ADVERTISEMENT

ಬಿತ್ತನೆ ಬೀಜದ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಮೇ 2024, 7:11 IST
Last Updated 30 ಮೇ 2024, 7:11 IST
ರಾಜ್ಯ ಸರ್ಕಾರ ಬಿತ್ತನೆ ಬೀಜಗಳ ದರವನ್ನು ಹೆಚ್ಚು ಮಾಡಿದೆ ಎಂದು ಆರೋಪಿಸಿ ದಾವಣಗೆರೆ ರೈತ ಸಂಪರ್ಕ ಕೇಂದ್ರದ ಮುಂಭಾಗದಲ್ಲಿ ಬಿಜೆಪಿ ರೈತ ಮೋರ್ಚಾ ಸದಸ್ಯರು ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ
ರಾಜ್ಯ ಸರ್ಕಾರ ಬಿತ್ತನೆ ಬೀಜಗಳ ದರವನ್ನು ಹೆಚ್ಚು ಮಾಡಿದೆ ಎಂದು ಆರೋಪಿಸಿ ದಾವಣಗೆರೆ ರೈತ ಸಂಪರ್ಕ ಕೇಂದ್ರದ ಮುಂಭಾಗದಲ್ಲಿ ಬಿಜೆಪಿ ರೈತ ಮೋರ್ಚಾ ಸದಸ್ಯರು ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ರಾಜ್ಯ ಸರ್ಕಾರ ಬಿತ್ತನೆ ಬೀಜದ ಬೆಲೆ ಏರಿಕೆ ಮಾಡಿದೆ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾದಿಂದ ಬುಧವಾರ ಇಲ್ಲಿನ ಕೃಷಿ ಇಲಾಖೆಯ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಅವರಿಗೆ ಮನವಿ ಸಲ್ಲಿಸಲಾಯಿತು.

‘ಕಳೆದ ಹಂಗಾಮಿನಲ್ಲಿ ಭೀಕರ ಬರದಿಂದ ರೈತರು ತತ್ತರಿಸಿದ್ದು, ಸಾಲ ಸೋಲ ಮಾಡಿ ಬೆಳೆದ ಬೆಳೆಗಳು ಬಿರು ಬಿಸಿಲಿನ ಝಳಕ್ಕೆ ಒಣಗಿ ನಾಶವಾಗಿವೆ. ಕೊಳವೆಬಾವಿಗಳು ನೀರಿಲ್ಲದೆ ಬತ್ತಿ ಹೋಗಿವೆ. ಇಂತಹ ಶೋಚನೀಯ ಸ್ಥಿತಿಯಲ್ಲಿದ್ದ ರೈತ ಮುಂಗಾರು ಹಂಗಾಮಿನಲ್ಲಿ ಮಳೆ ಚೆನ್ನಾಗಿ ಬರುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಿಂದ ಮತ್ತು ಬಂದ ವರುಣದಿಂದ ಹರ್ಷಿತನಾಗಿ ಬೀಳು ಬಿದ್ದು ಜಮೀನು ಉಳುಮೆ ಮಾಡಿ, ಹಸನು ಮಾಡಿಕೊಂಡಿದ್ದಾನೆ. ಈ ಹೊತ್ತಿನಲ್ಲೇ ಬಿತ್ತನೆ ಬೀಜಗಳ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿರುವುದು ಖಂಡನೀಯ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ರಾಜಶೇಖರ್, ಕೊಳೇನಹಳ್ಳಿ ಬಿ.ಎಂ.ಸತೀಶ್, ಲೋಕಿಕೆರೆ ನಾಗರಾಜ್ ಮುಂತಾದವರು ಆರೋಪಿಸಿದರು.

ADVERTISEMENT

‘ಬಿತ್ತನೆ ಬೀಜದ ಹೆಚ್ಚಳದಿಂದಾಗಿ ಮುಕ್ತ ಮಾರುಕಟ್ಟೆಯಲ್ಲಿಯೂ ದರ ಭಾರಿ ಹೆಚ್ಚಳವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಂದು ಕೈಯಲ್ಲಿ ಗ್ಯಾರಂಟಿ ಕೊಟ್ಟು, ಮತ್ತೊಂದು ಕೈಯಲ್ಲಿ ಸುಲಿಗೆ ಮಾಡುತ್ತಿದೆ. ಬಿತ್ತನೆ ಬೀಜದ ಬೆಲೆ ಹೆಚ್ಚಿಸಿ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಗೊತ್ತಾಗದಂತೆ ರೈತನ ಜೇಬಿಗೆ ಕೈಹಾಕಿದೆ. ಇದು ಕಿಡಿಗೇಡಿತನದ ಪರಮಾವಧಿ’ ಎಂದು ಟೀಕಿಸಿದರು.

ಮಾಜಿ ಶಾಸಕ ಬಸವರಾಜನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ನಾಯ್ಕ್, ರಮೇಶನಾಯ್ಕ , ಬೇತೂರು ಸಂಗನಗೌಡ್ರು, ಅಣಬೇರು ಶಿವಪ್ರಕಾಶ್, ರಘುನಂದನ ಅಂಬರ್‌ಕರ್, ಆನೆಕೊಂಡ ರೇವಣಸಿದ್ದಪ್ಪ, ಅತಿಥ್ ಅಂಬರ್‌ಕರ್, ಪಿ.ಎಸ್. ಬಸವರಾಜು, ವೀರೇಶ ಪೈಲ್ವಾನ್, ಆರ್.ಎಲ್. ಶಿವಪ್ರಕಾಶ್, ಅಣಜಿ ಗುಡ್ಡೇಶ್, ಜಿ.ಎಸ್. ಶ್ಯಾಮ್, ಕೆ.ಜಿ.ಕಲ್ಲಪ್ಪ ಇತರರು ಪ್ರತಿಭಟನೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.