ADVERTISEMENT

ಅ.2ರಂದು ಬೃಹತ್ ಶೋಭಾಯಾತ್ರೆ

ವಿಶ್ವ ಹಿಂದೂ ಪರಿಷದ್, ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ನೇತೃತ್ವ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 5:44 IST
Last Updated 28 ಸೆಪ್ಟೆಂಬರ್ 2025, 5:44 IST
ದಾವಣಗೆರೆಯ ಹೈಸ್ಕೂಲ್‌ ಮೈದಾನದಲ್ಲಿ ಶನಿವಾರ ಆಟೊ ರ‍್ಯಾಲಿಗೆ ಹಿಂದೂ ಮುಖಂಡರು ಚಾಲನೆ ನೀಡಿದರು  ಪ್ರಜಾವಾಣಿ ಚಿತ್ರ
ದಾವಣಗೆರೆಯ ಹೈಸ್ಕೂಲ್‌ ಮೈದಾನದಲ್ಲಿ ಶನಿವಾರ ಆಟೊ ರ‍್ಯಾಲಿಗೆ ಹಿಂದೂ ಮುಖಂಡರು ಚಾಲನೆ ನೀಡಿದರು  ಪ್ರಜಾವಾಣಿ ಚಿತ್ರ   

ದಾವಣಗೆರೆ: ನಗರದಲ್ಲಿ ಅ.2ರಂದು ವಿಶ್ವ ಹಿಂದೂ ಪರಿಷದ್ ಹಾಗೂ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿಯಿಂದ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮುಖಂಡ ಎಸ್‌.ಟಿ.ವೀರೇಶ್‌ ತಿಳಿಸಿದರು. 

ಅಂದು ಬೆಳಿಗ್ಗೆ 11.30ಕ್ಕೆ ವೆಂಕಟೇಶ್ವರ ವೃತ್ತದಿಂದ (ಬೇತೂರು ರಸ್ತೆ) ಆರಂಭಗೊಳ್ಳಲಿರುವ ಶೋಭಾಯಾತ್ರೆಯು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಬೀರಲಿಂಗೇಶ್ವರ ದೇವಸ್ಥಾನದ ಆವರಣ ತಲುಪಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. 

ಸಮಾಳ, ಸ್ಥಬ್ಧಚಿತ್ರ, ನಂದಿಕೋಲು, ವೀರಗಾಸೆ, ಕೊಂಬು ಕಹಳೆ, ಡೊಳ್ಳು, ಕೋಲಾಟ, ಸಾಂಪ್ರದಾಯಿಕ ವಾದ್ಯ, ನಾಸಿಕ್‌ ಡೋಲ್‌ ಸೇರಿದಂತೆ ಹಲವು ಕಲಾತಂಡಗಳು ಶೋಭಾಯಾತ್ರೆಯ ಮೆರುಗು ಹೆಚ್ಚಿಸಲಿವೆ. ಹಲವು ಸ್ವಾಮೀಜಿಗಳು ಸೇರಿದಂತೆ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. 

ADVERTISEMENT

ವಿಜಯದಶಮಿ ಅಂಗವಾಗಿ ಈಗಾಗಲೇ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸೆ.25ರಂದು ಪೂರ್ಣಕುಂಭ ಮೆರವಣಿಗೆ, 27ರಂದು ಆಟೊ ರ‍್ಯಾಲಿ ನಡೆಸಲಾಯಿತು. ಸೆ. 28ರಂದು ಬೆಳಿಗ್ಗೆ 10.30ಕ್ಕೆ ರಾಮ್‌ ಆ್ಯಂಡ್ ಕೋ ವೃತ್ತದಿಂದ ಮಹಿಳಾ ಬೈಕ್‌ ಜಾಥಾ, 30ರಂದು ಬೆಳಿಗ್ಗೆ 10.30ಕ್ಕೆ ಯುವಕರ ಬೈಕ್‌ ಜಾಥಾ, ಅ.1ರಂದು ದುರ್ಗಾಂಬಿಕಾ ದೇವಸ್ಥಾನದಿಂದ ಬೆಳಿಗ್ಗೆ 10 ಗಂಟೆಗೆ ‘ದುರ್ಗಾದೌಡ್‌’ (ಶಸ್ತ್ರಪೂಜೆ) ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. 

ಬೀದಿಗಿಳಿದು ಹೋರಾಟ: 

‘ಕಾರ್ಲ್‌ಮಾರ್ಕ್ಸ್‌ ನಗರದಲ್ಲಿ ಫ್ಲೆಕ್ಸ್‌ ವಿಚಾರದಲ್ಲಿ ಅಮಾಯಕ ಹಿಂದೂಗಳ ಮೇಲೆ ಕೆಲವು ಮುಸ್ಲಿಂ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಹಿಂದೂಗಳನ್ನು ಆ ಪ್ರದೇಶದಿಂದ ಓಡಿಸುವ ಹುನ್ನಾರ ಇದರ ಹಿಂದೆ ಅಡಗಿದೆ. ಲ್ಯಾಂಡ್‌ ಜಿಹಾದ್ ಸಕ್ರಿಯವಾಗಿದೆ. ಹಿಂದೂಗಳ ರಕ್ಷಣೆಗಾಗಿ ಬೀದಿಗಿಳಿದು ಹೋರಾಟ ನಡೆಸಲಾಗುವುದು’ ಎಂದು ಎಸ್‌.ಟಿ.ವೀರೇಶ್‌ ಎಚ್ಚರಿಸಿದರು. 

