ADVERTISEMENT

ನಿವೇಶನಕ್ಕಾಗಿ ಹೋರಾಟ ನಡೆಸುತ್ತಿದ್ದ ಪ್ರತಿಭಟನಕಾರರ ಗುಡಿಸಲುಗಳು ಭಸ್ಮ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2023, 4:34 IST
Last Updated 8 ಏಪ್ರಿಲ್ 2023, 4:34 IST
ಸಂತೇಬೆನ್ನೂರು ಸಮೀಪದ ಹಿರೇಕೋಗಲೂರು ಗೋಮಾಳದಲ್ಲಿ ಗುರುವಾರ ತಡರಾತ್ರಿ ಬೆಂಕಿಯ ಕೆನ್ನಾಲಿಗಿಗೆ ಸುಟ್ಟು ಕರಕಲಾದ ಗುಡಿಸಲುಗಳ ಅವಶೇಷಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ವೀಕ್ಷಿಸಿದರು.
ಸಂತೇಬೆನ್ನೂರು ಸಮೀಪದ ಹಿರೇಕೋಗಲೂರು ಗೋಮಾಳದಲ್ಲಿ ಗುರುವಾರ ತಡರಾತ್ರಿ ಬೆಂಕಿಯ ಕೆನ್ನಾಲಿಗಿಗೆ ಸುಟ್ಟು ಕರಕಲಾದ ಗುಡಿಸಲುಗಳ ಅವಶೇಷಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ವೀಕ್ಷಿಸಿದರು.   

ಸಂತೇಬೆನ್ನೂರು: ಸಮೀಪದ ಹಿರೇಕೋಗಲೂರು ಗೋಮಾಳದಲ್ಲಿ ಕಳೆದ ಮೂರು ತಿಂಗಳಿಂದ ನಿವೇಶನ ಮಂಜೂರಾತಿಗೆ ಪ್ರತಿಭಟನೆ ನಡೆಸುತ್ತಾ ಗುಡಿಸಲು ನಿರ್ಮಿಸಿ ವಾಸವಾಗಿದ್ದ ನಿವೇಶನರಹಿತರ ಗುಡಿಸಲುಗಳು ಗುರುವಾರ ತಡರಾತ್ರಿ ಬೆಂಕಿಯಲ್ಲಿ ಉರಿದು ಭಸ್ಮವಾಗಿದ್ದು, ಕಿಡಿಗೇಡಿಗಳ ದುಷ್ಕೃತ್ಯಕ್ಕೆ ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ವೆ ನಂ. 46ರ ಗೋಮಾಳದಲ್ಲಿ ನಿವೇಶನ ಮಂಜೂರು ಮಾಡಲು ಒತ್ತಾಯಿಸಿ ದಲಿತರು ಹಾಗೂ ಹಿಂದುಳಿದ ವರ್ಗದವರು ಸುಮಾರು 200 ಗುಡಿಸಲುಗಳನ್ನು ಕಟ್ಟಿಕೊಂಡಿದ್ದರು. ಅಲ್ಲಿಯೇ ವಾಸವಿದ್ದು, ಮೂರು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಗುರುವಾರ ರಾತ್ರಿ ಕರಿಯಮ್ಮನ ಹಬ್ಬದ ಪ್ರಯುಕ್ತ ಹಲವರು ಗ್ರಾಮದ ದೇಗುಲಕ್ಕೆ ತೆರಳಿದ್ದರು. ಇದೇ ಅವಕಾಶ ಬಳಸಿಕೊಂಡು ಪ್ರತಿಭಟನೆ ಹತ್ತಿಕ್ಕಲು ಗುಡಿಸಲಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. 26 ಗುಡಿಸಲು ಭಸ್ಮವಾಗಿವೆ ಎಂದು ಸಂತೇಬೆನ್ನೂರು ಹೋಬಳಿ ರೈತ ಸಂಘದ ಅಧ್ಯಕ್ಷ ಎನ್.ಆರ್. ಕುಮಾರ್ ದೂರಿದರು.

ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಉಳಿದ ಗುಡಿಸಲುಗಳಿಗೆ ಬೆಂಕಿ ಆವರಿಸದಂತೆ ತಡೆಯಲು ತಡರಾತ್ರಿವರೆಗೂ ಪ್ರಯತ್ನಿಸಿದರು. ಸಂತೇಬೆನ್ನೂರು ಪೊಲೀಸ್ ಠಾಣೆ ಎಸ್‌ಐ ದೇವರಾಜ್ ಹಾಗೂ ಸಿಬ್ಬಂದಿ ಹಾಜರಿದ್ದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಹಾಗೂ ತಹಶೀಲ್ದಾರ್‌ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿ ತನಿಖೆಗಾಗಿ ಸಾಕ್ಷಿ ಸಂಗ್ರಹಿಸಿದರು. ಸ್ಥಳದಲ್ಲಿ ಪೊಲೀಸ್ ಪಡೆ ನಿಯೋಜಿಸಲಾಗಿದೆ.

ADVERTISEMENT

ಕಳೆದ ತಿಂಗಳು ತಹಶೀಲ್ದಾರ್ ಭೇಟಿ ನೀಡಿ ನಿವೇಶನ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದರು. ಕಳೆದ ಮೂರು ತಿಂಗಳು ಇಲ್ಲಿಯೇ ವಾಸವಿದ್ದರೂ ವಿದ್ಯುತ್ ಸೌಲಭ್ಯ ಇಲ್ಲ. ಕುಡಿಯುವ ನೀರು ಇಲ್ಲ. ರಸ್ತೆ ಪಕ್ಕದಲ್ಲಿ ಈಗಿರುವ ಗುಡಿಸಲುಗಳ ಜಾಗದಲ್ಲಿಯೇ ನಿವೇಶನ ಮಂಜೂರು ಮಾಡಬೇಕು ಎಂದು ಗುಡಿಸಲುಗಳನ್ನು ಕಳೆದುಕೊಂಡ ನಿವಾಸಿಗಳು ಒತ್ತಾಯಿಸಿದರು.

ರೈತ ಸಂಘದ ಹುಚ್ವವ್ವನಹಳ್ಳಿ ಮಂಜುನಾಥ್, ಯಲೋದಹಳ್ಳಿ ರವಿಕುಮಾರ್, ರಾಷ್ಟ್ರೀಯ ಪ್ರಬುದ್ಧ ಸೇನೆ ಸದಸ್ಯ ಪ್ರವೀಣ್, ಸುರೇಶ್, ಚಂದ್ರಪ್ಪ, ನಾಗರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.