ADVERTISEMENT

ಸಹಜ ಹೆರಿಗೆಗೆ ಹೆದರಿಕೆ: ಸಿಜೇರಿಯನ್‌ ಮಾಡುವಂತೆ ಸರ್ಜನ್‌ಗಳಿಗೆ ದುಂಬಾಲು!

ಸಹಜ ಹೆರಿಗೆಗೆ ಹಿಂದೇಟು ಹಾಕುತ್ತಿರುವ ಜನ * ಶೇ 35ಕ್ಕೇರಿದ ಪ್ರಮಾಣ

ಬಾಲಕೃಷ್ಣ ಪಿ.ಎಚ್‌
Published 10 ಜೂನ್ 2022, 2:08 IST
Last Updated 10 ಜೂನ್ 2022, 2:08 IST
ಹಳೇ ದಾವಣಗೆರೆಯಲ್ಲಿರುವ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆ
ಹಳೇ ದಾವಣಗೆರೆಯಲ್ಲಿರುವ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆ   

ದಾವಣಗೆರೆ: ಆಧುನಿಕ ತಂತ್ರಜ್ಞಾನವು ಹೆರಿಗೆಯನ್ನು ಸುಲಭಗೊಳಿಸಿದೆ. ಇದು ಅಸಾಧಾರಣ ಹೆರಿಗೆ ನೋವು ನಿರಾಕರಿಸುವ ಮನಃಸ್ಥಿತಿಗೆ ತಂದೊಡ್ಡಿದೆ. ಪರಿಣಾಮವಾಗಿ, ಸಿಜೇರಿಯನ್‌ ಮೂಲಕ ಆಗುತ್ತಿರುವ ಹೆರಿಗೆಗಳ ಪ್ರಮಾಣ ಹೆಚ್ಚುತ್ತಿದೆ. ಶೇ 20ರ ಒಳಗಿರಬೇಕಿದ್ದ ಈ ಪ್ರಮಾಣ ಈಗ ಶೇ 35 ದಾಟಿದೆ.

ಚಿಗಟೇರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಕೆ.ಆರ್‌. ಮಾರ್ಕೆಟ್‌ ರಸ್ತೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗಳು, ಹೊನ್ನಾಳಿ, ಚನ್ನಗಿರಿ, ಹರಿಹರ, ಜಗಳೂರು ತಾಲ್ಲೂಕು ಆಸ್ಪತ್ರೆಗಳು, 4 ಸಮುದಾಯ ಆಸ್ಪತ್ರೆಗಳು, 25 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿ ಸರ್ಕಾರಿ ವಲಯದ 35 ಆಸ್ಪತ್ರೆಗಳಲ್ಲಿ ಹೆರಿಗೆ ಸೌಲಭ್ಯಗಳಿವೆ. 15 ಖಾಸಗಿ ಹೆರಿಗೆ ಆಸ್ಪತ್ರೆಗಳಿವೆ. ಇಲ್ಲಿ ನಡೆಯುತ್ತಿರುವ ಹೆರಿಗೆಗಳಲ್ಲಿ ಶೇ 35ಕ್ಕೂ ಅಧಿಕ ಹೆರಿಗೆಗಳು ಸಿಜೇರಿಯನ್‌ ಆಗಿವೆ.

‘ಗರ್ಭಿಣಿಯರಿಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆ ಸಹಿತ ವಿವಿಧ ಕಾಯಿಲೆಗಳಿದ್ದರೆ, ಗರ್ಭದಲ್ಲಿ ಅವಳಿ ಶಿಶುಗಳಿದ್ದರೆ ಹೆಚ್ಚು ಅಪಾಯವನ್ನು ಆಹ್ವಾನಿಸುವುದು ಸರಿಯಲ್ಲ ಎಂಬ ಕಾರಣಕ್ಕೆ ವೈದ್ಯರು ಸಿಜೇರಿಯನ್‌ಗೆ ಶಿಫಾರಸು ಮಾಡುತ್ತಾರೆ. ಆದರೆ, ಸಾಮಾನ್ಯವಾಗಿ ಈ ಪ್ರಮಾಣ ಶೇ 10ರಿಂದ ಶೇ 12ರಷ್ಟೇ ಇರುತ್ತಿತ್ತು. ನಿಗದಿತ ಸಮಯಕ್ಕೆ ಹೆರಿಗೆ ಆಗದಿದ್ದರೆ, ಆಸ್ಪತ್ರೆಗೆ ಬರುವುದು ತಡವಾಗಿದ್ದರೆ ಸಿಜೇರಿಯನ್‌ ಮೊರೆ ಹೋಗಬೇಕಾಗುತ್ತದೆ. ಇವುಗಳ ಪ್ರಮಾಣವೂ ಶೇ 3ರಿಂದ 5 ದಾಟುತ್ತಿರಲಿಲ್ಲ. ಇಂಥವುಗಳನ್ನು ಹೊರತುಪಡಿಸಿ ಮಿಕ್ಕ ಸಂದರ್ಭದಲ್ಲಿ ಸಹಜ ಹೆರಿಗೆಯಾಗಬೇಕು. ಆದರೆ ಸಹಜ ಹೆರಿಗೆಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ’ ಎಂದು ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ.ಕೆ.ಎಸ್‌. ಮೀನಾಕ್ಷಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಗರ್ಭೀಣಿಯರು ಪೌಷ್ಟಿಕ ಆಹಾರ ಸೇವಿಸುವುದು ಅಗತ್ಯ. ಒಂದೆರಡು ಗಂಟೆ ಅಧಿಕ ವಿಶ್ರಾಂತಿಯೂ ಬೇಕು. ‌ಜತೆಗೆ ದೈಹಿಕ ಚಟುವಟಿಕೆ ಇರಲೇಬೇಕು. ಗರ್ಭ ಧರಿಸಿದ ಕೂಡಲೇ ದೈಹಿಕ ಚಟುವಟಿಕೆ ನಿಲ್ಲಿಸಿ, ಹೆಚ್ಚು ಆಹಾರ ಸೇವಿಸುವುದು ಮತ್ತು ಅಧಿಕ ವಿಶ್ರಾಂತಿಗೆ ಒತ್ತು ನೀಡುವುದೂ ಸಿಜೇರಿಯನ್‌ ಪ್ರಮಾಣ ಹೆಚ್ಚಲು ಕಾರಣ ಎಂದು ಅವರು ವಿವರಿಸಿದರು.

