ತಿತ್ತು ಎಂದು ಕೇಳಿದ ಟೈಬ್ರೇಕರ್‌ ಪ್ರಶ್ನೆಗೆ ತರಳಬಾಳು ತಂಡದ ವಿದ್ಯಾರ್ಥಿಗಳು ತಕ್ಷಣವೇ ಬಜರ್‌ ಒತ್ತಿ ‘ವಿನಯಕುಮಾರ್‌’ ಎಂಬ ಉತ್ತರವನ್ನು ಹೇಳುವ ಮೂಲಕ ತೃತೀಯ ಬಹುಮಾನವನ್ನು ಗಿಟ್ಟಿಸಿಕೊಂಡರು.

ಜಾಣ್ಮೆ ಮೆರೆದ ಪ್ರೇಕ್ಷಕರು:

‘ಯಾವ ಪ್ರಾಣಿಯ ಉಣ್ಣೆಯಿಂದ ಸ್ವೇಟರ್‌ ತಯಾರಿಸಲಾಗಿದೆ’ ಎಂದು ಅಂತಿಮ ಸುತ್ತಿನಲ್ಲಿ ಕೇಳಿದ ಪ್ರಶ್ನೆಗೆ ಸ್ಪರ್ಧಾಳುಗಳು ಉತ್ತರಿಸದಿದ್ದಾಗ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ಕುಮಾರಪಟ್ಟಣಂನ ಅಮೃತ ವಿದ್ಯಾಲಯದ ಮುನೇಶ್‌ ಗೌತಮ್‌ ಕ್ಲೋನ್‌ ಮಾಡಿದ್ದ ‘ಡಾಲಿ’ ಎಂಬ ಕುರಿ ಎಂದು ಉತ್ತರಿಸಿ ಬಹುಮಾನ ಪಡೆದರು. ಗೋಲ್ಕೊಂಡದ ಕೋಟೆ ದ್ವಾರವನ್ನು ಮುಳ್ಳಿನಿಂದ ಏಕೆ ನಿರ್ಮಿಸಲಾಗಿತ್ತು ಎಂಬ ಪ್ರಶ್ನೆಗೂ ಸ್ಪರ್ಧಾಳುಗಳು ಉತ್ತರಿಸುವಲ್ಲಿ ವಿಫಲರಾದಾಗ, ‘ಆನೆಗಳನ್ನು ಹಿಮ್ಮೆಟ್ಟಿಸಲು’ ಎಂದು ಉತ್ತರಿಸಿದ ಮುನೇಶ್‌ ಗೌತಮ್‌ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

‘ದೀಕ್ಷಾ ನೆಟ್‌ವರ್ಕ್‌’ ಸಂಸ್ಥೆಯ ಸಹಭಾಗಿತ್ವ ಹಾಗೂ ಕೆನರಾ ಬ್ಯಾಂಕ್‌ನ ಬ್ಯಾಂಕಿಂಗ್‌ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ಹಾಗೂ ಡಿಡಿಪಿಐ ಸಿ.ಆರ್‌. ಪರಮೇಶ್ವರಪ್ಪ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.