ದಾವಣಗೆರೆ: ‘ಸತ್ಯ, ಪಾರದರ್ಶಕತೆ ಮತ್ತು ಪ್ರಾಮಾಣಿಕತೆಗೆ ಬೆಲೆ ನೀಡುವುದಾದರೆ ಪ್ರಧಾನಿ ನರೇಂದ್ರ ಮೋದಿ ಕೂಡಲೇ ರಾಜೀನಾಮೆ ನೀಡಬೇಕು. ಮತದಾರರ ಪಟ್ಟಿಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಬೇಕು’ ಎಂದು ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಒತ್ತಾಯಿಸಿದರು.
ಹಳೇ ದಾವಣಗೆರೆಯ ಮುಖ್ಯ ಅಂಚೆ ಕಚೇರಿ ಮುಂಭಾಗದಲ್ಲಿ ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ವತಿಯಿಂದ ಬುಧವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
‘ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 11 ವರ್ಷವಾದರೂ ದೇಶದ ಕೋಟ್ಯಂತರ ಯುವಕರಿಗೆ ಇದುವರೆಗೆ ಉದ್ಯೋಗ ಸಿಕ್ಕಿಲ್ಲ. ಪ್ರಧಾನಿ ನರೇಂದ್ರ ಮೋದಿ ಕೇವಲ ಭರವಸೆ ನೀಡುತ್ತಿದ್ದಾರೆ’ ಎಂದು ದೂರಿದರು.
‘ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ರಕ್ತದಲ್ಲಿ ಪತ್ರ ಬರೆದು ಅಂಚೆ ಮೂಲಕ ಪ್ರಧಾನಿ ಮೋದಿಗೆ ಕಳುಹಿಸಿಕೊಡುತ್ತಿದ್ದೇವೆ. ಇನ್ನು ಮುಂದಾದರೂ ಯುವಕರಿಗೆ ಉದ್ಯೋಗ ಕಲ್ಪಿಸುವ ಯೋಜನೆಗಳನ್ನು ರೂಪಿಸಲಿ. ಕೋವಿಡ್, ಜಿಎಸ್‌ಟಿ ಸೇರಿದಂತೆ ಕೇಂದ್ರ ಸರ್ಕಾರದ ನೀತಿಗಳಿಂದಾಗಿ ಸಣ್ಣ ಕೈಗಾರಿಕೆಗಳು ಮುಚ್ಚಿ ಹೋಗಿವೆ. ಕೇಂದ್ರ ಸರ್ಕಾರ ಜನಪರ, ಪಾರದರ್ಶಕ ಆಡಳಿತ ನಡೆಸಲಿ, ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಲಿ’ ಎಂದು ಕಿಡಿಕಾರಿದರು.
‘ಧೂಡಾ’ ಅಧ್ಯಕ್ಷ ದಿನೇಶ್ ಶೆಟ್ಟಿ, ವರುಣ್, ನವೀನ್, ಮೆಹಬೂಬ್ ಬಾಷಾ, ಬಿಲಾಲ್, ಚಿರಂಜೀವಿ, ಗಣೇಶ್, ಸಮೀರ್, ಶಿವಶಂಕರ್, ಎಸ್.ಎಂ. ಕರೀಂ, ಸಂತೋಷ್, ಸೈಯದ್ ತಾಜ್, ಮುಸ್ತಾಕ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.