‘ಒಂದನೇ ಮಗು ಸಿಜೇರಿಯನ್‌ ಆಗಿದ್ದರೆ ಎರಡನೇ ಮಗುವೂ ಸಿಜೇರಿಯನ್ ಮಾಡಲೇಬೇಕಾಗುತ್ತದೆ ಎಂಬ ಕಲ್ಪನೆ ಜನರಲ್ಲಿದೆ. ಹಾಗೇನೂ ಇಲ್ಲ. ಎರಡನೇ ಹೆರಿಗೆ ಸಹಜವಾಗಿ ಆಗಬಹುದು ಎಂಬ ಅರಿವು ಮೂಡಿಸುತ್ತಿದ್ದೇವೆ. ಆದರೆ ಜನ ಅದನ್ನು ಕೇಳಲು ತಯಾರಿಲ್ಲ’ ಎಂದು ಪ್ರಸೂತಿ ತಜ್ಞೆ ಡಾ. ಭಾರತಿ ಅವರು ಅನುಭವ ಹಂಚಿಕೊಳ್ಳುತ್ತಾರೆ.

ಆಧುನಿಕ ತಂತ್ರಜ್ಞಾನ ಲಭ್ಯ ಇರುವುದರಿಂದ ಸಣ್ಣ ಸಮಸ್ಯೆ ಇದ್ದರೂ ಗೊತ್ತಾಗುತ್ತದೆ. ಆಗ ಗರ್ಭಿಣಿಯ ಮನೆಯವರೂ, ವೈದ್ಯರೂ ರಿಸ್ಕ್‌ ತೆಗೆದುಕೊಳ್ಳಲು ತಯಾರಿರುವುದಿಲ್ಲ. ಮಗುವಿನ ಉಸಿರಾಟ, ಚಲನೆ, ಸುತ್ತ ನೀರು ಹೇಗಿದೆ ಎಂದು ನೋಡಲಾಗುತ್ತದೆ. ಅಲ್ಲಿಯೂ ಸಮಸ್ಯೆ ಕಂಡು ಬಂದರೆ ಸಿಜೇರಿಯನ್‌ ಮಾಡಲಾಗುತ್ತದೆ. ಈ ವರ್ಷದ ಜನವರಿ, ಫೆಬ್ರುವರಿಯಲ್ಲಿ ಶೇ 40ರಷ್ಟು ಸಿಜೇರಿಯನ್‌ ಹೆರಿಗೆಗಳೇ ಆಗಿದ್ದು, ಈಗ ಪ್ರಮಾಣ ಸ್ವಲ್ಪ ಕಡಿಮೆಯಾಗಿ, ಶೇ 35ಕ್ಕೆ ಇಳಿದಿದೆ. ಇನ್ನೆರಡು ತಿಂಗಳಲ್ಲಿ ಶೇ 32ಕ್ಕೆ ಇಳಿಸುವ ಗುರಿ ಇದೆ ಎಂದು ತಿಳಿಸಿದರು.

ಇಲ್ಲಿರುವ ಎರಡೂ ಆಸ್ಪತ್ರೆಗಳು ರೆಫರಲ್‌ ಆಗಿರುವುದರಿಂದ ಈ ಜಿಲ್ಲೆಯವರಲ್ಲದೇ ಚಿತ್ರದುರ್ಗ, ಶಿವಮೊಗ್ಗ, ಹಾವೇರಿ, ಬಳ್ಳಾರಿ, ವಿಜಯನಗರ ಜಿಲ್ಲೆಗಳಿಂದಲೂ ಹೆರಿಗೆಗೆ ಬರುತ್ತಾರೆ. ಅಲ್ಲಿ ಸಹಜ ಹೆರಿಗೆ ಆಗದ ಕಾರಣಕ್ಕೆ ಇಲ್ಲಿಗೆ ಶಿಫಾರಸು ಆಗಿರುತ್ತದೆ. ಹಾಗಾಗಿ ಇಲ್ಲಿ ಸಿಜೇರಿಯನ್‌ ಪ್ರಮಾಣ ಹೆಚ್ಚಿರುತ್ತದೆ ಎಂದು ಸಿ.ಜಿ. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ಗಿರಿಧರ್‌ ಅವರು ತಿಳಿಸಿದರು.

ಆಸ್ಪತ್ರೆಗಳ ಹೆರಿಗೆ ವಿವರ

ವರ್ಷ ಒಟ್ಟು ಹೆರಿಗೆ ಸಿಜೇರಿಯನ್‌ ಶೇ

2017–18 27,206 6,903 25%

2018–19 26,997 7,942 29%

2019–20 26,493 7,940 30%

2020–21 21,843 6,084 28%

2021–22 21,336 7,610 33%

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.