‘ಪ್ರಕರಣದಲ್ಲಿ ಹಲ್ಲೆಗೊಳಗಾದವರನ್ನೇ ಪೊಲೀಸರು ಬಂಧಿಸಿ, ಎಫ್‌ಐಆರ್‌ ದಾಖಲಿಸಿದ್ದಾರೆ. ಕಲ್ಲು ತೂರಾಟ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಎಲ್ಲಾ ಆರೋಪಿಗಳನ್ನೂ ಬಂಧಿಸಬೇಕು’ ಎಂದು ಒತ್ತಾಯಿಸಿದರು. 

ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಅಧ್ಯಕ್ಷ ಎಂ.ಆನಂದ್‌, ಶಿವಪ್ರಕಾಶ್‌, ಪುನೀತ್‌, ಚೇತನಾ ಶಿವಕುಮಾರ್, ಅನುಷಾ, ಮಿಥುನ್ ಸೇರಿದಂತೆ ಇನ್ನಿತರರು ಇದ್ದರು. 

ರ‍್ಯಾಲಿಯಲ್ಲಿ ಭಾಗವಹಿಸಿದ್ದ ಆಟೊಗಳು

ಆಟೊ ರ‍್ಯಾಲಿ; ಮಾತಿನ ಚಕಮಕಿ 

ವಿಶ್ವ ಹಿಂದೂ ಪರಿಷತ್ ಸಾರ್ವಜನಿಕ ವಿಜಯ ದಶಮಿ ಸಮಿತಿಯಿಂದ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆಟೊ ರ‍್ಯಾಲಿ ವೇಳೆ ಆಯೋಜಕರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.  ರ‍್ಯಾಲಿಯಲ್ಲಿ ಭಾಗವಹಿಸಲು ಬಂದಿದ್ದ ಆಟೊ ಚಾಲಕರಿಂದ ಡಿಎಲ್‌ ಸೇರಿದಂತೆ ಇನ್ನಿತರ ದಾಖಲೆಗಳನ್ನು ತೋರಿಸುವಂತೆ ಸಂಚಾರಿ ಪೊಲೀಸರು ಕೇಳಿದ್ದರಿಂದ ವಾಗ್ವಾದ ಉಂಟಾಯಿತು.  ‘ಅನ್ಯ ಧರ್ಮಿಯರು ಹಬ್ಬದ ವೇಳೆ ಬೈಕ್‌ಗಳಲ್ಲಿ ಹೆಲ್ಮೆಟ್‌ ಇಲ್ಲದೇ ಇಬ್ಬರು ಮೂವರು ಸಂಚರಿಸಿದರೂ ಪೊಲೀಸರು ಸುಮ್ಮನೇ ನಿಂತುಕೊಂಡಿರುತ್ತಾರೆ. ನಗರದ ಹಳೇ ಭಾಗದಲ್ಲಿ ಬೈಕ್‌ನಲ್ಲಿ 5–6 ಜನ ಓಡಾಡುತ್ತಾರೆ. ಆಗಲೂ ಪೊಲೀಸರು ಕ್ರಮ ಕೈಗೊಳ್ಳುವುದಿಲ್ಲ. ಆದರೆ ಹಿಂದೂಗಳ ಹಬ್ಬದ ಆಚರಣೆಗಾಗಿ ಆಟೊ ರ‍್ಯಾಲಿ ನಡೆಸಲು ಮುಂದಾದರೆ ದಾಖಲೆಗಳನ್ನು ಕೇಳುವ ಮೂಲಕ ಅಡ್ಡಿ ಪಡಿಸುತ್ತಿದ್ದಾರೆ’ ಎಂದು ಹಿಂದೂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.  ‘ನಾವು ಕಾನಾನು ಪಾಲನೆ ಮಾಡುತ್ತೇವೆ. ಆದರೆ ತಾರತಮ್ಯ ಮಾಡಿದರೆ ಸಹಿಸುವುದಿಲ್ಲ’ ಎಂದು ಬಿಜೆಪಿ ಮುಖಂಡ ಎಸ್.ಟಿ ವೀರೇಶ್ ಆಕ್ರೋಶ ವ್ಯಕ್ತಪಡಿಸಿದರು.  ‘ನಾವು ಯಾರೊಂದಿಗೂ ತಾರತಮ್ಯ ಮಾಡದೇ ಕಾನೂನು ಪಾಲನೆ ಮಾಡುತ್ತಿದ್ದೇವೆ’ ಎಂದು ಸಂಚಾರಿ ವೃತ್ತ ನಿರೀಕ್ಷಕ ಮಂಜುನಾಥ್‌ ನೆಲವಾಗಲು ಸಮರ್ಥಿಸಿಕೊಂಡರು.  ಮಾತಿನ ಚಕಮಕಿ ಬಳಿಕ ಆಟೊ ರ‍್ಯಾಲಿಗೆ ಚಾಲನೆ ದೊರೆಯಿತು. ಹೈಸ್ಕೂಲ್ ಮೈದಾನದಿಂದ ಶುರುವಾದ ಆಟೊ ರ‍್ಯಾಲಿ ನಗರದ ಪ್ರಮುಖ ರಸ್ತೆ ವೃತ್ತಗಳಲ್ಲಿ ಸಂಚರಿಸಿ ಹೈಸ್ಕೂಲ್ ಮೈದಾನದಲ್ಲೇ ಕೊನೆಗೊಂಡಿತು. ಲೋಕಿಕೆರೆ ನಾಗರಾಜ್ ಯಶವಂತರಾವ್ ಜಾಧವ್ ಸೇರಿದಂತೆ ಇತರರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.