ADVERTISEMENT

ಎನ್‌ಪಿಎಸ್‌ ರದ್ದತಿಗೆ ಒತ್ತಾಯ: 7 ರಂದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 14:32 IST
Last Updated 5 ಡಿಸೆಂಬರ್ 2019, 14:32 IST

ದಾವಣಗೆರೆ: ಎನ್‌ಪಿಎಸ್‌ ಯೋಜನೆ ರದ್ದುಪಡಿಸಲು ಒತ್ತಾಯಿಸಿ ಡಿ.7ರಂದು ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘದಿಂದ ‘ರಕ್ತ ಕೊಟ್ಟೇವು ಪಿಂಚಣಿ ಬಿಡೇವು’ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ.ಶಿವಕುಮಾರ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಘದಿಂದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ರಾಷ್ಟ್ರೀಯ ಸಂಘದ ನೇತೃತ್ವದಲ್ಲಿ ಎಲ್ಲ ರಾಜ್ಯಗಳಲ್ಲಿ ಪ್ರತಿಭಟನೆ ನಡೆಯಲಿದೆ.‘ರಕ್ತ ಕೊಟ್ಟೇವು ಪಿಂಚಣಿ ಬಿಡೇವು’ ಎಂಬ ಹೋರಾಟದಡಿ ರಕ್ತದಾನ ಮಾಡಿ ರಕ್ತ ಸಂಗ್ರಹಿಸಲಾಗುವುದು. ಕಳೆದ ಬಾರಿ ಈ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಆದರೂ ಸರ್ಕಾರ ಗಮನಹರಿಸಿಲ್ಲ’ ಎಂದು ದೂರಿದರು.

ಅಂದು ಬೆಳಿಗ್ಗೆ ಹೈಸ್ಕೂಲ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಲಾಗುವುದು. ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ. ಫಾಲಾಕ್ಷಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ADVERTISEMENT

‘ಪಿಂಚಣಿಗಾಗಿ ನೌಕರರ ವೇತನದಿಂದ ಶೇ 10 ಕಡಿತಮಾಡಿ ಸರ್ಕಾರ ಶೇ 14 ರಷ್ಟು ವಂತಿಗೆ ಸೇರಿಸಿ ಸದ್ಯ ಷೇರು ಪೇಟೆಯಲ್ಲಿ ತೊಡಗಿಸುತ್ತಿದೆ. ಇದರಿಂದ ಈ ಹಣಕ್ಕೆ ಯಾವುದೇ ಭದ್ರತೆ ಇಲ್ಲ. ನೌಕರರ ಖಾತೆಯಲ್ಲಿ ಹಣ ಇಲ್ಲದಿದ್ದರೂ ಮಾತನಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಎನ್‌ಪಿಎಸ್‌ ರದ್ದುಪಡಿಸಿ ಹಳೆ ಪಿಂಚಣಿ ಮುಂದುವರಿಸಬೇಕು’ ಎಂದು ಒತ್ತಾಯಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ್‌ ಎಚ್‌.ಆರ್‌., ‘ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳ ನೌಕರರು ಸೇರಿ 15 ಸಾವಿರ ನೌಕರರು ಭಾಗವಹಿಸುವ ನಿರೀಕ್ಷೆ ಇದೆ. ಎಲ್ಲ ನೌಕರರು ಭಾಗವಹಿಸಬೇಕು’ ಎಂದು ಮನವಿ ಮಾಡಿದರು.

ಸಂಘದ ಮಂಜಪ್ಪ ಜಿ.ಎನ್‌., ಗುರುಮೂರ್ತಿ, ಶಿವಣ್ಣ ಬಿ., ವಿಶ್ವನಾಥ, ಪುನೀತ್‌ ಶಂಕರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.