ADVERTISEMENT

ಹರಿಹರ: ಸೇತುವೆ ಮೇಲಿನ ಮಣ್ಣು ತೆರವು

ನದಿಗೆ ಸುರಿದಿದ್ದಕ್ಕೆ ಸಾರ್ವಜನಿಕರ ಆಕ್ರೋಶ; ನೋಟಿಸ್ ಜಾರಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 4:55 IST
Last Updated 3 ಸೆಪ್ಟೆಂಬರ್ 2025, 4:55 IST
ಹರಿಹರದ ತುಂಗಭದ್ರಾ ಹೊಸ ಸೇತುವೆ ಮೇಲಿನ ಮಣ್ಣನ್ನು ನದಿಗೆ ಸುರಿಯುತ್ತಿರುವ ಪಿಡಬ್ಲ್ಯುಡಿ ಸಿಬ್ಬಂದಿ
ಹರಿಹರದ ತುಂಗಭದ್ರಾ ಹೊಸ ಸೇತುವೆ ಮೇಲಿನ ಮಣ್ಣನ್ನು ನದಿಗೆ ಸುರಿಯುತ್ತಿರುವ ಪಿಡಬ್ಲ್ಯುಡಿ ಸಿಬ್ಬಂದಿ   

ಹರಿಹರ: ಇಲ್ಲಿನ ತುಂಗಭದ್ರಾ ನದಿಯ ಹೊಸ ಸೇತುವೆ ಮೇಲೆ ಶೇಖರವಾಗಿದ್ದ ಮಣ್ಣನ್ನು ಪಿಡಬ್ಲ್ಯುಡಿ ಇಲಾಖೆ ಸಿಬ್ಬಂದಿ ಮಂಗಳವಾರ ತೆರವುಗೊಳಿಸಿದರು. 

ಈ ಸೇತುವೆ ಮೇಲೆ ಮಣ್ಣು ಶೇಖರಗೊಂಡು ಮಳೆ ನೀರು ನಿಂತು ಸೇತುವೆಗೆ ಧಕ್ಕೆಯಾಗುತ್ತಿರುವ ಕುರಿತು ಸೆ. 2ರಂದು ಮಂಗಳವಾರ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ‘ಸೇತುವೆ ಮೇಲಿಂದ ಹರಿಯುತ್ತಿಲ್ಲ ಮಳೆ ನೀರು’ ಶೀರ್ಷಿಕೆಯಡಿ ವರದಿ ಪ್ರಕಟಗೊಂಡಿತ್ತು. ಇದರಿಂದ ತಕ್ಷಣ ಎಚ್ಚೆತ್ತ ಪಿಡಬ್ಲ್ಯುಡಿ ಇಲಾಖೆ ಸಿಬ್ಬಂದಿ ಸೇತುವೆ ಮೇಲಿನ ಮಣ್ಣು ತೆರವುಗೊಳಿಸಿ, ಚಿಕ್ಕಪುಟ್ಟ ಗಿಡಗಳ ತೆರವು ಕಾರ್ಯಕ್ಕೆ ಚಾಲನೆ ನೀಡಿದರು.

292 ಮೀ. ಉದ್ದದ ಈ ಸೇತುವೆ ಇಕ್ಕೆಲಗಳಲ್ಲಿ ವರ್ಷದಿಂದ ಹಲವು ಟ್ರ್ಯಾಕ್ಟರ್ ಲೋಡ್‌ನಷ್ಟು ಮಣ್ಣು ಶೇಖರಗೊಂಡಿದೆ. ಇದರಲ್ಲಿ ಮಂಗಳವಾರ ಎರಡು ಟ್ರ್ಯಾಕ್ಟರ್ ಲೋಡ್‌ನಷ್ಟು ಮಣ್ಣು, ಕಸ, ಕಡ್ಡಿಯನ್ನು ತೆರವುಗೊಳಿಸಲಾಯಿತು.

ADVERTISEMENT

ಆದರೆ, ಸೇತುವೆ ಮಣ್ಣನ್ನು ತೆಗೆದು ಬೇರೆಡೆಗೆ ಸಾಗಿಸುವ ಬದಲು ನದಿಗೆ ಸುರಿಯುವ ಮೂಲಕ ಪಿಡಬ್ಲ್ಯುಡಿ ಇಲಾಖೆ ಸಿಬ್ಬಂದಿಯೇ ಜಲಮಾಲಿನ್ಯ ಮಾಡುತ್ತಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಪಿಡಬ್ಲ್ಯುಡಿ ಎಇಇ ವಿರುದ್ಧ ನೋಟಿಸ್ ಜಾರಿ ಮಾಡಿದೆ. 

‘ಸೇತುವೆ ಮೇಲಿನ ಮಣ್ಣನ್ನು ನದಿಗೆ ಸುರಿಯುತ್ತಿರುವ ಫೋಟೊಗಳನ್ನು ಪರಿಶೀಲಿಸಿದ್ದೇನೆ. ಕಾರಣ ಕೇಳಿ ಹಾಗೂ ಇಲಾಖೆಯಿಂದ ಕೈಗೊಂಡ ಕ್ರಮದ ಕುರಿತು ಮಾಹಿತಿ ನೀಡುವಂತೆ ಹರಿಹರದ ಪಿಡಬ್ಲ್ಯುಡಿ ಎಇಇಗೆ ನೋಟಿಸ್ ಜಾರಿ ಮಾಡಲಾಗಿದೆ’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ರಾಜಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಹರಿಹರದ ತುಂಗಭದ್ರಾ ಹೊಸ ಸೇತುವೆ ಮೇಲಿನ ಮಣ್ಣನ್ನು ನದಿಗೆ ಸುರಿಯುತ್ತಿರುವ ಪಿಡಬ್ಲ್ಯುಡಿ ಸಿಬ್ಬಂದಿ 
ಹರಿಹರ: ಹರಿಹರದ ತುಂಗಭದ್ರ ಹೊಸ ಸೇತುವೆ ಮೇಲಿನ ಮಣ್ಣನ್ನು ಶೇಖರಿಸುತ್ತಿರುವ ಪಿಡಬ್ಲುö್ಯಡಿ ಸಿಬ್ಬಂದಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.