ADVERTISEMENT

ಪ್ರಧಾನಿ ಆಫರ್ ತಿರಸ್ಕರಿಸಿದರೆ ಟ್ರೋಲ್ ಆಗುವೆ ಎಂದಿದ್ದ ಡ್ರೋನ್‌ ಪ್ರತಾಪ್

ದಾವಣಗೆರೆಯಲ್ಲಿ ವಾಸ್ತವ್ಯ ಹೂಡಿದ್ದ ಹೋಟೆಲ್ ಮಾಲೀಕರೊಂದಿಗೆ ಹಂಚಿಕೊಂಡ ಅನಿಸಿಕೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 7:35 IST
Last Updated 18 ಜುಲೈ 2020, 7:35 IST
ದಾವಣಗೆರೆಯ ಶ್ರೀಗಂಧ ರೆಸಿಡೆನ್ಸಿಯಲ್ಲಿ ವಾಸ್ತವ್ಯ ಹೂಡಿದ್ದ ಡ್ರೋನ್ ಪ್ರತಾಪ್
ದಾವಣಗೆರೆಯ ಶ್ರೀಗಂಧ ರೆಸಿಡೆನ್ಸಿಯಲ್ಲಿ ವಾಸ್ತವ್ಯ ಹೂಡಿದ್ದ ಡ್ರೋನ್ ಪ್ರತಾಪ್   

ದಾವಣಗೆರೆ: ‘ಪ್ರಧಾನಿ ನರೇಂದ್ರ ಮೋದಿ ನನಗೆ ಫೋನ್ ಮಾಡಿ ನೌಕರಿಯ ಆಫರ್ ಕೊಟ್ಟಿದ್ದಾರೆ. ಅದನ್ನು ತಿರಸ್ಕರಿಸಿದರೆ ಟೀಕೆಗಳಿಗೆ ಒಳಗಾಗುತ್ತೇನೆ ಎಂದು ಮಂಡ್ಯದ ಡ್ರೋನ್ ಪ್ರತಾಪ್ ಹೇಳಿದ್ದರು’ ಎಂದು ಇಲ್ಲಿನ ಶ್ರೀಗಂಧ ರೆಸಿಡೆನ್ಸಿ ಹೋಟೆಲ್‌ನ ಮಾಲೀಕ ವಿನಾಯಕ ಶುಕ್ರವಾರ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡರು.

ಜುಲೈ 1ರಿಂದ 8ರವರವರೆಗೆ ನಗರದ ತಮ್ಮ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಪ್ರತಾಪ್‌, ತಮ್ಮೊಂದಿಗೆ ಹಂಚಿಕೊಂಡಿದ್ದ ಕೆಲವು ವಿಷಯಗಳನ್ನು ಅವರು ಬಹಿರಂಗಗೊಳಿಸಿದರು.

‘ಪ್ರಧಾನಿ ದೂರವಾಣಿ ಕರೆ ಮಾಡಿ ಡಿಆರ್‌ಡಿಒದಲ್ಲಿ ಉದ್ಯೋಗದ ಆಫರ್ ಮಾಡಿದ್ದಾರೆ. ಅದನ್ನು ಒಪ್ಪಿಕೊಳ್ಳಬೇಕೋ, ತಿರಸ್ಕರಿಸಬೇಕೋ ಗೊತ್ತಿಲ್ಲ. ತಿರಸ್ಕರಿಸಿದರೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗುತ್ತೇನೆ. ಮಾಧ್ಯಮಗಳು ಕರೆ ಮಾಡಿ ಕೇಳಿದರೂ ನನಗೆ ಆಫರ್ ಬಂದಿಲ್ಲ ಎಂದೇ ಹೇಳುತ್ತೇನೆ ಎಂದು ಪ್ರತಾಪ್ ಅನಿಸಿಕೆ ವ್ಯಕ್ತಪಡಿಸಿದ್ದರು’ ಎಂದು ವಿನಾಯಕ ಮೆಲುಕು ಹಾಕಿದರು.

ADVERTISEMENT

‘ರಾತ್ರಿ ಎಲ್ಲಾ ವಿಡಿಯೊ ಕಾಲ್‌ನಲ್ಲೇ ಇರುತ್ತಿದ್ದರು. ಮೂರು ದಿನಗಳ ಹಿಂದೆ ನನಗೆ ದೂರವಾಣಿ ಕರೆ ಮಾಡಿ ಫ್ರಾನ್ಸ್‌ನಿಂದ ಒಂದು ಅವಕಾಶ ಬಂದಿದೆ. ಅದನ್ನು ಒಪ್ಪಿಕೊಂಡರೆ ನಾನು ನಗೆಪಾಟಲಿಗೆ ಒಳಗಾಗಿದ್ದೆಲ್ಲವೂ ಮುಚ್ಚಿಹೋಗುತ್ತದೆ ಎಂದು ಹೇಳಿದ್ದರು’ ಎಂದು ಅವರು ವಿವರಿಸಿದರು.

‘ನಮ್ಮ ಹೋಟೆಲ್‌ ಬಗ್ಗೆ ಅವರು ಮಾತನಾಡಿರುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಬೇಕು ಎಂದಿದ್ದೆ. ಆದರೆ, ಅವರು ಟ್ರೋಲ್ ಆದ ಮೇಲೆ ಆ ನಿರ್ಧಾರ ಕೈಬಿಟ್ಟೆ. ಜುಲೈ 8ರಂದು ಕೊಠಡಿ ಖಾಲಿ ಮಾಡಿದ ಬಳಿಕ ಅವರ ಬಗ್ಗೆ ಟೀಕೆಗಳು ಬಂದವು. ಕೆಲಸದ ನಿಮಿತ್ತ ವಾಸ್ತವ್ಯ ಹೂಡುತ್ತಿದ್ದೇನೆಯೇ ಹೊರತು, ಕ್ವಾರಂಟೈನ್‌ಗಾಗಿ ಅಲ್ಲ ಎಂದಿದ್ದರು. ನಮ್ಮ ಹೋಟೆಲ್‌ಗೆ ಅವರು ಈ ಮೊದಲೂ ಒಂದು ಬಾರಿ ಬಂದಿದ್ದರು’ ಎಂದು ವಿನಾಯಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.