ADVERTISEMENT

ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 3:57 IST
Last Updated 21 ಡಿಸೆಂಬರ್ 2020, 3:57 IST
ಅಡುಗೆ ಅನಿಲ ಬೆಲೆ ಹೆಚ್ಚಳ ಖಂಡಿಸಿ ಕೇಂದ್ರದ ವಿರುದ್ಧ ದಾವಣಗೆರೆಯ ಶಂಕರಲೀಲಾ ಗ್ಯಾಸ್ ಏಜೆನ್ಸಿ ಮುಂಭಾಗದಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರು ಭಾನುವಾರ ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ
ಅಡುಗೆ ಅನಿಲ ಬೆಲೆ ಹೆಚ್ಚಳ ಖಂಡಿಸಿ ಕೇಂದ್ರದ ವಿರುದ್ಧ ದಾವಣಗೆರೆಯ ಶಂಕರಲೀಲಾ ಗ್ಯಾಸ್ ಏಜೆನ್ಸಿ ಮುಂಭಾಗದಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರು ಭಾನುವಾರ ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ಇಲ್ಲಿನ ಎಂಸಿಸಿ ‘ಬಿ’ ಬ್ಲಾಕ್‌ನ ಶಂಕರಲೀಲಾ ಗ್ಯಾಸ್ ಏಜೆನ್ಸಿ ಎದುರು ಭಾನುವಾರ ಪ್ರತಿಭಟನೆ ನಡೆಯಿತು.

ಸಿಲಿಂಡರ್‌ಗಳನ್ನು ಪ್ರದರ್ಶಿಸಿದ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ. ಮಂಜಪ್ಪ, ‘ಬೆಲೆ ನಿಯಂತ್ರಿಸುವುದಾಗಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟ ಮಾತನ್ನು ತಪ್ಪಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ₹ 280 ಇದ್ದ ಸಿಲಿಂಡರ್ ಬೆಲೆ ಈಗ ₹ 780 ಆಗಿದೆ. ಒಂದೇ ತಿಂಗಳಲ್ಲಿ ಅಡುಗೆ ಅನಿಲದ ಬೆಲೆಯನ್ನು ಮೋದಿ ಸರ್ಕಾರ ಎರಡು ಬಾರಿ ಹೆಚ್ಚಿಸಿದೆ. ₹ 80 ಇದ್ದಅಡುಗೆ ಎಣ್ಣೆಯ ಬೆಲೆ ₹ 130ಕ್ಕೆ ಹೆಚ್ಚಿಸುವ ಮೂಲಕ ಕೊರೊನಾ ಸಂಕಷ್ಟದಲ್ಲಿ ಜನರ ಗಾಯದ ಮೇಲೆ ಬರೆ ಎಳೆದಿದೆ’ ಎಂದು ಆರೋಪಿಸಿದರು.

ADVERTISEMENT

‘ರೈತ ವಿರೋಧಿ ಕಾಯ್ದೆಗಳ ವಿರುದ್ಧ ನವದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಲೋಕಪಾಲ್ ಮಸೂದೆ ವಿರುದ್ಧ ಹೋರಾಟ ನಡೆಸಿದ ಅಣ್ಣಾ ಹಜಾರೆ, ಬಾಬಾ ರಾಮದೇವ್ ಅವರು ಈಗ ಎಲ್ಲಿ ಹೋದರು ಎಂದು ಪ್ರಶ್ನಿಸಿದ ಮಂಜಪ್ಪ, ಕಪ್ಪು ಹಣ ಹೊರತರುತ್ತೇನೆ ಎಂದು ಹೇಳಿ ಅಧಿಕಾರಕ್ಕೆ ಬಂದ ಮೋದಿ ಅವರು ಜನರಿಗೆ ಕನಿಷ್ಠ ಸವಲತ್ತನ್ನು ನೀಡಿಲ್ಲ’ ಎಂದು ದೂರಿದರು.

ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ‘ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಕಚ್ಚಾ ತೈಲದ ಬೆಲೆ ಅತೀ ಹೆಚ್ಚಿದ್ದಾಗಲೂ ₹ 50ಕ್ಕೆ ಲೀಟರ್‌ನಂತೆ ಪೆಟ್ರೋಲ್ ಡೀಸೆಲ್ ಮಾರಾಟವಾಗುತ್ತಿತ್ತು. ಆದರೆ, ಈಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ, ಮೋದಿ ಸರ್ಕಾರ ಲೀಟರ್‌ಗೆ ₹ 85 ರಂತೆ ಮಾರಾಟ ಮಾಡುತ್ತಿದೆ. ಯುಪಿಎ ಸರ್ಕಾರವಿದ್ದಾಗ ಎಷ್ಟು ಬೆಲೆ ಇತ್ತು. ಈಗ ಬೆಲೆಗಳು ಎಷ್ಟಿವೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಬೇಕು’ ಎಂದು ಆಗ್ರಹಿಸಿದರು.

‘ವಿಮಾನಯಾನ, ರೈಲ್ವೆ, ಎಲ್‌ಐಸಿ ಷೇರುಗಳನ್ನು ಖಾಸಗಿಗೆ ವಹಿಸಿದ್ದು, ಸರ್ಕಾರದ ಸಂಸ್ಥೆಯಾದ ಬಿಎಸ್‌ಎನ್ಎಲ್ ಅಧೋಗತಿಗೆ ತಲುಪಲು ಮೋದಿ ಸರ್ಕಾರ ಕಾರಣ. ಕೇಂದ್ರ ಸರ್ಕಾರವನ್ನೇ ಅಂಬಾನಿ, ಅದಾನಿಯಂತಹವರಿಗೆ ಮಾರಾಟ ಮಾಡಿದರೆ ಸಾರ್ಥಕವಾಗುತ್ತದೆ’ ಎಂದು ಟೀಕಿಸಿದರು.

ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್, ‘ಅಡುಗೆ ಅನಿಲ ಹಾಗೂ ಖಾದ್ಯದ ಎಣ್ಣೆಯ ಬೆಲೆ ದುಪ್ಪಟ್ಟಾಗಿದ್ದು, ನರೇಂದ್ರ ಮೋದಿಯವರಿಗೆ ಮಾನವೀಯತೆ ಇಲ್ಲವೇ? ಪರಿಸ್ಥಿತಿ ಹೀಗೆ ಮುಂದುವರಿದರೆ ಮಹಿಳೆಯರು ಸೌದೆಯಿಂದ ಒಲೆ ಹಚ್ಚಿ ಅಡುಗೆ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್, ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಚಮನ್ ಸಾಬ್ ಮಾತನಾಡಿದರು.

ಮುಖಂಡರಾದ ಸೀಮೆಎಣ್ಣೆ ಮಲ್ಲೇಶ್, ಮೈನುದ್ದೀನ್, ಮುಜಾಹಿದ್, ದಾಕ್ಷಾಯಣಮ್ಮ, ಶುಭಮಂಗಳ, ಡೋಲಿ ಚಂದ್ರು, ಯುವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.